ನವದೆಹಲಿ: ಮಾಜೀ ಪ್ರಧಾನಮಂತ್ರಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ, ಕಾಂಗ್ರೆಸ್ ನಾಯಕ ಡಾ. ಮನಮೋಹನ್ ಸಿಂಗ್ ಅವರನ್ನು ಇಂದು ನಗರದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಾ. ಸಿಂಗ್ ಅವರನ್ನು ಏಮ್ಸ್ ನಲ್ಲಿರುವ ಹೃದಯ ಮತ್ತು ಎದೆರೋಗಗಳ ವಿಭಾಗದಲ್ಲಿ ನಿಗಾದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ. 87 ವರ್ಷ ಪ್ರಾಯ ಡಾ. ಸಿಂಗ್ ಅವರು 2009ರಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಹೃದಯದ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇಂದು ಸಂಜೆ ಮನಮೋಹನ್ ಸಿಂಗ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ತಕ್ಷಣವೇ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಎ.ಎನ್.ಐ. ಸುದ್ದಿಸಂಸ್ಥೆ ವರದಿ ಮಾಡಿದೆ.
ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಇದೀಗ ಮನಮೋಹನ್ ಸಿಂಗ್ ಅವರ ಆರೋಗ್ಯ ತಪಾಸಣೆಯಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಲ್ಲಿನ ಕಾರ್ಡಿಯಾಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಡಾ. ನಿತೀಶ್ ನಾಯ್ಕ್ ಅವರು ಡಾ. ಸಿಂಗ್ ಅವರ ಆರೋಗ್ಯ ನಿಗಾ ತಂಡದ ಉಸ್ತುವಾರಿಯನ್ನು ಹೊತ್ತಿದ್ದಾರೆ ಎಂದು ತಿಳಿದುಬಂದಿದೆ.