ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಮತ್ತು ದೇವ್ ಘಾಟ್ ಭಾಗದಲ್ಲಿ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯದಲ್ಲಿ ಭ್ರಷ್ಟಾಚಾರವಾಗುತ್ತಿದೆ ಇದರಿಂದ ಕಾಮಗಾರಿ ಕಳಪೆಯಾಗಿದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಮುಖಂಡ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಸಾಯಂಕಾಲ ತಾಲ್ಲೂಕಿನ ಆನೆಗೊಂದಿ ಮಲ್ಲಾಪುರ ರಾಂಪುರ ಭಾಗದಲ್ಲಿ ವಿಜಯನಗರ ಕಾಲುವೆ ದುರಸ್ತಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು ಈಗ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ನಡೆಸಲಾಗುತ್ತಿದೆ.ಈ ಕಾಮಗಾರಿಯಲ್ಲಿ ವ್ಯಾಪಕವಾದ ಭ್ರಷ್ಟಾಚಾರದಿಂದ ಕಾಮಗಾರಿ ಕಳೆಪೆಯಾಗಿ ನಡೆಸಲಾಗುತ್ತಿದೆ. ಈ ಭಾಗದ ರೈತರ ಕೃಷಿಕಾರರ ಸಲಹೆ ಸೂಚನೆ ಕೇಳದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿ ಮಾಡುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಕೊನೆಯ ಮಟ್ಟದ ರೈತರಿಗೆ ನೀರು ತಲುಪುವುದಿಲ್ಲ .ರೈತರು ಹಲವು ಬಾರಿ ವೈಜ್ಞಾನಿಕ ರೀತಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
ಅಧಿಕಾರಿಗಳು ಹೇಳಿದಂತೆ ಜನಪ್ರತಿನಿಧಿಗಳು ಕುಣಿಯುತ್ತಿದ್ದು ಇದರಿಂದ ಕಾಲುವೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ಅನ್ಸಾರಿ ಆರೋಪಿಸಿದರು.ಕೂಡಲೇ ಕಾಮಗಾರಿಯನ್ನು ಸ್ಥಗಿತ ಮಾಡಿ ರೈತರು ನೀಡಿದ ಸಲಹೆಯಂತೆ ಕಾಮಗಾರಿಯನ್ನು ನಡೆಸಬೇಕು.ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕಾಲುವೆಯಲ್ಲಿ ಸೋರಿಕೆ ಕಂಡು ರೈತರ ಬೆಳೆ ನಷ್ಟವಾಗುತ್ತದೆ.ರೈತರು ಮತ್ತು ಜನರ ತೆರಿಗೆ ಹಣದಲ್ಲಿ ಇಂತಹ ಭ್ರಷ್ಟಾಚಾರ ನಡೆಸಿ ಕಾಲುವೆ ಕಾಮಗಾರಿ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ.ಜಲಸಂಪನ್ಮೂಲ ಇಲಾಖೆಯ ಅಭಿಯಂತರರು ಕಾಮಗಾರಿ ಸ್ಥಳದಲ್ಲಿರದೆ ಕಚೇರಿಗಳಲ್ಲಿ ಕುಳಿತು ಕಾಮಗಾರಿಯ ಬಿಲ್ ಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು.
ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್: ಮುಂಬರುವ ಜಿ ಪಂ, ತಾ ಪಂ ಚುನಾವಣೆಯಲ್ಲಿ ತಾಲ್ಲೂಕಿನ ಎಲ್ಲಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿದೆ.ರಾಜ್ಯದಲ್ಲಿ ಬಿಜೆಪಿ ವ್ಯಾಪಕ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ರಾಜ್ಯದ ಜನರು ಬೆಂಬಲಿಸಲಿದ್ದಾರೆ ಎಂದರು.
ಮುಖಂಡನ ಮನೆಗೆ ಭೇಟಿ:ಇತ್ತೀಚೆಗೆ ಕೋ ಬಿಡ್ ನಿಂದ ಮೃತರಾದ ಕಾಂಗ್ರೆಸ್ ಯುವ ಮುಖಂಡ ಡಾಕ್ಟರ್ ಅಮರೇಶ ಬಂಡಿ ಮಲ್ಲಾಪುರ ನಿವಾಸಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸಂಗಾಪುರದ ರಜನಿಕಾಂತ್ ಆನೆಗೊಂದಿಯ ಈಜಿ ಬಾಬು ಪ್ರದೀಪ್ ಕುಪ್ಪರಾಜು ಸೇರಿದಂತೆ ಆನೆಗೊಂದಿ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.