ಶ್ರೀರಂಗಪಟ್ಟಣ: ಮಹಿಳೆಯೊಬ್ಬರು ಅಂಗಡಿಯೊಳಗೆ ಕುಳಿತಿದ್ದಾಗಲೇ ಜೆಸಿಬಿ ಚಾಲಕ ಅಂಗಡಿ ತೆರವುಗೊಳಿಸಲು ಯತ್ನಿಸಿದ ಎಂಬ ಕಾರಣಕ್ಕೆ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಜೆಸಿಬಿ ಚಾಲಕನನ್ನು ಥಳಿಸಿದ ಘಟನೆ ಗುರುವಾರ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ರಸ್ತೆಗೆ ಬದಿಯ ಪ್ರಯಾಣಿಕರ ತಂಗುದಾಣ ಮತ್ತು ಗ್ರಾಪಂಗೆ ಸೇರಿದ ಅಂಗಡಿ ಮಳಿಗೆಗಳನ್ನು ತೆರವು ಮಾಡಿಸುವ ವೇಳೆ ಈ ಘಟನೆ ನಡೆಯಿತು.
ವಿರೋಧವನ್ನೂ ಲೆಕ್ಕಿಸದ ಚಾಲಕ: ಗ್ರಾಪಂನಿಂದ ಮಳಿಗೆಯನ್ನು ಬಾಡಿಗೆಗೆ ಪಡೆದು ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಎ.ಎನ್. ಸುಮಾ ಅವರ ವಿರೋಧವನ್ನೂ ಲೆಕ್ಕಿಸದೆ ಜೆಸಿಬಿ ಚಾಲಕ ನಾಗಚಂದ್ರ ಅಂಗಡಿ ತೆರವಿಗೆ ಮುಂದಾಗಿದ್ದಾರೆ. ಮಹಿಳೆ ಇದ್ದರೂ ಜೆಸಿಬಿ ಕಾರ್ಯ ನಡೆಸಿದ್ದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲಕ ನಾಗಚಂದ್ರ ಅವರಿಗೆ ಥಳಿಸಿದ್ದಾರೆ. ತಂಗುದಾಣ ತೆರವಿಗೆ ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸಿದರು.
ಮನವೊಲಿಸುವ ಯತ್ನ: ತಹಶೀಲ್ದಾರ್ ಎಂ.ವಿ. ರೂಪಾ, ಎಎಸ್‌ಪಿ ಶೋಭಾರಾಣಿ, ಲೋಕೋಪಯೋಗಿ ಇಲಾಖೆ ಎಇಇ ಮಹೇಶ್, ತಾಪಂ ಇಒ ನಾಗವೇಣಿ ಜನರ ಮನವೊಲಿಸುವ ಯತ್ನ ನಡೆಸಿದರು. ಪೊಲೀಸರ ರಕ್ಷಣೆಯಿಂದ ರಸ್ತೆ ಬದಿಯ ಕೆಲವು ಅಂಗಡಿ ತೆರವು ಮಾಡಲಾಯಿತು. ಆದರೆ, ಗ್ರಾಪಂಗೆ ಸೇರಿದ ಮಳಿಗೆ ತೆರವಿಗೆ ವಿರೋಧಿಸಿದರು. ಶಾಸಕ ರವೀಂದ್ರ ಶ್ರೀಕಂಠಯ್ಯ ರಸ್ತೆ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜನರ ಹಿತ ಮರೆತು ಬಡವರನ್ನು ಬೀದಿಗೆ ತಳ್ಳಿ ರಸ್ತೆ ಮಾಡಿದರೆ ಏನು ಪ್ರಯೋಜನ? ಇದು ಜನವಿರೋಧಿಯಾಗಿದೆ ಎಂದು ತಾಪಂ ಸದಸ್ಯ ಸಂತೋಷ್, ಗ್ರಾಪಂ ಅಧ್ಯಕ್ಷೆ ಜಯಂತಿ ಕೃಷ್ಣೇಗೌಡ ಪ್ರಶ್ನಿಸಿದರು.
ಠಾಣೆಯಲ್ಲಿ ದೂರು: ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ತಾಪಂ ಸದಸ್ಯ ಸಂತೋಷ್, ಕಾಂಗ್ರೆಸ್ ಮುಖಂಡ ಶಶಾಂಕ್ ವಿರುದ ಲೋಕೋಪಯೋಗಿ ಇಲಾಖೆ ಎಇಇ ಮಹೇಶ್ ಅರಕೆರೆ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದಟಛಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರತಿ ದೂರು: ಅಂಗಡಿ ಬಾಡಿಗೆ ಪಡೆದಿದ್ದ ಸುಮಾ ಅವರು ಲೋಕೋಪಯೋಗಿ ಇಲಾಖೆ ಎಇಇ ಮಹೇಶ್, ಎಇ ರೇವಣ್ಣ ಮತ್ತು ಜೆಸಿಬಿ ಚಾಲಕನ ವಿರುದಟಛಿ ಪ್ರತಿ ದೂರು ನೀಡಿದ್ದಾರೆ.
ಮಾಜಿ ಶಾಸಕ ಬಂಧನ, ಬಿಡುಗಡೆ: ಶ್ರೀರಂಗಪಟ್ಟಣದ ಅರಕೆರೆ ಗ್ರಾಮದಲ್ಲಿ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌರರ ವಿರುದಟಛಿ ಪಿಡಬ್ಲೂಡಿ ಎಇಇ ಮಹೇಶ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ರಮೇಶ್ ಬಂಡಿ ಸಿದ್ದೇಗೌಡರನ್ನು ಬಂಧಿಸಿದ ಪೊಲೀಸರು, ಪಟ್ಟಣದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.