ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ಗುರುವಾರ ಸಂಜೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದು, ಇದೀಗ ಏಮ್ಸ್ ನಿಂದ ಪಾರ್ಥಿವ ಶರೀರವನ್ನು ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸಕ್ಕೆ ಸ್ಥಳಾಂತರಿಸಿದ್ದು, ನಾಳೆ ಬೆಳಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇಂದು ರಾತ್ರಿ ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸದಲ್ಲಿ ಗಣ್ಯರಿಗೆ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ:
ನಾಳೆ ಮಧ್ಯಾಹ್ನ 1.30 ನಿಮಿಷದವರೆಗೂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಮಧ್ಯಾಹ್ನ 1.30ಕ್ಕೆ ವಿಜಯ್ ಘಾಟ್ ವರೆಗೆ ಪಾರ್ಥಿವ ಶರೀರದ ಮೆರವಣಿಗೆ ತೆರಳಲಿದೆ. ವಿಜಯ್ ಘಾಟ್ ನ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ವರದಿ ವಿವರಿಸಿದೆ.
ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ:
ಅಗಲಿರುವ ಹಿರಿಯ ಚೇತನ, ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಅಮಿತ್ ಶಾ, ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.