ಆಳಂದ: ದೆಹಲಿಯಲ್ಲಿ ಕಳೆದ ಒಂದೂ ವರೆ ವರ್ಷದಿಂದಲೂ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರಗಳತ್ತ ಬೆರಳು ತೋರದೇ, ಕೇಂದ್ರ ಸರ್ಕಾರವೇ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಗುರುಭವನ ಮುಂಭಾಗದ ರಾಜ್ಯ ಹೆದ್ದಾರಿ ಮೇಲೆ ಶನಿವಾರ ಸಂಯುಕ್ತ ಕಿಸಾನ್ ಮೋರ್ಚಾ ಕೈಗೊಂಡಿದ್ದ ದೆಹಲಿಯ ರೈತರ ಹೋರಾಟದ ವಿಜಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೆಹಲಿ ಹೋರಾಟದಲ್ಲಿ 700ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ. ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳು ಈಗಲೂ ನ್ಯಾಯ ಕೇಳುತ್ತಿವೆ. ರೈತರ ಅಹವಾಲುಗಳಿಗೆ ಸರ್ಕಾರ ಹಿಂದೆಯೇ ಸ್ಪಂದಿಸಿದ್ದರೆ ಹಾಗೂ ಅವರ ಕಳವಳವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಬಹುಶಃ ಈ ಜೀವಗಳನ್ನು ಉಳಿಸಬಹುದಿತ್ತು. ಆದರೆ ಸರ್ಕಾರದ ವಿಳಂಬ ನೀತಿಯಿಂದಾಗಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ತುರ್ತಾಗಿ ಸರ್ಕಾರ ವರದಿ ತರಿಸಿಕೊಂಡು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದೆಹಲಿ ರೈತರ ಹೋರಾಟಕ್ಕೆ ಬೆಂಬಲಿಸಿ ಆಳಂದದಲ್ಲೂ ತಿಂಗಳ ಕಾಲ ಮೌಲಾ ಮುಲ್ಲಾ ನೇತೃತ್ವದಲ್ಲಿ ನಿರಂತರ ಹೋರಾಟವನ್ನು ದೆಹಲಿಗೆ ವಿಸ್ತರಿಸಿ ಹೋರಾಟ ನಡೆದಿತ್ತು. ಈ ವೇಳೆ ಕೇಂದ್ರ ಸರ್ಕಾರ ಕೊಂಚವೂ ಕರುಣೆ ತೋರದೆ ಕಾಲಹರಣ ಮಾಡಿದ್ದರಿಂದ ರೈತರ ಜೀವಬಲಿಯಾಗಿದೆ. ಮೃತಪಟ್ಟ ರೈತರ ಕುಟುಂಬದವರು ಆತ್ಮ ಸ್ಥೈರ್ಯ ಕಳೆದುಕೊಳ್ಳದೆ, ಧೈರ್ಯದಿಂದ ಮುಂದುವರಿಯಬೇಕು ಎಂದು ಹೇಳಿದರು.
ತಾಲೂಕಿನಲ್ಲೂ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ಎಕರೆಗೆ 20 ಸಾವಿರ ರೂ. ಪರಿಹಾರ ಒದಗಿಸಬೇಕು. ಪಂಪಸೆಟ್‌ಗಳಿಗೆ ನಿರಂತರ ವಿದ್ಯುತ್ ಉಚಿತವಾಗಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೊಳಿಸಿ ಕಾರ್ಮಿಕರಿಗೆ ಸಕಾಲಕ್ಕೆ ಕೆಲಸ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ತಾಲೂಕು ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ತಡೋಳಾ ಗ್ರಾಪಂ ಅಧ್ಯಕ್ಷ ಮೈಲಾರಿ ಜೋಗೆ, ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಜಾನೆ, ಕಲ್ಯಾಣಿ ತುಕಾಣೆ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಹಿಂದೇಟು ಹಾಕಿ ಕೊನೆಗೆ ತಪ್ಪಿನ ಅರಿವಾಗಿ ತನ್ನ ನಿರ್ಧಾರ ಹಿಂದಕ್ಕೆ ಪಡೆದುಕೊಂಡಿದ್ದು, ರೈತರ ಶಕ್ತಿ ಪ್ರದರ್ಶನವೇ ಕಾರಣವಾಗಿದೆ. ಆದ್ದರಿಂದ ರೈತರು ತಮ್ಮ ಹಕ್ಕು, ಬೇಡಿಕೆ, ನ್ಯಾಯಕ್ಕಾಗಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದರು.
ಕಲ್ಯಾಣಿ ತುಕಾಣೆ ಮಾತನಾಡಿ, ಇಂದಿಗೂ ಎಂದೆಂದಿಗೂ ಗೆಲವು ನಮ್ಮದೇ ಎಂಬ ಕ್ರಾಂತಿ ಗೀತೆಗೆ ಮುಖಂಡರು ಕುಣಿದು, ರೈತರಿಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ನಂತರ ಹೂ ಹಾರಿಸಿ ಲಾಡು ಹಂಚಿ ಸಂಭ್ರಮಿಸಿದರು. ಮುಖಂಡ ಫಕ್ರೋದ್ದೀನ್ ಗೋಳಾ, ಪುರಸಭೆ ಸದಸ್ಯ ಸೈಫಾನ್ ಜವಳೆ, ಆಶ್ಪಾಕ್ ಮುಲ್ಲಾ, ಮಹಾವೀರ ಕಾಂಬಳೆ ಮತ್ತಿತರರು ಪಾಲ್ಗೊಂಡಿದ್ದರು.