Advertisement

ಮಾಜಿ ಶಾಸಕ ಎಂ.ಪಿ ರವೀಂದ್ರ ವಿಧಿವಶ​​​​​​​

06:35 AM Nov 04, 2018 | |

ಬೆಂಗಳೂರು:ಹರಪನಹಳ್ಳಿ ಮಾಜಿ ಶಾಸಕ ಹಾಗೂ ದಿವಗಂತ ಎಂ.ಪಿ. ಪ್ರಕಾಶ್‌ ಪುತ್ರ ಎಂ.ಪಿ. ರವೀಂದ್ರ ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.

Advertisement

ಬಹು ಅಂಗಾಂಗ ವೈಫ‌ಲ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಾಯಿ ರುದ್ರಾಂಬಾ, ಮೂವರು ಸಹೋದರಿಯರು ಹಾಗೂ ಅಪಾರ ಅಭಿಮಾನಿಗಳ‌ನ್ನು ಅಗಲಿದ್ದಾರೆ.

ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು ನ್ಯೂಮೋನಿಯಾ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ರೋಗ ಹಾಗೂ ಡಯಾಬಿಟಿಸ್‌ ಸಮಸ್ಯೆ ಇದ್ದಿದ್ದರಿಂದ ರೋಗ ಉಲ್ಬಣಗೊಂಡು ಬಹುಅಂಗಾಗ ವೈಫ‌ಲ್ಯಕ್ಕೆ ಕಾರಣವಾಗಿತ್ತು.

ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಇಟ್ಟು ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಎರಡು ದಿನಗಳಿಂದ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಯಾರನ್ನೂ ಗುರುತಿಸುಲು ಸಾಧ್ಯವಾಗದಷ್ಟು ನಿತ್ರಾಣರಾಗಿದ್ದರು. ಶನಿವಾರ ಬೆಳಗಿನ ಜಾವ 3.45 ನಿಮಿಷಕ್ಕೆ ವಿಧಿವಶರಾದರು ಎಂದು ವಿಕ್ರಂ ಆಸ್ಪತ್ರೆ ಅಧಿಕೃತ ಪ್ರಕಟಣೆ ತಿಳಿಸಿದೆ.

ಎಂ.ಪಿ. ರವೀಂದ್ರ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಗಾಂಧಿ ಭವನದ ಹತ್ತಿರ ಇರುವ ವಲ್ಲಭ ನಿಕೇತನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸೇರಿದಂತೆ ಗಣ್ಯ ನಾಯಕರು ಅಂತಿಮ ದರ್ಶನ ಪಡೆದರು.

Advertisement

ನಂತರ ರಸ್ತೆಯ ಮೂಲಕ ಹರಪನಹಳ್ಳಿಗೆ ತೆರಳಿ ಸಂಜೆ 6 ಗಂಟೆ ವರೆಗೂ ನಗರದ ಎಡಿಬಿ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.  ಭಾನುವಾರ ಹೂವಿನ ಹಡಗಲಿಯ ಜಿಬಿಆರ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟು ಬೆಳಿಗ್ಗೆ 12 ಗಂಟೆಗೆ ಎಂ.ಪಿ. ಪ್ರಕಾಶ್‌ ಸಮಾಧಿಯ ಹತ್ತಿರ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಎಂ.ಪಿ. ರವೀಂದ್ರ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಎಂ.ಪಿ. ರವೀಂದ್ರ ಹಿನ್ನೆಲೆ :
ಹಿರಿಯ ರಾಜಕಾರಣಿ ಎಂ.ಪಿ. ಪ್ರಕಾಶ್‌ ಅವರ ಏಕೈಕ ಪುತ್ರ ರವೀಂದ್ರ ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ, ಎಂಜನಿಯರಿಂಗ್‌ ಪದವಿಧರರಾಗಿದ್ದರು. ನಂತರ ತಂದೆ ಎಂ.ಪಿ. ಪ್ರಕಾಶರೊಂದಿಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು 2013 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ದುಬಾರಿ ಚುನಾವಣೆ ವ್ಯವಸ್ಥೆಯಿಂದ ಬೇಸತ್ತು 2017 ರಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ನಂತರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ನಿವೃತ್ತಿಯಿಂದ ಹಿಂದೆ ಸರಿದು 2018 ರ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ವಿರುದ್ಧ ಸೋಲ ಅನುಭವಿಸಿದ್ದರು.

ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷರಾಗಿ ಸಹಕಾರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಲ್ಲದೇ ಬಳ್ಳಾರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾಗಿಯೂ ಚುನಾಯಿತರಾಗಿದ್ದರು. ಅಲ್ಲದೇ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿದ್ದ ಅವರು, ಅಧಿಕಾರ ಹಂಚಿಕೆಯ ಗೊಂದಲದಿಂದ ಅಧ್ಯಕ್ಷ ಸ್ಥಾನ ದೊರೆಯದೇ ವಂಚಿತರಾದರು.

