Advertisement

ಮಾಜಿ ಸಂಸದ ಪ್ರಕಾಶ ಹುಕ್ಕೇರಿಯಿಂದ ಸ್ವಂತ ಖರ್ಚಿನಲ್ಲಿ 14 ವೈದ್ಯಕೀಯ ಸಿಬ್ಬಂದಿ ನೇಮಕ

05:50 PM May 08, 2021 | Team Udayavani |

ಚಿಕ್ಕೋಡಿ: ಗಡಿ ಭಾಗದಲ್ಲಿ ಕೊರೊನಾ ಎರಡನೆ ಅಲೆ ಅವ್ಯಾಹತವಾಗಿ ಹಬ್ಬುತ್ತಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗಬೇಕೆನ್ನುವ ಉದ್ದೇಶದಿಂದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಅನ್ನಪೂರ್ಣೇಶ್ವರಿ ಫೌಂಡೇಶನ್‌ ವತಿಯಿಂದ 14 ಜನ ಆರೋಗ್ಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡು ಕೊರೊನಾ ನಿಯಂತ್ರಿಸಲು ಮುಂದಾಗಿದ್ದಾರೆ.

Advertisement

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆರೋಗ್ಯ ಸಿಬ್ಬಂದಿಗಳ ನೇಮಕ ಮಾಡಿಕೊಂಡು ಅವರೊಂದಿಗೆ ಮಾತುಕತೆ ನಡೆಸಿದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಕೊರೊನಾ ಸೋಂಕಿತರು ಹಾಗೂ ಇತರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಯಕ್ಸಂಬಾ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಬ್ಬರು ಎಂಬಿಬಿಎಸ್‌ ವೈದ್ಯಾಧಿಕಾರಿಗಳು, 6 ನರ್ಸ್‌ಗಳು ಹಾಗೂ 6 ಜನ ಡಿ-ಗ್ರುಪ್‌ ಸಿಬ್ಬಂದಿಗಳು ಹೀಗೆ ಒಟ್ಟು 14 ಜನ ಸಿಬ್ಬಂದಿಯನ್ನು ಶ್ರೀ ಅನ್ನಪೂರ್ಣೇಶ್ವರಿ ಫೌಂಡೇಶನ್‌ ವತಿಯಿಂದ ನೇಮಕಾತಿ ಮಾಡಿಕೊಂಡಿದ್ದು, ವೈದ್ಯರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದರು.

ಅಲ್ಲದೇ ಯಕ್ಸಂಬಾ ಆರೋಗ್ಯ ಕೇಂದ್ರದಲ್ಲಿ ಔಷಧಿಗಳು ಲಭ್ಯವಿಲ್ಲದೆ ಇದ್ದಲ್ಲಿ ಮಾನೆ, ಭೋಪಳೆ ಮೆಡಿಕಲ್‌ ಅಂಗಡಿಗಳಲ್ಲಿ ಆಸ್ಪತ್ರೆಯಲ್ಲಿನ ಚೀಟಿ ತೋರಿಸಿ ಉಚಿತವಾಗಿ ಔಷಧಿ ಪಡೆದುಕೊಳ್ಳಲು ಸೂಚಿಸಬೇಕು. ಈಗಾಗಲೇ ಅನ್ನಪೂರ್ಣೇಶ್ವರಿ ಫೌಂಡೇಶನ್‌ ವತಿಯಿಂದ ಚಿಕ್ಕೋಡಿ ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದರಂತೆ ಯಕ್ಸಂಬಾ, ಅಂಕಲಿ ಆರೋಗ್ಯ ಕೇಂದ್ರಗಳಲ್ಲಿಯೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಸಾರ್ವಜನಿಕರಿಗೆ ಮಾಹಿತಿ ನೀಡಲು ಒತ್ತಾಯ: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರಗಳಲ್ಲಿ ದಿನನಿತ್ಯ ಹೊಸದಾಗಿ ದಾಖಲಾಗುತ್ತಿರುವ, ಗುಣಮುಖರಾಗಿ ಡಿಸಾcರ್ಜ್‌ ಆಗುತ್ತಿರುವ ಹಾಗೂ ಸಾವಿನ ಸಂಖ್ಯೆ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಾರ್ವಜನಿಕರಿಗೆ ತಲುಪುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಕೂಡ ರಸ್ತೆ-ಬೀದಿಗಳಲ್ಲಿ ಸೋಂಕು ಹರಡುವ ಭಯವಿಲ್ಲದೆ ನಿರ್ಲಕ್ಷವಾಗಿ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದು ಕೂಡ ಎದ್ದು ಕಾಣುತ್ತಿದೆ. ಆದ್ದರಿಂದ ದಿನನಿತ್ಯ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರಗಳಲ್ಲಿನ ಸೋಂಕಿತರ ವಿವರಗಳನ್ನು ಪತ್ರಿಕಾ ಮಾಧ್ಯಮಗಳಲ್ಲಿ ಬಿತ್ತರಿಸಿ ಸಾರ್ವಜನಿಕರಿಗೆ ಮಾಹಿತಿ ತಲುಪುವಂತೆ ಮಾಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ಆರೋಗ್ಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next