ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ವರುಣ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣ ಕ್ಷೇತ್ರದಲ್ಲಿ ತಮ್ಮ ತಂದೆಯವರ ಗೆಲುವಿಗೆ ದುಡಿದ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟ ನೆಗೆ ಶಕ್ತಿ ತುಂಬಿದ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಯ ತೀಂದ್ರ ಸಿದ್ದರಾಮಯ್ಯ ಅವರು, ವರುಣ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ ಅವರು 46 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲಿರುಳೆನ್ನದೇ, ಮಳೆ ಬಿಸಿಲನ್ನು ಲೆಕ್ಕಿಸದೇ ದುಡಿದರು. ಎಲ್ಲರ ಸಹಕಾರದಿಂದಾಗಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಲು ಸಾಧ್ಯವಾಯಿತು. ನನ್ನ ತಂದೆಯ ಗೆಲುವಿನ ಶ್ರೇಯಸ್ಸು ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.
ಚುನಾವಣೆಯಲ್ಲಿ ಗೆದ್ದ ನಂತರ ಬೀಗುವ ಅಗತ್ಯವಿಲ್ಲ. ಏಕೆಂದರೆ ಚುನಾವಣೆ ಪೂರ್ವದಲ್ಲಿ ಭರವಸೆಗಳನ್ನು ನೀಡಿದ್ದೇವೆ. ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 59 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಇಷ್ಟೊಂದು ಹಣವನ್ನು ಹೊಂದಿಸುವುದು ಸವಾಲಿನ ಕೆಲಸವಾಗಿದೆ. ಸವಾಲಿನ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಅವರು ನೆರವೇರಿಸುವ ವಿಶ್ವಾಸವಿದೆ ಎಂದು ಹೇಳಿದರು.
ಅನ್ನ ಭಾಗ್ಯ ಯೋಜನೆಯನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅನ್ನಭಾಗ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿತ್ತು. ಆದರೆ ಯೋಜನೆ ಜಾರಿಗೊಳಿಸಲು ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಅತ್ಯಂತ ಕೀಳು ಮಟ್ಟದ ರಾಜಕಾರಣ ಮಾಡಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಪಪ್ರಚಾರ ಮಾಡಿ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಅವರು ಆರೋಪಿಸಿದರು.
ಶಾಸಕರಾದ ದರ್ಶನ್ ಧ್ರುವನಾರಾಯಣ್, ಡಾ.ಡಿ. ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಅಧ್ಯಕ್ಷ ಆರ್.ಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಇದ್ದರು.