ಮಂಡ್ಯ: ರಾಜಕೀಯ ಹಿರಿಯ ಮುತ್ಸದ್ಧಿ, ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರು ಶ್ವಾಸಕೋಶ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 15 ದಿನಗಳ ಹಿಂದೆ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ.
೧೫ ದಿನಗಳಿಂದಲೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಚಿಕಿತ್ಸೆಯಿಂದ ಚೇತರಿಕೆ ಕಂಡು ಬಂದಿಲ್ಲ. ಆದ್ದರಿಂದ ಮದ್ದೂರಿನ ಭಾರತೀನಗರ ನಮ್ಮ ಆಸ್ಪತ್ರೆ ಜಿ.ಮಾದೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲಾಗುವುದು ಎಂದು ಮಾದೇಗೌಡ ಪುತ್ರ ವಿಧಾನ ಪರಿಷತ್ ಮಾಜಿ ಸದಸ್ಯ ಮಧುಮಾದೇಗೌಡ ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಎರಡು ವರ್ಷ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ : ಗೋವಿಂದ ಕಾರಜೋಳ
94 ವರ್ಷದ ಮುತ್ಸದ್ಧಿಯಾಗಿರುವ ಜಿ.ಮಾದೇಗೌಡರು, ಜಿಲ್ಲೆಯ ಹಿರಿಯ ರಾಜಕಾರಣಿ, ರೈತ ಹೋರಾಟಗಾರರಾಗಿದ್ದು, ಕಾವೇರಿ ಹೋರಾಟದ ಚಳುವಳಿಯಲ್ಲಿ ಮುಂಚೂಣಿ ನಾಯಕರಾಗಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ನಂತರ 1989 ಹಾಗೂ 1991 ರಲ್ಲಿ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಅಲ್ಲಿಯೂ ಜಯಗಳಿಸಿ ಸೋಲಿಲ್ಲದ ಸರದಾರರಾಗಿ ಗುರುತಿಸಿಕೊಂಡಿದ್ದರು.
ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಅಭಿಮಾನಿಗಳು, ಹಿತೈಷಿಗಳು, ರಾಜಕಾರಣಿಗಳು, ಕಾರ್ಯಕರ್ತರು ಶೀಘ್ರ ಗುಣಮುಖರಾಗಿ ಬರಲೆಂದು ಪ್ರಾರ್ಥಿಸುತ್ತಿದ್ದಾರೆ.