Advertisement

ಅಹೋರಾತ್ರಿ ಧರಣಿ ನಡುವೆ ರೈತ ಅಸ್ವಸ್ಥ: ಸ್ಥಳದಲ್ಲೇ ಚಿಕಿತ್ಸೆ

10:09 AM Dec 16, 2019 | sudhir |

ಯಾದಗಿರಿ: ವಡಗೇರಾ ತಾಲೂಕಿನ ಸಂಗಮ ಸೇತುವೆ ಮೇಲೆ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ 6ನೇ ದಿನ ಪೂರೈಸಿದ್ದು, ಅಧಿಕಾರಿಗಳ ಸ್ಪಂದನೆ ಸಿಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಧರಣಿ ನಿರತ ರೈತ ಮರೆಪ್ಪ ಮೇಸ್ತ್ರಿ ಧರಣಿ ಸ್ಥಳದಲ್ಲಿಯೇ ಅಸ್ವಸ್ಥರಾಗಿದ್ದು ವೈದ್ಯರು ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದ್ದಾರೆ.

Advertisement

ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಕನಿಷ್ಠ ಸೌಜನ್ಯಕ್ಕಾದರೂ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾಗಿಲ್ಲ. ನಮಗೆ ನ್ಯಾಯ ಒದಗಿಸಿ ಕೊಡುವ ಮನಸ್ಸು ಯಾರಿಗೂ ಇಲ್ಲವೇ ಎಂದು ರೈತರು ಗೋಳಿಟ್ಟಿದ್ದು ರೈತರ ಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರಕ್ಕೆ ರೈತರ ಕೂಗು ಕೇಳದಂತಾಗಿದೆ.

ಶಕ್ತಿನಗರ ವಿದ್ಯುತ್ ಶಾಖೋತ್ಪನ್ನ ಕೇಂದ್ರಕ್ಕೆ ನೀರು ಸರಬರಾಜಿಗಾಗಿ ಕೃಷ್ಣಾ ನದಿಗೆ ಅಡ್ಡಲಾಗಿದೆ ಗುರ್ಜಾಪು- ಸಂಗಮ ಮಧ್ಯದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ವಿದ್ಯುತ್ ಕೇಂದ್ರಕ್ಕೆ ಬೇಕಾಗಿರುವ ನೀರುನ್ನು 195 ಗೇಟ್ ಹೊಂದಿರುವ ಬೃಹತ್ ಸೇತುವೆ ಮುಚ್ಚಿ ನೀರು ಸಂಗ್ರಹಿಸಲಾಗಿದೆ. ಆದರೇ ಇದರಿಂದಾಗಿ ಶಿವಪೂರ, ಗೋನಾಳ ಗ್ರಾಮದ ರೈತರ ಸುಮಾರು 70 ಎಕರೆಯಷ್ಟು ಜಮೀನುಗಳಿಗೆ ನೀರು ನುಗ್ಗುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಜಮೀನಿಗೆ ತೆರಳಲು ಆಗದ ಪರಿಸ್ಥಿತಿ ಎದುರಾಗಿದೆ.

ರೈತರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು ಸಮರ್ಪಕವಾಗಿ ಸ್ಪಂದಿಸದೆ ಹಾರಿಕೆ ಉತ್ತರ ನೀಡುತ್ತಿದ್ದರಿಂದ ಬೇಸತ್ತಿರುವ ರೈತರು ಕೊನೆಗೆ ಧರಣಿಯ ಹಾದಿ ಹಿಡಿಯುವಂತಾಗಿದೆ. ರೈತ ದೇಶದ ಬೆನ್ನೆಲುಬು ಎಂಬೂದು ಭಾಷಣಗಳಿಗೆ ಸೀಮಿತವಾಗಿದೆ. ರೈತರ ಪರ ಕಾಳಜಿಯಿರುವ ಯಾವೊಬ್ಬ ಅಧಿಕಾರಿಯೂ ಜಿಲ್ಲೆಯಲ್ಲಿಲ್ಲವೇ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಉತ್ಪಾದನ ಕೇಂದ್ರ ಅಧಿಕಾರಿಗಳಿಗೆ ತಾವೇ ಜಮೀನು ಖರೀದಿಸಿ ಪರಿಹಾರ ನೀಡಿ ಇಲ್ಲ, ಕಳೆದ 3 ವರ್ಷದ ಬೆಳೆಯ ಪರಿಹಾರ ನೀಡುವುದು ಹಾಗೂ ಜಮೀನುಗಳಿಗೆ ತೆರಳುವುದಕ್ಕೆ ಸೂಕ್ತ ವ್ಯವಸ್ಥೆಯನ್ನಾದರೂ ಮಾಡಿಕೊಡುವಂತೆ ರೈತರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಧರಣಿ ಆರಂಭಗೊAಡು 6 ದಿನವಾದರೂ ನಮಗೆ ಯಾರು ಸ್ಪಂದಿಸುತ್ತಿಲ್ಲ, ನಮಗೆ ನ್ಯಾಯ ಸಿಗುವವರಿಗೊ ನಾವು ಇಲ್ಲಿಂದ ಕದಲುವುದಿಲ್ಲ ಎನ್ನುತ್ತಾರೆ ರೈತರು.

Advertisement

ಆರ್‌ಟಿಪಿಎಸ್ ಅಧಿಕಾರಿಗಳು ಮೌಖಿಕವಾಗಿ ಧರಣಿ ನಿಲ್ಲಿಸಲು ಒತ್ತಡ ಹೇರುತ್ತಿದ್ದು 15 ದಿನಗಳ ನಂತರ ಪರಿಹಾರ ಧನ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಆದರೇ ಲಿಖಿತ ರೂಪದಲ್ಲಿ ಭರವಸೆ ನೀಡಿದರೇ ಮಾತ್ರ ಧರಣಿ ಕೈಬಿಡುತ್ತೇವೆ ಎನ್ನುತ್ತಾರೆ ರೈತರು.

ಬಸವರಾಜ ಮಾಲಿ ಪಾಟೀಲ, ಶ್ರೀನಿವಾಸ ಕಲಾಲ್. ರಾಜಪ್ಪ ಗೌಡ ಮಾಲಿ ಪಾಟೀಲ್, ಗುರುರಾಜ್ ಸಾಹುಕಾರ, ಹಿರಣ್ಣ ಕಲಾಲ್ ಸೇರಿದಂತೆ ರೈತರು ಹಾಗೂ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಶಾಸಕರಿಗಿಲ್ಲವೇ ಜವಾಬ್ದಾರಿ?: ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯ ರೈತರು ತಮಗಾಗಿರುವ ಅನ್ಯಾಯವನ್ನು ಖಂಡಿಸಿ, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಧರಣಿ ಆರಂಭಿಸಿದ್ದು, ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ರೈತರ ಸಮಸ್ಯೆಯನ್ನು ಆಲಿಸಿ ಪರಿಹಾರ ಕಲ್ಪಿಸುವ ಕಾರ್ಯದಲ್ಲಿ ಕಾಳಜಿವಹಿಸಬೇಕಿತ್ತು. ಆದರೇ ಶಾಸಕರು ಸಹ ಈವರೆಗೆ ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟ ಕೇಳುವ ಗೋಜಿಗೆ ಹೋಗಿಲ್ಲ ಎನ್ನುವ ಅಸಮಾಧಾನವೂ ಇಲ್ಲಿನ ರೈತರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next