Advertisement

ಬಲವಂತ ಪಕ್ಷಾಂತರದ ಕಾಂಗ್ರೆಸ್‌ ಯತ್ನ ವಿಫ‌ಲ

06:05 PM Apr 24, 2023 | Team Udayavani |

ಕೋಲಾರ: ಹಣಕೊಟ್ಟು ಬಿಜೆಪಿ ಕಾರ್ಯಕರ್ತರನ್ನು ಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ದಾನಹಳ್ಳಿ,ಬೆಟ್ಟಬೆಣಜೇನಹಳ್ಳಿಯಲ್ಲಿ ಬಲವಂತ ಪಕ್ಷಾತರಕ್ಕೆ ಪ್ರಯತ್ನಿಸಿ ಕಾಂಗ್ರೆಸ್‌ ವಿಫಲವಾಗಿರುವುದೇ ಸಾಕ್ಷಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಲೇವಡಿ ಮಾಡಿದರು.

Advertisement

ತಾಲೂಕಿನ ಬೆಟ್ಟಬೆಣಜೇನಹಳ್ಳಿ, ನರಸಾಪುರ ಹೋಬಳಲಿಯ ದಾನಹಳ್ಳಿಗಳಲ್ಲಿ ಕೆಲವು ಬಿಜೆಪಿ ಮುಖಂಡರನ್ನು ಮಾತನಾಡಲು ಕರೆದುಕೊಂಡು ಹೋಗಿ, ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ ಬಳಿ ಹಾರ ಹಾಕಿಸಿ ಫೋಟೋ ತೆಗೆಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಎಂದು ಫೇಸ್‌ಬುಕ್‌ನಲ್ಲಿ ಪ್ರಚಾರ ನಡೆಸಿದ್ದರು. ಆದರೆ ಇದಕ್ಕೆ ಸೆಡ್ಡು ಹೊಡೆದ ಸದರಿ ಬಿಜೆಪಿ ಕಾರ್ಯಕರ್ತರು ನೇರವಾಗಿ ತಮ್ಮ ಬಳಿಗೆ ವಾಪಸ್ಸಾಗಿದ್ದು, ಕೊತ್ತೂರು ಮತ್ತು ಕಾಂಗ್ರೆಸ್ಸಿಗರ ಷಡ್ಯಂತ್ರಕ್ಕೆ ಶಾಕ್‌ ನೀಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಹೋಗುವ ಮಾತೇ ಇಲ್ಲ: ದಾನಹಳ್ಳಿ ಗ್ರಾಮದ ಶ್ರೀನಿವಾಸ್‌ ಪ್ರತಿಕ್ರಿಯಿಸಿ, ನಾನು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರ ಕಟ್ಟಾ ಅಭಿಮಾನಿ ಹಾಗೂ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ, ಎರಡು ಬಾರಿ ಶಾಸಕರಾಗಿ ಕೋಲಾರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈಗ ಅಧಿಕಾರ ಇಲ್ಲದಿದ್ದರೂ,ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ಅನುದಾನವನ್ನು ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಇಂತಹ ನಾಯಕರನ್ನು ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಮಾತೇ ಇಲ್ಲ ಎಂದರು.

ನಮ್ಮ ನಾಯಕನಿಗೆ ನಾವು ಮೋಸ ಮಾಡುವುದಿಲ್ಲ ಮೋಸ ಮಾಡಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ಕಾಂಗ್ರೆಸ್‌ ಮುಖಂಡರು ನಮ್ಮನ್ನ ಕರೆದು ಏನೋ ಮಾತನಾಡಬೇಕು ಎಂದು ಹೇಳಿ ಹೂವಿನ ಹಾರ ಹಾಕಿ ಸೇರ್ಪಡೆಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ವರ್ತೂರು ಪ್ರಕಾಶ್‌ ಅವರನ್ನು ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರು ಎಚ್ಚರದಿಂದ ಇರಿ: ಕಾಂಗ್ರೆಸ್‌ ಮುಖಂಡರು ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿ ಮುಖಂಡರನ್ನು ಕರೆಸುವುದು ಮಾತನಾಡುವುದು ಫೋಟೋ ತೆಗೆದು ವಾಟ್ಸಪ್‌ ಮತ್ತು ಫೇಸುºಕ್‌ಗಳಲ್ಲಿ ಹರಿಬಿಡುತ್ತಿದ್ದಾರೆ ಇದನ್ನು ನಿಷ್ಠಾವಂತ ಕಾರ್ಯಕರ್ತರು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

Advertisement

ಕಾಂಗ್ರೆಸ್‌ಗೆ ಸೋಲಿನ ಭಯ ಶುರುವಾಗಿದೆ: ಮಾಜಿ ಸಚಿವ ಆರ್‌ ವರ್ತೂರ್‌ ಪ್ರಕಾಶ್‌ ಮಾತನಾಡಿ, ನನ್ನ ಕಾರ್ಯಕರ್ತರಿಗೆ ಕೋಟಿ ಕೋಟಿ ಹಣ ಕೊಟ್ಟರು ನನ್ನನ್ನು ಬಿಟ್ಟು ಹೋಗಲಾರರು. ಕಾಂಗ್ರೆಸ್‌ ಪಕ್ಷದವರು ಹಾರ ಹಾಕಿದ ಒಂದೇ ನಿಮಿಷದಲ್ಲಿ ನನಗೆ ಕರೆ ಮಾಡಿ ತಿಳಿಸುತ್ತಾರೆ, ಕಾಂಗ್ರೆಸ್‌ ಪಕ್ಷದವರಿಗೆ ಸೋಲಿನ ಭಯ ಶುರುವಾಗಿದ್ದು, ನಮ್ಮ ಕಾರ್ಯಕರ್ತರಿಗೆ ಹಣದ ಆಸೆ ತೋರಿಸಿ ಹಾರ ಹಾಕಿದರೆ ಏನು ಪ್ರಯೋಜನವಿಲ್ಲ ಎಂದರು.

ಜನತೆ ನನ್ನ ಕೈಬಿಡಲ್ಲ: ಕೋಲಾರದಲ್ಲಿ ಕಾಂಗ್ರೆಸ್‌ ಪಕ್ಷ ಇಲ್ಲ, ಹಳ್ಳಿಗಳಿಗೆ ಹೋಗಿ ಹಣ ಕೊಟ್ಟು ಪಟಾಕಿ ಹೊಡೆಸಿ ಪಕ್ಷ ಕಟ್ಟಲಿಕ್ಕೆ ಆಗುವುದಿಲ್ಲ. ಗ್ರಾಮಾಂತರ ಪ್ರದೇಶದ ಪ್ರತಿ ಗ್ರಾಮದ ಪ್ರತಿ ಮನೆಯ ಮಗನಾಗಿ ನಾನು ಇದ್ದೇನೆ. ತಂದೆ ತಾಯಿಗಳು ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರ ತಂಟೆಗೆ ಬಂದರೆ, ನಾನು ಸುನಾಮಿಯಾಗಿ ಧೂಳಿಪಟವನ್ನಾಗಿ ಮಾಡುತ್ತೇನೆ ಎಂದು ಗುಡುಗಿದರು.

ಬಿಜೆಪಿ ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್‌, ಸೊನ್ನೇನಹಳ್ಳಿ ಗ್ರಾ.ಪಂ ಸದಸ್ಯರಾದ ಶ್ರೀನಿವಾಸ್‌, ದಾನವನಹಳ್ಳಿ ಗ್ರಾಮದ ರಾಜಪ್ಪ ಮತ್ತು ಶ್ರೀನಿವಾಸ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next