ಮೈಸೂರು: ಮುಡಾದಲ್ಲಿನ 50:50ರ ಅನುಪಾತದಲ್ಲಿನ ನಿವೇಶನ ಹಂಚಿಕೆ ಹಗರಣ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ವಿಜಯನಗರದಲ್ಲಿ 14 ಬದಲಿ ನಿವೇಶನ ನಿಯಮ ಮೀರಿ ಹಂಚಿಕೆ ಮಾಡಿದ ಆರೋಪ ಸಂಬಂಧ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರನ್ನು ಮಂಗಳವಾರ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.
ಅಧಿಕಾರಿಗಳ ತಂಡವು ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಿತು. ಪ್ರತಿಯೊಂದಕ್ಕೂ ನಟೇಶ್ ತಾವು ಕೈಗೊಂಡ ಕ್ರಮದ ಬಗ್ಗೆ ಲಿಖಿತ ದಾಖಲೆಗಳೊಂದಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಂದರ್ಭ ನಟೇಶ್, ಮಾಧ್ಯಮ ಪ್ರತಿನಿಧಿಗಳನ್ನು ಕಂಡು ಸಿಡಿಮಿಡಿಗೊಂಡರು. ಮಾಧ್ಯಮ ಪ್ರತಿನಿಧಿಗಳು ಕೆಮರಾ ಹಿಡಿದು ಸುತ್ತುವರಿದಾಗ ನನ್ನನ್ನು ಯಾಕೆ ವೀಡಿಯೋಮಾಡುತ್ತಿದ್ದೀರಿ… ನಾನೇನು ಡ್ಯಾನ್ಸ್ ಮಾಡುತ್ತಿದ್ದೇನಾ?, ಕಾಮನ್ ಸೆನ್ಸ್ ಇಲ್ಲವಾ ಎಂದು ರೇಗಿದರು.
ಪತ್ನಿಗೆ ಬದಲಿ ಭೂಮಿ ತೀರ್ಮಾನಕ್ಕೆ ಸಿಎಂ ಒಪ್ಪಿರಲಿಲ್ಲ: ಧ್ರುವಕುಮಾರ್
ಮೈಸೂರು: ನನ್ನ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಬದಲಿ ಭೂಮಿ ಕೊಡಲು ತೀರ್ಮಾನ ಮಾಡಲಾಗಿತ್ತು. ಆದರೆ ಅದಕ್ಕೆ ಸಿದ್ದರಾಮಯ್ಯ ಒಪ್ಪಿರಲಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ ಹೇಳಿದರು.
ಮೈಸೂರು ಲೋಕಾಯುಕ್ತ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿ, ಸಿಎಂ ಪತ್ನಿಗೆ ಭೂಮಿ ಕೊಡುವ ಬಗ್ಗೆ, ನನ್ನ ಅವಧಿಯಲ್ಲಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಕಳೆದುಕೊಂಡ ಭೂಮಿಗೆ ಸಮಾನಂತರ ಬಡಾವಣೆಯಲ್ಲಿ ಭೂಮಿ ಕೊಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ವಿಚಾರವನ್ನು ನಾನೇ ಖುದ್ದಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ. ನಾನು ಸಿಎಂ ಆಗಿರುವ ಸಮಯದಲ್ಲಿ ಈ ನಿರ್ಣಯಗಳು ಬೇಡ ಎಂದಿ ದ್ದರು ಎಂದು ಹೇಳಿ ದರು. ನನ್ನ ಅವಧಿ ಮುಗಿದ ಬಳಿಕ ಮುಂದೆ ಏನಾಗಿದೆಯೋ ಗೊತ್ತಿಲ್ಲ. ಬುಧ ವಾರದ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಲು ಬಂದಿದ್ದೇನೆ ಎಂದರು.