Advertisement

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

07:04 PM Aug 31, 2020 | sudhir |

ಬೆಂಗಳೂರು : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ರಕ್ಷಣಾ, ಆರ್ಥಿಕ, ವಿದೇಶಾಂಗ ವ್ಯವಹಾರ ಸಚಿವರಾಗಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು.

ರಾಷ್ಟ್ರಪತಿಗಳಾಗಿ ಅವರು ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು.

ದೂರದೃಷ್ಟಿಯುಳ್ಳವರಾಗಿದ್ದ ಅವರು ಭಾರತ ಕಂಡ ಅತ್ಯುತ್ತಮ ಸಂಸದ ಹಾಗೂ ಸಮರ್ಥ ರಾಜಕಾರಣಿ . ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ ಎಂದಿರುವ ಮುಖ್ಯಮಂತ್ರಿಗಳು, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬಕ್ಕೆ ದು:ಖ ಭರಿಸುವ ಶಕಿಯನ್ನು ಭಗವಂತ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ರಾಷ್ಟ್ರಪತಿ ನಿಧಾನಕ್ಕೆ ಗಣ್ಯರಿಂದ ಸಂತಾಪ :

Advertisement

ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಿರಿಯ ರಾಜಕಾರಣಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದೇನೆ. ಇಂತಹ ಮಹಾನ್ ಚೇತನದ ಅಗಲಿಕೆಯಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಸೌಮ್ಯ ವ್ಯಕ್ತಿತ್ವದ ಪ್ರಣಬ್ ಮುಖರ್ಜಿ ಅವರು ಈ ದೇಶ ಕಂಡ ಅಪರೂಪದ ರಾಜಕಾರಣಿ. ಪಕ್ಷಾತೀತವಾಗಿ ಎಲ್ಲರ ಪ್ರೀತಿಗೆ ಭಾಜನರಾಗಿದ್ದ ಅವರ ರಾಜಕೀಯ ಆದರ್ಶ ಎಲ್ಲರಿಗೂ ಮಾದರಿಯಾಗಿತ್ತು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
– ಹೆಚ್. ಕುಮಾರಸ್ವಾಮಿ

‘ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸೇವೆ ಸಲ್ಲಿಸಿದ ಮಹಾನ್ ನಾಯಕ.
ಯುಪಿಎ ಸರ್ಕಾರದಲ್ಲಿ ಪ್ರಮುಖ ಸಚಿವಾಲಯದ ಹುದ್ದೆ ಅಲಂಕರಿಸಿ, ನಂತರ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಚಿಂತನೆ, ಕೆಲಸ ಹಾಗೂ ಸೇವೆಯಿಂದ ದೇಶದ ಸರ್ವಶ್ರೇಷ್ಠ ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದವರು.
ಗಾಂಧಿ ಅವರ ಚಿಂತನೆಯನ್ನು ಅಳವಡಿಸಿಕೊಂಡಿದ್ದ ಪ್ರಣಬ್ ಮುಖರ್ಜಿ ಅವರನ್ನು ‘Man for All Seasons’ ಎಂದೇ ಬಣ್ಣಿಸಲಾಗುತ್ತಿತ್ತು. ದೇಶದ ಇತಿಹಾಸ, ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ಮಹಾನ್ ನಾಯಕನನ್ನು ನಾವಿಂದು ಕಳೆದುಕೊಂಡಿದ್ದೇವೆ.
ಅವರ ಅಗಲಿಕೆಯ ನೋವನ್ನು ಅವರ ಕುಟುಂಬ ಸದಸ್ಯರು ಸೇರಿದಂತೆ ಅವರ ಅಪಾರ ಅಭಿಮಾನಿ ಬಳಗಕ್ಕೆ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಿ.ಕೆ ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
– ಡಿ.ಕೆ. ಶಿವಕುಮಾರ್

ಮಾಜಿ ರಾಷ್ಟ್ರಪತಿಗಳು, ಹಿರಿಯ ಮುತ್ಸದ್ದಿಗಳು ಆಗಿದ್ದ ಪ್ರಣಬ್ ಮುಖರ್ಜಿಯವರು ನಮ್ಮನ್ನು ಅಗಲಿರುವುದು ದುರ್ದೈವ.
ಶ್ರೀಯುತರ ಅಗಲಿಕೆಯಿಂದಾಗಿ ನಾವೆಲ್ಲಾ ಒಬ್ಬ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ರಾಷ್ಟ್ರದ ಹಿತ ಕಾಯುವ ಸಂದರ್ಭದಲ್ಲಿ ಅತ್ಯಂತ ಗಟ್ಟಿ ನಿಲುವನ್ನು ತೆಗೆದುಕೊಳ್ಳುತ್ತಿದ್ದ ದಿವಂಗತರು, ಯಾವುದೇ ಸಂದರ್ಭದಲ್ಲಿಯೂ ತತ್ವನಿಷ್ಠ ಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರು ಕೇಂದ್ರ ಸಚಿವರಾಗಿದ್ದಾಗ ಭಾರತದ ಹಿರಿಮೆ ಗರಿಮೆಗಳನ್ನು ಹಲವು ಸಂದರ್ಭಗಳಲ್ಲಿ ಅಂತರಾಷ್ಟ್ರೀಯ ಮಟ್ಟಗಳಲ್ಲಿ ಎತ್ತಿಹಿಡಿದ ಶ್ರೇಯಸ್ಸು ಅವರಿಗೆ ಸೇರಿದೆ.
ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಮತ್ತು ಬಂಧು ಮಿತ್ರರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
– ಶ್ರೀ ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ

ಭಾರತದ 13ನೇ ರಾಷ್ಟ್ರಪತಿಯಾಗಿ, ದೇಶದ ಆರ್ಥಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ವಿಧಿವಶರಾಗಿರುವುದು ಬಹಳ ನೋವಿನ ಸಂಗತಿ.
ಇವರದ್ದು ಸಂಸತ್ತಿನಲ್ಲಿ ಐದು ದಶಕಗಳ ಕಾಲದ ವೃತ್ತಿಜೀವನವಾಗಿತ್ತು. ಇವರು ಹಲವಾರು ಮಂತ್ರಿ ಪದವಿಯನ್ನು ನಿಭಾಯಿಸಿದರೆ; ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಶ್ರೀಯುತರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ.ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ್ದ ಪ್ರಣವ್ ಮುಖರ್ಜಿ ಅವರು ಸದಾ “ನಾನಾ ರಾಜ್ಯ, ದೇಶಗಳ ಜನರೊಂದಿಗೆ ಸಂವಹನ ಮಾಡುವ ಅವಕಾಶವನ್ನು ನೀಡಿ, ಎಲ್ಲರನ್ನೂ ಒಂದುಗೂಡಿಸುವಂತೆ ಮಾಡುವುದು ಭಾಷೆ ಹಾಗೂ ಸಾಹಿತ್ಯದಿಂದ ಮಾತ್ರ ಸಾಧ್ಯ” ಎನ್ನುತ್ತಿದ್ದರು. ಇವರ ಆತ್ಮಕ್ಕೆ ದೇವರು ಶಾಂತಿಯನ್ನು ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

– ಬಿ.ಸಿ.ಪಾಟೀಲ್ , ಕೃಷಿ ಸಚಿವರು ಕರ್ನಾಟಕ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next