ಸಾಗರ: ತಾಲೂಕಿನಾದ್ಯಂತ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕೆಲವು ಕಡೆಗಳಲ್ಲಿ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಗರದ ಶ್ರೀ ಟಾಕೀಸ್‌ನಲ್ಲಿ ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರ ನೋಡಲು ಬೆಳಗ್ಗೆ 7 ಘಂಟೆಯ ಶೋ ವೀಕ್ಷಿಸಲು ಆರು ಗಂಟೆಗೆ ಭಾರಿ ಸಂಖ್ಯೆಯಲ್ಲಿ ಯುವ ಜನರು ಚಿತ್ರಮಂದಿರ ಎದುರು ಜಮಾಯಿಸಿದ್ದರು.
ಒಂದೆಡೆ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯುತ್ತಿತ್ತು. ಇನ್ನೊಂದೆಡೆ ಚಿತ್ರಮಂದಿರದ ಸುತ್ತಲೂ ಕಟೌಟ್‌ಗಳು ರಾರಾಜಿಸುತ್ತಿತ್ತು. ಪ್ರಥಮ ಸೋ ಎಲ್ಲಾ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿದ್ದು ಜನರ ಹರ್ಷೋದ್ಗಾರ ಶಿಳ್ಳೆ, ಚಪ್ಪಾಳೆ ಜೋರಾಗಿತ್ತು. ಕೆಲವರು ತಮ್ಮ ನೆಚ್ಚಿನ ನಟನನ್ನು ಪರದೆಯ ಮೇಲೆ ಕಂಡು ಭಾವುಕರಾದ ದೃಶ್ಯ ಕಂಡುಬಂತು. ಇನ್ನು ಕೆಲವರು ಮತ್ತೆ ಹುಟ್ಟಿ ಬನ್ನಿ ಪವರ್ ಸ್ಟಾರ್ ಎಂಬ ಕೂಗು ಕೇಳಿಬರುತ್ತಿತ್ತು.
ಮಧ್ಯಾಹ್ನ 1.30ರ ಶೋಗೆ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಅವರ ಪುತ್ರಿ ಡಾ. ರಾಜನಂದಿನಿ ಜೇಮ್ಸ್ ಚಿತ್ರ ವೀಕ್ಷಣೆ ಮಾಡಿ ಭಾವುಕರಾದರು. ನಂತರ ಮಾತನಾಡಿದ ಕಾಗೋಡು ಒಬ್ಬ ನಟ ತನ್ನ ಜೀವಿತ ಅವಧಿಯಲ್ಲಿ ಮಾಡಿದ ಒಳ್ಳೆಯ ಕಾರ್ಯಗಳು ನಂತರವೂ ಹೇಗೆ ಉಳಿಯುತ್ತದೆ ಎನ್ನುವುದಕ್ಕೆ ಪುನೀತ್ ದೊಡ್ಡ ಉದಾಹರಣೆ ನಾವು ಎಂತಹ ದೊಡ್ಡ ವ್ಯಕ್ತಿಯಾದರೂ ಹೇಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂಬುದನ್ನು ಪುನೀತ್ ತೋರಿಸಿಕೊಟ್ಟಿದ್ದಾರೆ ಎಂದ ಅವರು ಭಾವುಕರಾದರಲ್ಲದೆ ಸಿನಿಮಾವನ್ನು ಮೆಚ್ಚಿಕೊಂಡರು.
ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮಗಳು: ಪವರ್ ಸ್ಟಾರ್ ಪುನೀತ್ ಫುಡ್ ಕಾರ್ನರ್ ಹಾಗೂ ಸ್ವಾತಿ ವೆಜ್ ವತಿಯಿಂದ ಚಿತ್ರಮಂದಿರದ ಎದುರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸುಭಾಷ್ ನಗರ ಯುವಜನ ಬಳಗ, ಬಿಳಲಮಕ್ಕಿ ಯೋಜನಾ ಸಂಘ, ಹಾಗೂ ಸಹಾರಾ ಇಂಡಿಯಾ ಯೋಜನೆ ಟ್ರಸ್ಟ್ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಲೋಟ ಹಾಗೂ ತಟ್ಟೆ ವಿತರಣೆ ಮಾಡಿದರು. ನಗರದ ವನಶ್ರೀ ಶಾಲೆಯ ಮಕ್ಕಳಿಗೆ ಎಂಜಿ ಟ್ರೇಡರ್ಸ್ ಮಾಲೀಕರು ಹಾಗೂ ಸ್ನೇಹಿತರಿಂದ ಉಪಹಾರ ವಿತರಿಸಿದರು.