Advertisement

ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ!

10:46 PM Jul 26, 2021 | Team Udayavani |

ಯಾವುದೇ ಕಾರ್ಯ ಅಥವಾ ಯಾವುದೇ ವಿಚಾರವಾಗಿರಲಿ ಬಿ.ಎಸ್‌.ಯಡಿಯೂರಪ್ಪ ಅವರು ಒಮ್ಮೆ ಮಾತು ಕೊಟ್ಟರೆ ಮುಗಿಯಿತು, ಎಷ್ಟೇ ಕಠಿಣ ಸನ್ನಿವೇಶ ಎದುರಾದರೂ ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ.

Advertisement

ಏನನ್ನು ಹೇಳುತ್ತಾರೋ ಅದನ್ನೇ ಮಾಡುತ್ತಿದ್ದರು. ಪಕ್ಷದ ನಾಯಕರಿಗಾಗಲಿ, ಕಾರ್ಯಕರ್ತರಿಗಾಗಲಿ ಅಥವಾ ಯಾರಿಗೆ ಆಗಲಿ ಏನಾದರೂ ಮಾತು ಕೊಟ್ಟರೆ, ಅದನ್ನು ಈಡೇರಿಸಿಯೇ ಮುಂದೆ ಸಾಗುತ್ತಿದ್ದರು. ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಿರಲಿಲ್ಲ. ಅನವಶ್ಯಕವಾಗಿ ಏನನ್ನು ಮಾತನಾಡುತ್ತಿರಲಿಲ್ಲ. ಅವರ ವ್ಯಕ್ತಿತ್ವದಲ್ಲೇ ಎಲ್ಲವೂ ಅಡಗಿತ್ತು. ಇನ್ನೊಬ್ಬರಿಗೆ ನೋವು ಮಾಡುವ ಅಥವಾ ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡುವ ಯಾವ ಗುಣವು ಅವರಲ್ಲಿ ಇಲ್ಲ. ದೇವರು ಮತ್ತು ಆಧ್ಯಾತ್ಮದ ಬಗ್ಗೆ ವಿಶೇಷ ನಂಬಿಕೆ ಇಟ್ಟುಕೊಂಡಿದ್ದಾರೆ. ಅವರ ಕಾರ್ಯವೈಖರಿಯೂ ಹಾಗೆಯೇ ಇತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದವರಾಗಿ ದ್ದರಿಂದ ಸಂಘದ ವಿಚಾರಗಳಿಗೆ ಎಂದೂ ವ್ಯತಿರಿಕ್ತವಾಗಿ ನಡೆದುಕೊಂಡವರಲ್ಲ. ನುಡಿದಂತೆ ನಡೆಯುವ ಮಹಾನ್‌ ನಾಯಕರಾಗಿದ್ದಾರೆ.

ನನಗಂತೂ ಬಹಳ ಆತ್ಮೀಯರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವರನ್ನು ಭೇಟಿ ಮಾಡಿದ್ದು ಕಡಿಮೆ. ಆದರೆ, ಏನೇ ಇದ್ದರೂ ಅವರಿಗೆ ಹೇಳಿದ ತಕ್ಷಣವೇ ಸಕರಾತ್ಮಕ ಸ್ಪಂದನೆ ಸಿಗುತ್ತದೆ. ಮಹತ್ವಾಕಾಂಕ್ಷೆ ಮತ್ತು ದೂರದೃಷ್ಟಿ ಹೊಂದಿರುವ ವಿಶೇಷ ವ್ಯಕ್ತಿತ್ವ ಅವರದ್ದಾಗಿದೆ. ಇನ್ನೆರೆಡು ವರ್ಷ ಅವರೇ ಮುಖ್ಯಮಂತ್ರಿಯಾಗಿದ್ದರೆ ಚೆನ್ನಾಗಿ ಇರುತಿತ್ತು. ಅವರು ಕೇವಲ ಒಂದು ಸಮುದಾಯದ ನಾಯಕರಾಗಿರಲಿಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಹೀಗೆ ಎಲ್ಲ ಸಮುದಾಯಗಳಿಗೂ ನಾಯಕರಾಗಿದ್ದರು  ಮತ್ತು ಎಲ್ಲರೂ ಮೆಚ್ಚುವಂತಹ ನಾಯಕರಾಗಿದ್ದಾರೆ.

ಪಕ್ಷದ ಹೈಕಮಾಂಡ್‌ ಹೇಳಿದಂತೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹೈಕಮಾಂಡ್‌ ನಿರ್ಧಾರವನ್ನು ಯಾರು ಪ್ರಶ್ನೆ ಮಾಡಲು ಸಾಧ್ಯವಿಲ್ಲ ಮತ್ತು ಅದಕ್ಕೆ ವಿರುದ್ಧವಾಗಿ ಏನೂ ಹೇಳಲು ಆಗುವುದಿಲ್ಲ. ಯಡಿಯೂರಪ್ಪನವರು  ತಮ್ಮ ಆಡಳಿತಾವಧಿಯಲ್ಲಿ ಎಲ್ಲ ಸಮುದಾಯಗಳ ಏಳ್ಗೆಗೂ ಸಮಾನವಾಗಿ ಶ್ರಮಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಮಾನವಾಗಿ ಸಿಗಬೇಕು ಎಂಬ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ನಿರ್ಗಮನ ಬೇಸರ ತಂದಿದೆಯಾದರೂ, ಪಕ್ಷದ ನಿಲುವನ್ನು ಪ್ರಶ್ನೆ ಮಾಡುವಂತಿಲ್ಲ.

 

Advertisement

-ರಾಮಚಂದ್ರ ಗೌಡ, ಮಾಜಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next