ಚಿಂತಾಮಣಿ: “ಹಲವು ವರ್ಷಗಳಿಂದ ನಿರಂತರವಾಗಿ ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪಅವರು ನಮಗೆ ಕೊಟ್ಟಿರುವ ಕಿರುಕುಳದಿಂದ ಬೇಸತ್ತಿದ್ದೇವೆ. ಅವರೊಂದಿಗೆ ರಾಜಿಯಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ತದ ನಂತರ ಆದ ಪರಿಣಾಮಗಳ ಬಗ್ಗೆ ನನಗೆ ಗೊತ್ತಿದೆ. ಮತ್ತೆ ಬೆನ್ನಿಗೆ ಚೂರಿ ಇರಿಸಿಕೊಳ್ಳಲು ನಾನು ಸಿದ್ಧನಿಲ್ಲ. ಸ್ಥಳೀಯವಾಗಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಪ್ರಮೇಯವೇ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗಿನ ಭೇಟಿಗೆ ಯಾವುದೇ ವಿಶೇಷವಾದ ಅರ್ಥ ಕಲ್ಪಿಸುವುದು ಸರಿಯಲ್ಲ. ಅದೊಂದು ಸೌಹಾರ್ದ ಯುತ ಭೇಟಿ’ ಎಂದು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದರು.
ಅಂಜನಿ ಬಡಾವಣೆಯಲ್ಲಿ ಭೇಟಿಯಾದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕರೆಯಂತೆ ಅವರನ್ನು ಭೇಟಿ ಮಾಡಿದ್ದಕ್ಕೆ ಕಾಂಗ್ರೆಸ್ ಸೇರ್ಪಡೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂದರು. ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಅವರ ಕುಟುಂಬವನ್ನು ಬಳಸಿಕೊಂಡ ಕೆಎಚ್‌ಎಂ, ಇಂದು ಅವರನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ವಾಣಿ ಕೃಷ್ಣಾರೆಡ್ಡಿ ಅವರನ್ನು ಚುನಾವಣೆಗೆ ನಿಲ್ಲಿಸಿ ಯಾರಿಗೆ ಬೆಂಬಲ ಸೂಚಿಸಿದರು ಎಂಬುದೂ ಗೊತ್ತಿದೆ ಎಂದು ದೂರಿದರು.
ದ್ರೋಹ: ಪ್ರತಿ ಬಾರಿಯೂ ಮಾತೃಪಕ್ಷ ಎಂದು ಹೇಳಿ ಕೊಳ್ಳುವ ಕಾಂಗ್ರೆಸ್‌ಗೆ ದ್ರೋಹ ಬಗೆದು ಕೊಂಡೇ ಬರುತ್ತಿದ್ದಾರೆ. ಇಂತಹ ವ್ಯಕ್ತಿ ಜತೆ ಈಗ ಹೊಂದಾಣಿಕೆ ಮಾಡಿಕೊಂಡರೆ ಮುಂದೆ ಜನ ನನ್ನನ್ನು, ಮೂರ್ನಾಲ್ಕು ಬಾರಿ ಮೋಸ ಹೋಗಿಯೂ ಮತ್ತೆ ಅವರ ಜತೆ ಹೇಗೆ ಹೊಂದಾಣಿಕೆ ಮಾಡಿಕೊಂಡಿರಿ ಎಂಬುದಾಗಿ ಪ್ರಶ್ನಿಸುತ್ತಾರೆಂದರು.
ಚಿಂತಾಮಣಿಯಲ್ಲಿ ಕ್ಷೀಣ: ಭಾಷಣ ಮಾಡುವಾಗ ನಮಗೆ ವ್ಯಕ್ತಿಗಿಂತಲೂ ಪಕ್ಷ ಮುಖ್ಯ ಎಂದು ಹೇಳುತ್ತಿರುವ ಕೆಎಚ್‌ಎಂ, ಇಂದು ಚಿಂತಾಣಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎಷ್ಟು ಬೆಳೆಸಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದರು.
ರಾಷ್ಟ್ರ ಹೈಕಮಾಂಡ್ ಭರವಸೆ ಕೊಟ್ಟರೆ ಯೋಚಿಸುವೆ: ಇನ್ನು ರಾಜ್ಯ ಹೈಕಮಾಂಡ್‌ಗಳ ಜತೆಯಲ್ಲಿ ಸ್ಥಳೀಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ. ಆದರೆ, ಯಾವುದೇ ಭರವಸೆ ಸಿಕ್ಕಿಲ್ಲ, ಮತ್ತು ಕೆಎಚ್‌ಎಂ ವಿಚಾರದಲ್ಲಿ ಅವರೂ ಅಸಹಾಯಕರಾಗಿದ್ದಾರೆ. ಹೀಗಾಗಿ ರಾಷ್ಟ್ರ ಮಟ್ಟದ ಹೈಕಮಾಂಡ್ ಭರವಸೆ ಕೊಟ್ಟಿದ್ದೇ ಆದಲ್ಲಿ, ಕಾಂಗ್ರೆಸ್ ಸೇರ್ಪಡೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆಂದರು.
ಬಿಜೆಪಿ ಸೇರ್ಪಡೆಗೂ ಮುಂದಾಗಿದ್ದೆ: 2019ರಲ್ಲಿ ಲೋಕಸಭಾ ಚುನಾವಣೆ ನಂತರ ನಾನು ಬಿಜೆಪಿ ಸೇರ್ಪಡೆಗೆ ಯೋಚಿಸಿದ್ದೆ. ಆದರೆ ತದ ನಂತರ ಆದ ವಿದ್ಯಮಾನದಿಂದ ಆ ಯೋಚನೆ ಕೈಬಿಟ್ಟೆ. ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಅವರು ಬಿಜೆಪಿ ಸೇರಿದ್ದಕ್ಕೆ ಆ ಯೋಚನೆಯಿಂದ ದೂರ ಸರಿದೆ. ಬಿಜೆಪಿ ಸೇರ್ಪಡೆಗೆ ಇಂದಿಗೂ ತನಗೆ ಆಹ್ವಾನವಿದೆ. ಆದರೆ,ಪ್ರಸ್ತುತದ ಸಂದರ್ಭದಲ್ಲಿಯಾವುದೇಪಕ್ಷಕ್ಕೆ ಸೇರುವ ಇಂಗಿತದಿಂದ ದೂರ ಉಳಿದಿದ್ದೇನೆಂದರು. ನಾನು ಸ್ವತಂತ್ರ: ನಾನು ರಾಜಕೀಯವಾಗಿ ಸ್ವತಂತ್ರನಾಗಿ ದ್ದೇನೆ. ಮುಂದಿನ ಯಾವುದೇ ನಿರ್ಧಾರವನ್ನು ಮುಳಬಾಗಿಲಿನ ನನ್ನ ಸ್ನೇಹಿತ ಕೊತ್ತೂರು ಮಂಜುನಾಥ್ ಅವರೊಟ್ಟಿಗೆ ತೆಗೆದುಕೊಳ್ಳುತ್ತೇನೆಂದರು.