ಕಲಬುರಗಿ: ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಅತಿವೃಷ್ಟಿಯಿಂದ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಸೇರಿ ಇತರ ಎಲ್ಲ ಬೆಳೆಗಳು ಸಂಪೂರ್ಣ ಹಾಳಾಗಿದ್ದರಿಂದ ಈ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಮಾಜಿ ಶಾಸಕ ಬಿ.ಆರ್. ಪಾಟೀಲ್ ಆಗ್ರಹಿಸಿ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ.
ಒಂದು ತಿಂಗಳಿಂದ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ರೈತಾಪಿ ವರ್ಗಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ. ಕಳೆದ 40 ವರ್ಷಗಳ ಮಳೆಯ ಸರಾಸರಿ ತೆಗೆದರೆ ಕಳೆದ ವರ್ಷ ಅತ್ಯಧಿಕವಾಗಿ ಅಂದರೆ ಸರಿಸುಮಾರು 1060 mm ಮಳೆ ಬೀಳುವ ಮೂಲಕ ಎಲ್ಲ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದವು, ಕೋವಿಡ್ ಸಂಕಷ್ಟದ ನಡುವೆ ಹೈರಾಣಾಗಿ ಬೆಳೆದ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋದರೂ ಸರಿಯಾದ ಪ್ರಮಾಣದ ವಿಮೆ ದೊರಕಲಿಲ್ಲ, ಹೀಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿರುವ ರೈತ ಮೊದಲೇ ತೊಂದರೆ ಇದ್ದು, ಈಗ ಸತತ ಮಳೆಯಿಂದ ಈಗಲೂ ಎಲ್ಲ ಬೆಳೆಗಳು ಹಾನಿಯಾಗಿದ್ದು, ದಿಕ್ಕು ತೋಚದಂತಾಗಿದೆ ಎಂದು ಕಷ್ಟದ ವಿವರಣೆಯ ಪತ್ರ ಬರೆದಿರುವುದನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸಕ್ತ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 748485 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಅದರಲ್ಲಿ ಶೇಕಡ 75ರಷ್ಟು ಭಾಗ ಅಂದರೆ 512493 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ, ಇನ್ನುಳಿದ 66717 ವಿನಕ್ಟರ್ ನಲ್ಲಿ ಹತ್ತಿ, 60381 ಹೆಕ್ಟರ್ ನಲ್ಲಿ ಹೆಸರು, 32542 ಹೆಕ್ಟರ್ ನಲ್ಲಿ ಉದ್ದು ಸೇರಿದಂತೆ 24938 ಹೆಕ್ಟರ್ ನಲ್ಲಿ ಸೋಯಾಬಿನ್ ಬಿತ್ತನೆಯಾಗಿದೆ. ಆದರೆ ಇನ್ನು ಸೆಪ್ಟೆಂಬರ್ ತಿಂಗಳು ಗತಿಸಿಲ್ಲ ಈಗಾಗಲೇ ಸರಿಸುಮಾರು 850 ಮಿಲಿಮೀಟರ್ ಮಳೆಯಾಗಿ ಆರ್ಥಿಕ ಬೆಳೆಯಾದ ತೊಗರಿಯು ಸಂಪೂರ್ಣವಾಗಿ ಹಾನಿಗೊಳಗಾಗುತ್ತಿದೆ. ಅದರಲ್ಲೂ ಪ್ರಸಕ್ತ ಅತಿವೃಷ್ಟಿಯಿಂದ ಸುಮಾರು 135000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣವಾಗಿ ನಾಶವಾಗಿ ಹೋಗಿವೆ.
ಇನ್ನು ಮುಂಗಾರು ಹಂಗಾಮಿನಲ್ಲಿ ಬೆಳೆದ ಉದ್ದು ಮತ್ತು ಹೆಸರಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ, ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯ ಪ್ರಕಾರ ಒಂದು ಕ್ವಿಂಟಾಲ್ ಹೆಸರಿಗೆ ಕನಿಷ್ಠ ರೂ 7275/- ಇರಬೇಕು, ಆದರೆ ಮಾರುಕಟ್ಟೆಯಲ್ಲಿ ರೂ 5000-5500/- ಮಾತ್ರ ಇದೆ, ಕನಿಷ್ಠ ಬೆಂಬಲ ಕಾಯ್ದೆ ಪ್ರಕಾರ ಬೆಂಬಲ ಬೆಲೆಗಿಂತ ಕಡಿಮೆ ದರ ಮಾರುಕಟ್ಟೆಯಲ್ಲಿದೆ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎನ್ನಲಾಗಿದೆ. ಆದರೆ ಒಂದೂ ಖರೀದಿ ಕೇಂದ್ರಗಳು ಪ್ರಾರಂಭವಾಗಿಲ್ಲ. ಹೀಗಾಗಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಬೆಳೆಗಳನ್ನು ಖರೀದಿಸಬೇಕು. ಆದರೆ ಸರಕಾರ ಕಣ್ಣು-ಕಿವಿ ಇಲ್ಲದಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಮತ್ತೆ ದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ: ಜೆ.ಪಿ.ನಡ್ಡಾ, ಅರುಣ್ ಸಿಂಗ್ ಭೇಟಿ
ಒಂದು ಕಡೆ ಅಪಾರ ಪ್ರಮಾಣದ ಮಳೆಯಿಂದ ಸಂಪೂರ್ಣ ಬೆಳೆಗಳು ಹಾನಿಯಾದರೆ, ಇನ್ನೊಂದು ಕಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ರೈತರ ನೆರವಿಗೆ ಬರಬೇಕಾದ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಇನ್ನು ವಿಮಾ ಕಂಪನಿಗಳಂತು ಅತಿವೃಷ್ಟಿಯಿಂದ ಆದ ಹಾನಿಗೂ ನೀಡುತ್ತಿರುವ ಪರಿಹಾರಕ್ಕೂ ಯಾವುದೇ ತಾಳ ಮೇಳವಿಲ್ಲ, ಒಟ್ಟಾರೆ ಫಸಲ್ ಭೀಮಾ ಯೋಜನೆ ವಿಮಾ ಕಂಪನಿಗಳ ಲಾಭಕ್ಕಾಗಿಯೇ ಮಾಡಲಾಗಿದೆ. ಸರ್ಕಾರಗಳು ರೈತರ ಪರವಾಗಿದ್ದರೋ ಅಥವಾ ಬಂಡವಾಳಶಾಹಿಗಳ ಪರವಾಗಿದ್ದಾರೋ ಎಂಬುದು ಇಲ್ಲಿ ಸ್ಪಷ್ಟ ವಾಗುತ್ತದೆ. ಆದುದರಿಂದ ದೇಶದ ಬೆನ್ನೆಲುಬಾದ ರೈತ ಇಂದು ಸಂಕಷ್ಟದಲ್ಲಿದ್ದಾನೆ, ನಮ್ಮದು ಕೃಷಿ ಪ್ರಧಾನವಾದ ದೇಶ ಹೀಗಾಗಿ ತಾವುಗಳು ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಬೆಳೆ ಹಾನಿಯ ಕುರಿತು ಸೂಕ್ತ ಸಮೀಕ್ಷೆ ನಡೆಸಿ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಕೋವಿಡ್ ನಿಂದ ಕಂಗಾಲಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿ ವಿನಂತಿಸಿದ್ದಾರೆ.