Advertisement

ಸಂಘದಂಗಳದಲ್ಲಿ ಪ್ರಣಬ್‌ ಮುಖರ್ಜಿ ಎಂಬ ಮುತ್ಸದ್ದಿ

12:30 AM Jun 07, 2018 | |

ಬಾನೆತ್ತರಕ್ಕೆ ಹಾರುವ ಕೇಸರಿ ವರ್ಣದ ಭಗವಾಧ್ವಜದ ಅಡಿಯಲ್ಲಿ ನಿಲ್ಲುವ ಪ್ರಣಬ್‌ರನ್ನು ನೆನಪಿಸಿಕೊಳ್ಳುತ್ತಲೇ, ಧ್ವಜ ಗೀತೆಯ ಕೊನೆಯ ಸಾಲಾದ “ರಾಷ್ಟ್ರವನ್ನು ಪರಮ ವೈಭವದೆಡೆ ಸಾಗಿಸುವ ದಾರಿ ಸುಗಮಗೊಳಿಸಲು ದೇವರ ಮೊರೆಯ ಧ್ವನಿಗೆ’ ಮುಖರ್ಜಿಯವರು ತಮ್ಮ ಉಪಸ್ಥಿತಿಯ ಮೂಲಕ ಸ್ಫೂರ್ತಿ ತುಂಬಲಿದ್ದಾರೆ. ಒಂದರ್ಥದಲ್ಲಿ ಆರ್‌ಎಸ್‌ಎಸ್‌ ಅನ್ನು ಯಾರೇ ದೂಷಿಸಲಿ-ಟೀಕಿಸಲಿ, ಸಂಘದ ಬಗ್ಗೆ ವೈರುಧ್ಯದ ಮಾತಾಡಲಿ, ಅದು ಭಾರತ ದೇಶದ ಅವಿಭಾಜ್ಯ ಅಂಗವಾಗಿ ಹೋಗಿದೆ ಎನ್ನದೇ ಯಾರಿಗೂ ಬೇರೆ ದಾರಿಯೇ ಇಲ್ಲ. 

Advertisement

ಹೌದು, ಯಾವುದೋ ಮಾತುಗಳ ನಡುವೆ ತನಗಿಷ್ಟವಲ್ಲದ ಕೆಲಸದಲ್ಲಿ ಮತ್ಯಾರೋ ಮಗ್ನರಾದರೆಂದು ಕರಾವಳಿ ಜಿಲ್ಲೆಯ ಹಿರಿಯರೊಬ್ಬರು “ಗೋಕುಲಾಷ್ಟಮಿಗೂ, ಇಮಾಂ ಸಾಹೇಬ ರಿಗೂ ಎತ್ತಿಂದೆತ್ತಣ ಸಂಬಂಧವಯ್ಯ?’ ಎಂದು ಗುಡುಗಿದ್ದರು. ಈ ಮಾತು ಇಂದು ನಾಗಪುರದಲ್ಲಿ ಆರ್‌ಎಸ್‌ಎಸ್‌ ತೃತೀಯ ವರ್ಷದ ಸಂಘ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಭಾಷಣಮಾಡಲೊಪ್ಪಿಕೊಂಡಿರುವ ಭಾರತದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರ ನಿರ್ಧಾರ ಕಂಡು ನೆನಪಾಯ್ತು. ಭಾರತದ ರಾಷ್ಟ್ರಪತಿಯಾಗಿ ಮಾತ್ರವಲ್ಲ, ಬದುಕಿನುದ್ದಕ್ಕೂ ಮೇಧಾವಿತನವನ್ನೇ ಮೆರೆದ ಮುಖರ್ಜಿ, ತಮ್ಮ ಜೀವಿತದಲ್ಲಿ ದೇಶದ ಪರಮೋಚ್ಚ ಪದವಿ ಯಾದ ರಾಷ್ಟ್ರಪತಿ ಹುದ್ದೆಯನ್ನು ಗೌರವದಿಂದ ನಿರ್ವಹಿಸಿ ಕೆಳಗಿಳಿದಿದ್ದಾರೆ. 

ಒಂದರ್ಥದಲ್ಲಿ ಮುಖರ್ಜಿ ಸ್ವಾತಂತ್ರ್ಯ ಹೋರಾಟ ಕಣ್ಣಾರೆ ಕಂಡವರು ಮತ್ತು ಅನುಭವಿಸಿದವರು. ಭಾರತದ ಅನೇಕ ಹಿರಿಯ ರಾಜಕಾರಣಿಗಳಂತೆ ಯಾವ ವಿವಾದಕ್ಕೂ ಸಿಲುಕದೆ ಸುಮ್ಮನೇ ಇರಬಹುದಿತ್ತು. ಆದರೆ ಪ್ರಣಬ್‌ ಎಂಬ 83ನೇ ವಯಸ್ಸಿನ ವಯೋವೃದ್ಧ ಸುಮ್ಮನಿ ರುವ ಜೀವಿಯಲ್ಲ. ದೇಶದ ಗೌರವ, ಸ್ವಾಭಿಮಾನದ ಪ್ರಶ್ನೆ ಬಂದಾಗಲೆಲ್ಲಾ ಸೆಟೆದು ನಿಂತು ಕಠಿಣ ನಿರ್ಧಾರ ತೆಗೆದು ಕೊಳ್ಳುವವರು. ಧರ್ಮ, ಮತಾಂಧ ತೆಯ ಹೆಸರಿನಲ್ಲಿ ಭಾರತಕ್ಕೆ ನುಗ್ಗಿ ರಕ್ತಪಾತ ನಡೆಸಿದ ಭಯೋತ್ಪಾದಕರಿಗೆ ಯಾವ ಒತ್ತಡಕ್ಕೂ ಮಣಿಯದೆ ಮರಣ ದಂಡನೆಗೆ ಶಿಫಾರಸ್ಸು ಮಾಡಿದವರು.

ಆದರೀಗ ದೇಶಾದ್ಯಂತ ಚರ್ಚೆ ಇರುವುದು ಮಾಜಿ ರಾಷ್ಟ್ರಪತಿಯ ದೇಶಭಕ್ತಿ, ಪ್ರಾಮಾಣಿಕತೆ, ಮುತ್ಸದ್ದಿತನದ ಬಗ್ಗೆಯಲ್ಲ, ಬದಲಾಗಿ ಬದುಕಿನುದ್ದಕ್ಕೂ ಕಾಂಗ್ರೆಸ್‌ ಎಂಬ ಪಕ್ಷದ ಹೆಗಲು ಕಂಬಳಿಯಾದ ಮುಖರ್ಜಿ ತಮ್ಮ ಬದುಕಿನ ಸಂಧ್ಯಾ ಕಾಲದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 6ನೇ ಸರಸಂಘ ಚಾಲಕ ಮೋಹನ್‌ ಭಾಗವತರ ಆಮಂತ್ರಣ ಸ್ವೀಕರಿಸಿ ಸಂಘ ಶಿಕ್ಷಾವರ್ಗದ ಸಭೆಯ ಸಮಾರೋಪದಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿರುವ ಬಗ್ಗೆ. 

ಮುಖರ್ಜಿಯವರ ಇಂದಿನ ಭಾಷಣ ಕೇವಲ ಆರ್‌ಎಸ್‌ಎಸ್‌ ಶಿಬಿರಕ್ಕಷ್ಟೆ ಸೀಮಿತವಾಗಿರಲಾರದು. ಎದುರಾಳಿಗಳಿಲ್ಲದೆ ದೇಶವಾಳುವ ದಿನಗಳಿಂದಲೂ ವೈಚಾರಿಕ ವಿಚಾರಗಳಿಗಾಗಿ “ಕಾಂಗ್ರೆಸ್‌’ ಎಂಬ ಗಾಂಧಿ ಹೆಸರಿನಲ್ಲಿರುವ ನೆಹರು ಕುಟುಂಬದ ಪಕ್ಷಕ್ಕೆ ರಾಷ್ಟ್ರೀಯತೆಯ ಹೆಸರಲ್ಲಿ ಸವಾಲೊಡ್ಡಿದ ಅಂದಿನ ಜನ ಸಂಘದ ಮಾತೃ ಸಂಸ್ಥೆಯೇ ಆರ್‌ಎಸ್‌ಎಸ್‌.

Advertisement

ಕಾಂಗ್ರೆಸ್‌ ನಾಯಕ ಪ್ರಣಬ್‌ ಸಂಘದ ಸಭೆಯಲ್ಲಿ ಭಾಗವಹಿಸುತ್ತಾರೆ ಎನ್ನುವಾಗಲೇ ರಾಷ್ಟ್ರಾದ್ಯಂತ ಕುತೂಹಲದ ಜೊತೆ ಆತಂಕದ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಪ್ರಣಬ್‌ ಕೇಂದ್ರ ರಕ್ಷಣಾ ಮಂತ್ರಿ ಮತ್ತು ಪ್ರಮುಖ ಖಾತೆಗಳಾದ ಅರ್ಥ, ವಿದೇಶಾಂಗ ಖಾತೆಗಳನ್ನು ನಿಭಾಯಿಸಿದ ನೇತಾರ. 

ಅಲ್ಲದೇ ಕಾಂಗ್ರೆಸ್‌ ಪಕ್ಷದ ಮೂಲಕ ದೇಶದ 13ನೇ ರಾಷ್ಟ್ರಪತಿಯಾದವರು. ಈಗವರು ಸಂಘದ ಸಮವಸ್ತ್ರದಲ್ಲಿರುವ ಸರಸಂಘಚಾಲಕರೊಂದಿಗೆ ವೇದಿಕೆ ಹಂಚಿಕೊಂಡು ವರ್ತ ಮಾನದಲ್ಲಿ ಪ್ರಚಲಿತದಲ್ಲಿರುವ, ಸಂಘದ ಪ್ರಾರ್ಥನೆಯಾದ “ನಮಸ್ತೆ ಸದಾ ವತ್ಸಲೆ, ಮಾತೃ ಭೂಮೇ ತ್ವಯ, ಹಿಂದು ಭೂಮೇ ಸುಖಂ ವಧೀìತೋಹಮ್‌’ ಎಂಬ ಸಂಘಗೀತೆಯೊಂದಿಗೆ ಭಾರತ ಮಾತೆಗೆ ಪ್ರಣಾಮ ಸಲ್ಲಿಸಲಿದ್ದಾರೆ. ಬಾನೆತ್ತರಕ್ಕೆ ಹಾರುವ ಕೇಸರಿ ವರ್ಣದ ಭಗವಾಧ್ವಜದ ಅಡಿಯಲ್ಲಿ ನಿಲ್ಲುವ ಪ್ರಣಬ್‌ರನ್ನು ನೆನಪಿಸಿಕೊಳ್ಳುತ್ತಲೇ, ಧ್ವಜ ಗೀತೆಯ ಕೊನೆಯ ಸಾಲಾದ “ರಾಷ್ಟ್ರವನ್ನು ಪರಮ ವೈಭವದೆಡೆ ಸಾಗಿಸುವ ದಾರಿ ಸುಗಮ ಗೊಳಿಸಲು ದೇವರ ಮೊರೆಯ ಧ್ವನಿಗೆ’ ಮುಖರ್ಜಿಯವರು ತಮ್ಮ ಉಪಸ್ಥಿತಿಯ ಮೂಲಕ ಸ್ಫೂರ್ತಿ ತುಂಬಲಿದ್ದಾರೆ. ಒಂದರ್ಥದಲ್ಲಿ ಆರ್‌ಎಸ್‌ಎಸ್‌ ಅನ್ನು ಯಾರೇ ಟೀಕಿಸಲಿ, ಸಂಘದ ಬಗ್ಗೆ ವೈರುಧ್ಯದ ಮಾತಾಡಲಿ, ಅದು ಭಾರತ ದೇಶದ ಅವಿಭಾಜ್ಯ ಅಂಗವಾಗಿ ಹೋಗಿದೆ ಎನ್ನುವುದನ್ನು ಒಪ್ಪಿಕೊಳ್ಳದೇ ಯಾರಿಗೂ ಬೇರೆ ದಾರಿಯೇ ಇಲ್ಲ. 

ಅಂದು 1925 ಸೆಪ್ಟೆಂಬರ್‌ 27ರ ವಿಜಯದಶಮಿ. ಡಾಕ್ಟರ್‌ಜೀ ಎಂದು ಸಂಘ ಎದೆಯುಬ್ಬಿಸಿ ಕರೆಯುವ ಡಾ.ಕೇಶವ ಬಲೀರಾಮ್‌ ಹೆಡಗೆವಾರ್‌ರಿಂದ ಹುಟ್ಟುಹಾಕಲ್ಪಟ್ಟ ಆರ್‌ಎಸ್‌ಎಸ್‌ ಒಂದು ನಂಬಿಕೆಯಡಿ ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಸಂಘಟನೆ ಎಂಬ ಖ್ಯಾತಿಗೆ ಒಳಗಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸಂಘದ ಮೂಲ ಉದ್ದೇಶವನ್ನು ಅನುಷ್ಠಾನ ಮಾಡಲು ಸ್ವಯಂ ಪ್ರೇರಣೆಯಿಂದ ಸಮರ್ಪಣ ಮನೋಭಾವದಿಂದ ದುಡಿಯಬಲ್ಲ ಕಾರ್ಯಕರ್ತರಿಂದಾಗಿ ಇಂದು ನೂರಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳಲ್ಲಿ ಪರಿವಾರವು ದುಡಿಯುತ್ತಿದೆ. 

ಸಂಘ ಪರಿವಾರವೆಂದರೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಎಂಬ ಸೀಮಿತ ಪ್ರಜ್ಞೆ ಹೊಂದಿದವರಿಂದು ಹೇರಳ ವಿದ್ದಾರೆ. ಆದರೆ ನಾಗರಿಕ ಜೀವನದ ಗಂಧ-ಗಾಳಿ ಇಲ್ಲದ ಕಾಡು-ಮೇಡು, ಗುಡ್ಡ-ಬೆಟ್ಟಗಳ ನಡುವೆ ಬದುಕುವ ಕಾಡುವಾಸಿಗಳ ಜೀವನದಲ್ಲಿ ನಾಗರಿಕತೆಯ ಜೀವನ ತೆರೆಯಲು, ಪ್ರಚಾರವಿಲ್ಲದೇ ದುಡಿಯುತ್ತಿರುವ “ವನವಾಸಿ ಸಂಘಟನೆ’ ಸಂಘ ಪರಿವಾರದ್ದು ಎಂದು ಅನೇಕರಿಗೆ ಅರ್ಥವೇ ಆಗಿಲ್ಲ. ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ ಯಾವುದೇ ಭಾಗದಲ್ಲೂ “ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌’ ಇಲ್ಲದಿರುವ ಪ್ರದೇಶವೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮದ ವಿಚಾರವನ್ನು ಹೃದಯಕ್ಕಿಳಿಸಬಲ್ಲ ಸಾಮರ್ಥ್ಯ ವಿರುವುದು ಎಬಿವಿಪಿಗೆ ಮಾತ್ರ ಎಂಬುದೀಗ ದೇಶ ಕಂಡ ಸತ್ಯ.

ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ವಿದ್ಯಾರ್ಥಿ ಪರಿಷತ್ತಿನ ಹೋರಾಟವೇ ಕ್ರಾಂತಿಯ ಕಹಳೆ ಊದಿತ್ತು. ಕೋಟ್ಯಂತರ ಸದಸ್ಯರನ್ನು ಹೊಂದಿರುವ ಎಬಿವಿಪಿ ಸಂಘ ಪರಿವಾರದ ಒಂದು ಭಾಗ. ಭಾರತೀಯರು ಕಟ್ಟಿದ ತೆರಿಗೆ ಹಣದಲ್ಲಿ ವಿದ್ಯಾರ್ಥಿವೇತನ ಪಡೆದು, ಪ್ರತಿಷ್ಟಿತ ವಿಶ್ವವಿದ್ಯಾ ನಿಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ “ಪಾಕಿಸ್ತಾನಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದಾಗ ಇಡೀ ದೇಶ ದಾದ್ಯಂತ ಜನಜಾಗೃತಿ ಮೂಡಿಸಿದ್ದು ಇದೇ ವಿದ್ಯಾರ್ಥಿ ಪರಿಷತ್‌. ಕೌಟುಂಬಿಕ ಜೀವನ ಪದ್ಧತಿ ಬಗ್ಗೆ ತಿಳಿಹೇಳಿ ಬದುಕಿನಲ್ಲಿ ನೈತಿಕತೆಯ ಪಾಠ ಹೇಳುತ್ತಾ, ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರು ಎಂಬ ಜೀವನದ ಪದ್ಧತಿಯನ್ನು ಸಮಾಜಕ್ಕೆ ಉಣಬಡಿಸಿ ದೇಶಾದ್ಯಂತ ಸದ್ದಿಲ್ಲದೇ ಜನಜಾಗೃತಿ ಮೂಡಿಸುತ್ತಿರುವ “ಕುಟುಂಬ ಪ್ರಬೋಧಿನಿ’ ಎಂಬ ಸಂಘಟನೆ ಸಂಘ ಪರಿವಾರದ ಕರುಳ ಬಳ್ಳಿಗಳಲ್ಲಿ ಒಂದು.

ದೇಶ-ರಾಜ್ಯಗಳಲ್ಲಿ ಬಿಗಡಾಯಿಸಿದ ಸಮಸ್ಯೆಯನ್ನು ಸರಿಪಡಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಇವತ್ತಿನ ದಿನಗಳಲ್ಲಿ ಬೆಳೆದ ಬೆಳೆಗೆ ಬೆಲೆಯೂ ಇಲ್ಲ, ಬದುಕಿಗೋಸ್ಕರ ಬಡಿದಾಡುವ ರೈತನಿಗೆ ನೆಮ್ಮ ದಿಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಅಧಿಕಾರ, ಸರಕಾರ ಕಾರಣವೆನ್ನದೇ ಬೇರೆ ದಾರಿ ಇಲ್ಲ.

“ನ್ಯಾಯ ಕೇಳದೇ ಕೊಡುವವರಿಲ್ಲ, ಆದರೆ ನ್ಯಾಯ ಕೇಳುವ ಹೆಸರಿನಲ್ಲಿ ಮತ್ತೂಂದು ಅನ್ಯಾಯಕ್ಕೆ ಅವಕಾಶವಿಲ್ಲ’ ಎನ್ನುವ ಶಾಂತಿಯುತ ಹೋರಾಟದ ಮೂಲಕ ನೇಗಿಲಯೋಗಿ ಹಲಧರನ ಲಾಂಛನದಡಿ ರೈತರನ್ನು ಸಂಘಟಿಸಿ ಸಾವಯವ ಕೃಷಿಯ ಮೂಲಕ ಲಾಭದಾಯಕ ಬೆಳೆ ತೆಗೆಯುತ್ತಾ ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುತ್ತಿರುವ ಕಿಸಾನ್‌ ಸಂಘ (1979ರಲ್ಲಿ ಸಂಘದ ವತಿಯಿಂದ ಪ್ರಾರಂಭವಾಯಿತು) ಆರ್‌ಎಸ್‌ಎಸ್‌ನ ಒಂದು ಅಂಗ. ಸನಾತನ ಧರ್ಮ ಪಾಲನೆ ಮಾಡುವ ಗುರುಕುಲದ ಶಿಕ್ಷಣವನ್ನು ಎಳೆಯ ದಿನಗಳಲ್ಲಿ ಮಕ್ಕಳಿಗೆ ಬಿತ್ತಿ ರಾಷ್ಟ್ರ ಪ್ರೇಮದ ಪಕಳೆಗಳನ್ನು ಅರಳಿಸುವುದಕ್ಕಾಗಿ “ವೇದ ವಿಜಾnನ ಗುರುಕುಲ’ ಎಂಬ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಶಿಕ್ಷಕರ ಮಧ್ಯೆ ಕೆಲಸ ಮಾಡುವ ಮಾಧ್ಯಮ ಶಿಕ್ಷಕರ ಸಂಘವು  ಆರ್‌ಎಸ್‌ಎಸ್‌ ವ್ಯಾಪ್ತಿಯಲ್ಲಿದೆ. 

1952ರಲ್ಲಿ ಉತ್ತರ ಪ್ರದೇಶದ ಗೋರಖಪುರ ಸರಸ್ವತಿ ಶಿಶುಮಂದಿರ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡು ಭಾರತೀಯ ಆಚಾರ-ವಿಚಾರಗಳ ಕಲಿಕೆ, ಸುಸಂಸ್ಕೃತ ನಡವಳಿಕೆ, ಪರಂಪರೆ ಬಗ್ಗೆ ತಿಳಿವಳಿಕೆ, ವಿನಯ, ವಿಧೇಯತೆಯ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ “ವಿದ್ಯಾಭಾರತಿ’. ಈ ಸಂಸ್ಥೆಯಲ್ಲಿ ಕಲಿತ ಮಕ್ಕಳನ್ನು ಗಮನಿಸಿದಾಗ ಅವರ ನಡವಳಿಕೆಯಲ್ಲಿ ಅಪರೂಪದ ಗೌರವಾರ್ಹತೆ ಕಂಡುಬಂತು. ಇಂದು ಇಡೀ ದೇಶದಲ್ಲಿ ವಿದ್ಯಾಭಾರತಿ ಹೆಸರಿನಲ್ಲಿ ಲಕ್ಷಾಂತರ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ, ಇದರಡಿ 36 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾಭಾರತಿ ಅಂಡಮಾನ್‌ ನಿಕೋ ಬಾರ್‌ನಲ್ಲಿಯೂ ಶಾಲೆಯನ್ನು ಸೃಷ್ಟಿಸಿದೆ. ಶಾರೀರಿಕ ಶಿಕ್ಷಣ, ಯೋಗ ಶಿಕ್ಷಣ, ಸಂಗೀತ ಶಿಕ್ಷಣ, ನೈತಿಕ, ಆಧ್ಯಾತ್ಮಿಕ ಶಿಕ್ಷಣ, ಸಂಸ್ಕಾರ ಶಿಕ್ಷಣಗಳನ್ನು ಸಮಾಜಕ್ಕೆ ಸಂಘದ ಅಂಗಗಳು ಮಾತ್ರ ಕೊಡಲು ಸಾಧ್ಯ. ಸ್ವಾಮಿ ವಿವೇಕಾನಂದರ ಆದರ್ಶ, ಡಾ.ಹೆಡಗೆವಾರ್‌ ಅವರ ದೂರಗಾಮಿ ಚಿಂತನೆ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿಬಿಟ್ಟಿದೆ. 

ಇಂದು ಪ್ರಣಬ್‌ ಮುಖರ್ಜಿಯವರು ಹೇಗೆ ಸಂಘದ ಶಿಬಿರದಲ್ಲಿ ಭಾಗವಹಿಸುತ್ತಾರೋ ಅದೇ ರೀತಿ 1934ರಲ್ಲಿ ವಿದರ್ಭ ಪ್ರಾಂತ್ಯದ ವಾರ್ಧಾದಲ್ಲಿ ಶೀತಕಾಲಿನ ಶಿಬಿರಕ್ಕೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರು. 2000ಕ್ಕಿಂತ ಹೆಚ್ಚು ಸ್ವಯಂ ಸೇವಕರಿದ್ದ ಆ ಶಿಬಿರದಲ್ಲಿ ಶಿಸ್ತುಬದ್ಧ ಸಮಾನ ಭಾವನೆಗಳಿಂದ ತುಂಬಿದ ಸಾಮಾಜಿಕ ಸಮರಸತೆಯನ್ನು ಕಂಡು ಗಾಂಧೀಜಿ, ಸಂಘದ ವಿಚಾರಧಾರೆಗಳೇ ಅದ್ಭುತ ಎಂದು ಉದ್ಗರಿಸಿದರು. 1947ರಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ಗಾಂಧೀಜಿ ಉಪಯೋಗಿಸಿಕೊಂಡರು. ಆ ದಿನ 13 ವರ್ಷಗಳ ಹಿಂದೆ ತಾವು ಭೇಟಿ ಮಾಡಿದ ಸಂಘದ ಶಿಬಿರವನ್ನು ನೆನೆದು “ಸ್ವಯಂ ಸೇವಕರಲ್ಲಿ ಅಸ್ಪೃಶ್ಯತೆ, ಜಾತಿಭೇದ ಸಂಪೂರ್ಣ ತೊಲಗಿ ಹೋಗಿರುವುದನ್ನು ಕಂಡು ನಾನು ಪರಿಪೂರ್ಣ ತೃಪ್ತನಾಗಿದ್ದೇನೆ. 

ಶಿಸ್ತು ಪ್ರಾಮಾಣಿಕತೆ, ಸೇವಾ ಮನೋಭಾವ ಹೊಂದಿರುವ ಸಂಘ ನನ್ನ ಕನಸಿನ ಭಾರತಕ್ಕೆ ದಾಪುಗಾಲು ಇಡುತ್ತಿದೆ’ ಎಂದು ಮನಸಾರೆ ಹಾರೈಸಿದ್ದರು. ಅಂಥದೇ ಶಿಬಿರಕ್ಕೆ ಇಂದು ಪ್ರಣಬ್‌ ಮುಖರ್ಜಿಯವರು ಹೆಜ್ಜೆ ಇಡುತ್ತಿದ್ದಾರೆ. ಕುತೂಹಲಕ್ಕೋಸ್ಕರ ನೆನಪಿಸುತ್ತೇನೆ.. ಒಂದು ದಾಖಲೆಯ ಪ್ರಕಾರ 1939ರಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ರವರು ಪುಣೆಯ ಸಂಘ ಶಿಕ್ಷವರ್ಗಕ್ಕೆ ಭೇಟಿ ನೀಡಿ ಜಾತಿಯ ವಿಷಮತೆ ಯನ್ನು ಮರೆಸುವ ಶಿಬಿರದ ವಾತಾವರಣವನ್ನು ಕಂಡು ಅಚ್ಚರಿಗೊಳ್ಳುತ್ತಾರೆ. 

ತಮ್ಮಲ್ಲಿರುವ ಅನುಮಾನವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೋಸ್ಕರ ಸಂಘದ ಸ್ವಯಂ ಸೇವಕರಲ್ಲಿ, “ನಿಮ್ಮಲ್ಲಿ ನನ್ನ ಮಹರ್‌ ಜಾತಿಯವರು ಯಾರಿದ್ದೀರಿ, ಕೈಯೆತ್ತಿ’ ಎನ್ನುತ್ತಾರೆ. ಯಾವ ಸ್ವಯಂ ಸೇವಕನೂ ಕೈ ಎತ್ತುವುದಿಲ್ಲ. ಖಚಿತಪಡಿಸಿಕೊಳ್ಳುವುದಕ್ಕಾಗಿ ಮತ್ತೂಮ್ಮೆ “ನಮ್ಮ ಮಹರ್‌ ಜಾತಿಯವರು ಯಾರಾದರೂ ಇದ್ದೀರಾ ಎಂದು ಕೇಳಿದೆ’ ಎಂದು ಪುನಃ ಪ್ರಶ್ನಿಸುತ್ತಾರೆ. ಆಗ ಕೆಲವು ಕೈಗಳು ಮೇಲೇಳುತ್ತಲೇ ಆಶ್ಚರ್ಯಗೊಂಡ ಬಾಬಾ ಸಾಹೇಬ್‌, “ನಿಜಕ್ಕೂ ನೀವು ನನ್ನ ಜನಾಂಗದವರಾ? ಹಾಗಿದ್ದರೆ ಮೊದಲೇ ಏಕೆ ಕೈಯೆತ್ತಲಿಲ್ಲ?’ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಸ್ವಯಂ ಸೇವಕನೊಬ್ಬ, “ನಾನು ಮಹರ್‌ ಜಾತಿಯವನಾಗಿದ್ದರೂ ಸಂಘದಲ್ಲಿ ಜಾತಿಯ ಪ್ರಸ್ತಾಪವಿಲ್ಲ. ನಾವು ಉಡುವಾಗ, ಉಣ್ಣುವಾಗ ಎಲ್ಲರೂ ಭಾರತೀಯರೇ ಆಗಿರುತ್ತೇವೆ ಮತ್ತು ಆಚರಣೆಯಲ್ಲೂ ಅದೇ ಭಾವನೆಯಿದೆ’ ಎನ್ನುತ್ತಲೇ ಅಂಬೇಡ್ಕರ್‌ ಆಶ್ಚರ್ಯಪಡುತ್ತಾರೆ. ಆಗವರು ನನ್ನ ಉದ್ದೇಶ ಈ ಸಂಘದಲ್ಲಿ ಈಡೇರುತ್ತಿದೆ ಎಂದು ಸಮಧಾನಪಡುತ್ತಾರೆ. 

ಹೀಗೆ ನೂರಾರು ವಿಚಾರಧಾರೆಗಳೊಂದಿಗೆ ರಾಷ್ಟ್ರಕಟ್ಟುವ ಕೈಂಕರ್ಯದಲ್ಲಿ ವ್ಯಕ್ತಿ ನಿರ್ಮಾಣದತ್ತ ಸಾಗಿದ ಸಂಘ ನಡೆದು ಬಂದ ದಾರಿ ಬಹು ಯೋಜನ ಬದ್ಧ. ಅನೇಕರು ಸಂಘಕ್ಕೆ ಗುರು ಯಾರು? ಎಂದು ಪ್ರಶ್ನಿಸುವವರಿದ್ದಾರೆ. ಅದಕ್ಕೆ ಸಂಘದ ಸರಸಂಘಚಾಲಕರ ಉತ್ತರವೆಂದರೆ, “ಸಂಘವು ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸಿಲ್ಲ, ಯಾಕೆಂದರೆ ವ್ಯಕ್ತಿಗಳೆಂದೂ ಪರಿಪೂರ್ಣರಲ್ಲ.’ ಆದ್ದರಿಂದಲೇ ಭಗವಾಧ್ವಜವನ್ನೆ ಸಂಘ ಗುರು ಎಂದು ಸ್ವೀಕರಿಸಿತು ಮತ್ತು ಗೌರವಿಸಿತು. ಅಂದಿನ ದಿನಗಳಲ್ಲಿ ಭಾರತದಲ್ಲೇ ಶ್ರೀಮಂತರೆಂದು ಪರಿಗಣಿಸಲ್ಪಟ್ಟ ಮದನ್‌ಮೋಹನ್‌ ಮಾಳವೀಯರು ದೇಶ ಕಟ್ಟುವ ಸಂಘಕ್ಕೆ ಆರ್ಥಿಕ ಶಕ್ತಿ ನೀಡಲು ತಾವು ಸಿದ್ಧ ಎಂದು ಘೋಷಿಸಿದ್ದರು. ಆದರೆ ಗುರೂಜಿಯವರು “ನಮಗೆ ಕೆಲಸಕ್ಕಾಗಿ ವ್ಯಕ್ತಿಗಳ ಅವಶ್ಯಕತೆ ಇದೆ. ಹಣ ಬೇಡ, ನೀವು ಬನ್ನಿ’ ಎಂದು ಕರೆದಿದ್ದರು. 

ಸಂಘ ಪಾರದರ್ಶಕವಾಗಿ ಗುರು ದಕ್ಷಿಣೆಯ ಮೂಲಕ ವೆಚ್ಚವನ್ನು ಸಂಗ್ರಹಿಸುತ್ತದೆ. ಹಲವು ಸಂದರ್ಭಗಳಲ್ಲಿ ಹೊಟೇಲ್‌ ಕಾರ್ಮಿಕ ಸ್ವಯಂಸೇವಕರು ತಮಗೆ ನೀಡಿದ ಟಿಪ್ಸ್‌ ಸಂಗ್ರಹಿಸಿ ಸಂಘದ ಗುರುದಕ್ಷಿಣೆಗೆ ಸಮರ್ಪಿಸಿದ ಉದಾಹರಣೆಗಳು ಸಾಕಷ್ಟಿವೆ. ಇದೇ ಸಂಘತನ. ಸಂಘದ ವಿಸ್ತಾರವನ್ನು ಅಳೆಯು ವುದು ಸುಲಭವಲ್ಲ. ಕುಶಲ ಸಂಘಟಕ ಡಾ.ಹೆಡಗೆವಾರ್‌ ಸ್ಥಾಪಿಸಿದ ಸಂಘ ಇಂದು ಜಗತ್ತಿನಲ್ಲೇ ಮಾನ್ಯತೆ ಪಡೆದಿದೆ. ಈ ದೇಶದಲ್ಲಿ ದಿನನಿತ್ಯ ಸರಾಸರಿ 55,000 ಶಾಖೆಗಳು ನಡೆಯು ತ್ತಿವೆ. ಕೇರಳದಂತಹ ಕಮ್ಯುನಿಸ್ಟರ ಕೆಂಪು ನೆಲದಲ್ಲಿ 3,000ಕ್ಕೂ ಮಿಕ್ಕಿ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. 

ಕೇರಳದಲ್ಲಿರುವ ಒಟ್ಟು ಗ್ರಾಮಗಳ ಸಂಖ್ಯೆ 9,000. ಸಂಘದ ಅದೇಶವನ್ನು ಹೊತ್ತು ತಿರುಗುವ, ಸಂಘದ ಸಿದ್ಧಾಂತಕ್ಕೋಸ್ಕರ ಬದುಕನ್ನೇ ಸಮರ್ಪಣೆ ಮಾಡುವ, ಸಂಘದ ಉದ್ದೇಶದ ಅನುಷ್ಠಾನಕ್ಕಾಗಿ ತಮ್ಮ ಜೀವನವನ್ನು ಪೂರ್ಣ ತ್ಯಾಗ ಮಾಡಿ ಪ್ರಚಾರಕರಾಗಿ ದುಡಿಯುವ ಲಕ್ಷಾಂತರ ಸ್ವಯಂ ಸೇವಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೀವನಾಡಿ. ಸಂಘದಲ್ಲೆಲ್ಲೂ ತಾರತಮ್ಯ ಇಲ್ಲ. 

ಮಂಗಳೂರು ಜಿಲ್ಲೆಯ ಕಲ್ಲಡ್ಕದ ಹೆದ್ದಾರಿ ಅಂಚಿನಲ್ಲಿನ ಪ್ರೇಮ್‌ ಅಂಗಡಿಯ ಮಾಲೀಕ ಮಹಾಬಲಣ್ಣನಿಂದ ಆರಂಭ ವಾಗಿ ಸರಸಂಘಚಾಲಕ ಮೋಹನ್‌ ಭಾಗವತರವರೆಗೂ ಸಂಘದ ಸ್ವಯಂ ಸೇವಕರೆಲ್ಲಾ ಸಮಾನರೆಂಬ ಭಾವನೆ ಇದೆ. ಈ ಮಧ್ಯೆ ಮೊನ್ನೆ ಮೊನ್ನೆವರೆಗೂ ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದವರು, “ರಾಜ್ಯದಲ್ಲಿ ಆರ್‌ಎಸ್‌ಎಸ್‌ ಅನ್ನು ಏಕೆ ನಿಷೇಧಿಸಬಾರದು?’ ಎಂದು ಕಟುಕಿ ಆಡಿದ್ದ ಸಿದ್ದರಾಮಯ್ಯ ನವರಿಗೆ ಗೊತ್ತಿರಲಿಕ್ಕಿಲ್ಲ- ದಿನನಿತ್ಯ ತಮ್ಮ ಕಣ್ಣೆದುರೇ ಕಬಡ್ಡಿ ಆಡುತ್ತಾ ಭಗವಾಧ್ವಜವನ್ನು ಹಾರಿಸಿ “ನಮಸ್ತೆ ಸದಾ ವತ್ಸಲೆ’ ಹಾಡುತ್ತಿದ್ದ ಎಳೆಯ ಮಕ್ಕಳನ್ನು ಗಮನಿಸುತ್ತಿದ್ದ ಭಾರತದ ಮೊದಲ ಪ್ರಧಾನಮಂತ್ರಿ ನೆಹರೂರವರು, ಕೆಲವು ವಿಚಾರಗಳಿ ಗಾಗಿ ಆಕ್ರೋಶದಿಂದ “ಈ ದೇಶದಲ್ಲಿ ಸಂಘ ನಡೆಸಲು ಒಂದು ಇಂಚು ಜಾಗ ಕೊಡುವುದಿಲ್ಲ’ ಎಂದು ಆರ್ಭಟಿಸಿದ್ದರು. ಆದರೆ ಅದೇ ನೆಹರೂರವರು ಸಂಘದ ತ್ಯಾಗ, ಪರಿಶ್ರಮ, ಸಮರ್ಪಣ ಮನೋಭಾವ, ರಾಷ್ಟ್ರ ಕಟ್ಟುವ ಕೆಲಸದಲ್ಲಿನ ಆದರ್ಶಗಳನ್ನೆಲ್ಲಾ ಗಮನಿಸಿ ಮತ್ತೆರಡೇ ವರ್ಷದಲ್ಲಿ ಭಾರತದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಂಘಕ್ಕೆ ಗಣವೇಷಧಾರಿಯಾಗಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಹೀಗೆಯೇ ಸರ್ವವ್ಯಾಪಿ, ಸರ್ವಸ್ಪರ್ಶಿ ಮಾತ್ರವಲ್ಲ ಇವತ್ತಿನ ಕಾಲಘಟ್ಟದಲ್ಲಿ ಸರ್ವಗ್ರಾಹಿಯಾಗಿ ಬೆಳೆಯುತ್ತಿರುವ ಸಂಘ ಭಾರತದ ಹೃದಯದ ಬಳ್ಳಿಯಾಗಿ ಬಾನೆತ್ತರಕ್ಕೆ ಬೆಳೆದುನಿಂತಿದೆ. 

ಡಾಕ್ಟರ್‌ಜೀಯವರು ಸಮರ್ಥ ರಾಷ್ಟ್ರ ಕಟ್ಟುವ ಕನಸುಗಳನ್ನು ಹೊತ್ತು, ತಮ್ಮಲ್ಲಿಗೆ ಬಂದು ತಾವು ರಾಷ್ಟ್ರಕ್ಕೋಸ್ಕರ ಸಾಯಲು ಸಿದ್ಧ ಎನ್ನುವವರಿಗೆ “ನೀವು ದೇಶಕ್ಕಾಗಿ ಸಾಯುವುದು ಬೇಡ, ದೇಶಕ್ಕಾಗಿ ಬದುಕಿ’ ಎಂದು ಬುದ್ಧಿ ಹೇಳುತ್ತಿದ್ದರಂತೆ. ಹೀಗೆ ರಾಷ್ಟ್ರ ಪ್ರೇಮದ ಸಂಸ್ಕಾರ ಪಡೆಯುತ್ತಾ 93ನೇ ವರ್ಷಗಳಲ್ಲಿ ಮುನ್ನಡೆಯುತ್ತಿರುವ ಸಂಘದ ಶಿಕ್ಷವರ್ಗದಲ್ಲಿ ಇಂದು ಪಾಲ್ಗೊಳ್ಳುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರು ದೇಶಕ್ಕೊಂದು ಸಂದೇಶವನ್ನು ತಿಳಿಸಿದ್ದಾರೆ- “ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಪ್ಪಟ ರಾಷ್ಟ್ರಪ್ರೇಮಿ ಸಂಘಟನೆ. ಇಂತಹ ಸಂಘಟನೆಯ ಸಭೆಯಲ್ಲಿ ಭಾಗವಹಿಸಲು ಭಾರತೀಯನಾಗಿ ನಾನು ಹೆಮ್ಮೆ ಪಡುತ್ತೇನೆ’ಮುಖರ್ಜಿಯವರ ಮಾತು ಆರ್‌ಎಸ್‌ಎಸ್‌ ಬಗ್ಗೆ ಜಗತ್ತಿಗೆ ಹೊಸ ಸಂದೇಶವನ್ನು ನೀಡುತ್ತಿದೆ. ಸಂಘದ ಸ್ವಯಂ ಸೇವಕನೊಬ್ಬ ಈ ದೇಶದ ಪ್ರಧಾನ ಮಂತ್ರಿಯಾಗಿರುವುದು ಈ ಸಂದರ್ಭದಲ್ಲಿ ದೇಶಕ್ಕೆ ಹೆಮ್ಮೆ. ವಂದೇ ಮಾತರಂ..

– ಕೋಟ ಶ್ರೀನಿವಾಸ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next