ಹರಪನಹಳ್ಳಿ ಬಳ್ಳಾರಿಗೆ :ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು ಅನ್ನು ದಾವಣಗೆರೆ ಜಿಲ್ಲೆಯನ್ನಾಗಿ ಮಾಡಲು ಬಳ್ಳಾರಿ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು. ಇದರಿಂದ ಹಿಂದುಳಿದ ಹರಪನಹಳ್ಳಿ ತಾಲೂಕು ಹೈದರಾಬಾದ್‌ ಕರ್ನಾಟಕ 371 ಜೆ ಕಾಯ್ದೆ ಅನ್ವಯ ಪಡೆಯುವ ಸವಲತ್ತುಗಳಿಂದ ಹರಪನಹಳ್ಳಿ ತಾಲೂಕು ವಂಚಿತವಾಗಿತ್ತು. ಹೀಗಾಗಿ ಹರಪನಹಳ್ಳಿ ತಾಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸುವಲ್ಲಿ ಎಂ.ಪಿ. ರವೀಂದ್ರ ಹೋರಾಟ ನಡೆಸಿ ಯಶಸ್ವಿಯಾಗಿದ್ದರು.

ರಂಗಭಾರತಿ ಸಕ್ರೀಯ: ತಂದೆ ಎಂ.ಪಿ. ಪ್ರಕಾಶ್‌ ಅವರ ಕನಸಿನ ಕೂಸಾಗಿದ್ದ ರಂಗಭಾರತಿ ರಂಗ ಸಂಸ್ಥೆಯನ್ನು ಹೂವಿನ ಹಡಗಲಿಯಲ್ಲಿ ಸಕ್ರೀಯಗೊಳಿಸಿ ನಿರಂತರ ರಂಗ ಚಟುವಟಿಕೆಗಳು ನಡೆಯುವಂತೆ ನೋಡಿಕೊಂಡಿದ್ದರು. ಅಲ್ಲದೇ ಪ್ರತಿ ವರ್ಷ ದಿವಂಗತ ಎಂ.ಪಿ. ಪ್ರಕಾಶ್‌ ಹೆಸರಿನಲ್ಲಿ ನಾಡಿನ ಸಾಧಕರಿಗೆ ಪ್ರಶಸ್ತಿ ನೀಡುವ ಕಾರ್ಯವನ್ನು ಮಾಡುತ್ತ ಬಂದಿದ್ದರು.

ರವೀಂದ್ರ ರಾಜ್ಯ ರಾಜಕಾರಣದಲ್ಲಿ ನಮಗೆ ಮಾರ್ಗದರ್ಶಕರಾಗಿದ್ದ ಎಂ.ಪಿ. ಪ್ರಕಾಶ್‌ ಅವರ ದಾರಿಯಲ್ಲಿಯೇ ನಡೆಯುತ್ತಿದ್ದರು. ಅವರು ಇಷ್ಟುಬೇಗ ನಮ್ಮನ್ನು ಅಗಲುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ದೇವರು ಅವರ ಕುಟುಂಬ ವರ್ಗಕ್ಕೆ ದುಖದಿಂದ ಹೊರ ಬರುವ ಶಕ್ತಿ ನೀಡಲಿ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.

ಸಣ್ಣ ಹುಡುಗನಿದ್ದಾಗಿನಿಂದಲೂ ರವೀಂದ್ರನನ್ನು ನಾನು ನೋಡಿದ್ದೆ. ಆರೋಗ್ಯದ ಬಗ್ಗೆ ಗಮನ ಹರಿಸಿರಲಿಲ್ಲ. ಇತ್ತೀಚೆಗೆ ಭೇಟಿಯಾಗಿದ್ದಾಗ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದ. ಅವನಿಗೆ ದೀರ್ಘ‌ ಕಾಲ ರಾಜಕೀಯದಲ್ಲಿ ಇರಬೇಕಾದ ಅವಕಾಶ ಇತ್ತು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದ, ನನ್ನೊಂದಿಗೆ ಜಗಳ ಮಾಡಿ  ಹರಪನಹಳ್ಳಿ ತಾಲೂಕನ್ನು 371 ಜೆ ವ್ಯಾಪ್ತಿಗೊಳಪಡಿಸಿದ್ದ.  ಅವನು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ.
– ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ.

ಎಂ.ಪಿ. ರವೀಂದ್ರ ಅವರ ಅಗಲಿಕೆ ನೋವು ತಂದಿದೆ. ನನ್ನ ಆತ್ಮೀಯ ಸ್ನೇಹಿತ ಬಹಳ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನಗಲಿದ್ದು, ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಡಿ.ಕೆ.ಶಿವಕುಮಾರ್‌, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ.

ರವೀಂದ್ರ ನಮಗೆಲ್ಲರಿಗೂ ಆತ್ಮೀಯ ಸ್ನೇಹಿತ ಸಹೋದರನಾಗಿ ಇದ್ದವರು. ಶಾಸಕರಾಗಿ, ಕೆಎಂಎಫ್ ನಿರ್ದೇಶಕರಾಗಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿನಲ್ಲಿ ಒಳ್ಳೆಯ ವ್ಯಕ್ತಿ  ಎನಿಸಿಕೊಂಡಿದ್ದರು. ಅವರ ಸಾವಿನ ನೋವು ಕುಟುಂಬಕ್ಕೆ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
– ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next