ಚಿಕ್ಕಬಳ್ಳಾಪುರ: ರಾಜ್ಯವನ್ನು ತತ್ತರಿಸುವಂತೆ ಮಾಡಿರುವ ಭೀಕರ ನೆರೆ ಪರಿಸ್ಥಿತಿಗೆ ಸೂಕ್ತವಾಗಿ ಸ್ಪಂದಿಸದೇ ಇರುವ ಕೇಂದ್ರ ಸರಕಾರದ ವಿರುದ್ಧ ಜೆಡಿಎಸ್ ವರಿಷ್ಠ ಹಾಗೂ ಮಾಜೀ ಪ್ರಧಾನಿ ಹೆಚ್. ಡಿ. ದೇವೇ ಗೌಡ ಮತ್ತೆ ಕೆಂಡಾಮಂಡಲವಾಗಿದ್ದಾರೆ.
ರಾಜ್ಯಕ್ಕೆ ಸೂಕ್ತ ನೆರೆ ಪರಿಹಾರ ಒದಗಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವ ಕೇಂದ್ರ ಸರಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಇದೇ ಅಕ್ಟೋಬರ್ 10ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೆ ಸಾಂವಿಧಾನಿಕ ಮಾದರಿಯಲ್ಲಿ ಹೋರಾಟ ಮಾಡುವುದಾಗಿ ದೇವೇ ಗೌಡರು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಭೀಕರ ಪ್ರವಾಹದಿಂದ ರಾಜ್ಯದಲ್ಲಿ ಜನಜೀವನವೇ ಅಸ್ತವ್ಯಸ್ತವಾಗಿದೆ. ಅಂದಾಜು 38,000 ಸಾವಿರ ಕೋಟಿ ರೂಪಾಯಿಗಳಷ್ಟು ಆಸ್ತಿ ಹಾಗೂ ಬೆಳೆಗಳು ನಷ್ಟವಾಗಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ದೇವೇ ಗೌಡರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೆರೆ ಪರಿಹಾರ ರೂಪದಲ್ಲಿ ಮೊನ್ನೆ ತಾನೆ 1200 ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಆದರೆ ಈ ಮೊತ್ತ ಕುಮಾರಸ್ವಾಮಿ ಸರ್ಕಾರ ಇದ್ದಾಗ ಕೊಡಗು ಸೇರಿದಂತೆ ಹಲವೆಡೆ ಕಾಣಿಸಿಕೊಂಡಿದ್ದ ನೆರೆ ಪರಿಸ್ಥಿತಿಗೆ ಕೊಟ್ಟಿರುವ ಪರಿಹಾರವೇ ಹೊರತು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಿರುವ ಪರಿಹಾರ ಅಲ್ಲ ಎಂದು ಮಾಜೀ ಪ್ರಧಾನಿ ದೇವೇಗೌಡರು ಕೇಂದ್ರದ ನಿರ್ಲಕ್ಷ್ಯ ಧೋರಣೆಯನ್ನು ಬಯಲುಮಾಡಿದ್ದಾರೆ.
ವಿವಾಹ ವಾರ್ಷಿಕೋತ್ಸದಲ್ಲಿ ಭಾಗಿ
ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಹಾಗೂ ವಿಧಾನಸಭೆ ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ ಅವರ 25ನೇ ವಿವಾಹ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ದೇವೇಗೌಡರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡರು.