Advertisement

ಮಾಜಿ ಪ್ರಧಾನಿ ಸಿಂಗ್‌ ಚೇತರಿಕೆ; ಕೋವಿಡ್‌-19 ಪರೀಕ್ಷೆ ವರದಿ ನೆಗೆಟಿವ್‌

08:28 AM May 12, 2020 | Sriram |

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನವದೆಹಲಿಯ ಏಮ್ಸ್‌ ಆಸ್ಪತ್ರೆಯ ಮೂಲಗಳು ಸೋಮವಾರ ತಿಳಿಸಿವೆ. ಅಲ್ಲದೆ, ಅವರ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೋವಿಡ್‌-19 ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ವರದಿ ಬಂದಿದೆ ಎಂದೂ ಹೇಳಿವೆ.

Advertisement

ಎದೆನೋವು ಹಾಗೂ ತೀವ್ರ ಬಳಲಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಸ ಔಷಧ ಬಳಕೆ ಆರಂಭಿಸಿದ ಬಳಿಕ, 87 ವರ್ಷದ ಸಿಂಗ್‌ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಬರಲು ಕಾರಣವೇನು ಎಂದು ಪರಿಶೀಲಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಜತೆಗೆ, ಸರಣಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೆಲವೊಂದರ ವರದಿ ಇನ್ನಷ್ಟೇ ಕೈಸೇರಬೇಕಿದೆ. ಒಂದೆರಡು ದಿನಗಳಲ್ಲಿ ಅವರನ್ನು ಡಿಸಾcರ್ಜ್‌ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ. ಏಮ್ಸ್‌ ನ ಕಾರ್ಡಿಯೋಥೊರಾಸಿಕ್‌ ಸೆಂಟರ್‌ನ ವೈದ್ಯರ ತಂಡವು ಸಿಂಗ್‌ ಅವರ ಮೇಲೆ ನಿಗಾ ವಹಿಸಿದೆ.

2009ರಲ್ಲಿ ಸಿಂಗ್‌ ಅವರು ಏಮ್ಸ್‌ ನಲ್ಲೇ ಯಶಸ್ವಿ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಅನೇಕ ಗಣ್ಯರು ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next