ಚಿಕ್ಕಬಳ್ಳಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಚ್ಚರಿ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸೋತಿರುವ ಬಿಜೆಪಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಬೆಂಬಲಿಗರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ತಳಮಳ ಸೃಷ್ಟಿಯಾಗಿದ್ದು, ರಾಜಕೀಯ ಅನಿಶ್ಚಿತತೆಯಲ್ಲಿ ಸುಧಾಕರ್ ಸಿಲುಕಿದ್ದಾರಾ ಎನ್ನುವ ಮಾತು ಕ್ಷೇತ್ರದ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಹೌದು, ಚುನಾವಣೆಯಲ್ಲಿ ಸೋತ ಬಳಿಕ ಡಾ.ಕೆ.ಸುಧಾಕರ್ ಬಿಜೆಪಿಯ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಪಾಲ್ಗೊಳ್ಳದೇ ಸಾಕಷ್ಟು ಅಂತರ ಕಾಯ್ದುಕೊಂಡಿರುವುದೇ ಈ ಪ್ರಶ್ನೆಯ ಉದ್ಭವಕ್ಕೆ ಕಾರಣವಾಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಮಾಜಿ ಸಚಿವ ಸುಧಾಕರ್ ಕಾಂಗ್ರೆಸ್ ಕದ ತಟ್ಟಿದ್ದಾರೆಂಬ ಹೇಳಿಕೆ ಕೂಡ ಇದನ್ನು ಪುಷ್ಟೀಕರಿಸಿದೆ.
ಅಂತರ ಕಾಯ್ದುಕೊಳ್ಳುತ್ತಿರುವ ಸುಧಾಕರ್: ತಿಂಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಕೇಂದ್ರ ನಾಯಕರ ಸಮ್ಮುಖದಲ್ಲಿ ನಿಗದಿಯಾಗಿದ್ದ ಸಭೆ ಯನ್ನು ಕೂಡ ರಾಜ್ಯ ನಾಯಕರ ಸೂಚನೆಯಂತೆ ದಿಢೀರ್ ರದ್ದುಗೊಳಿಸಲಾಯಿತು. ಅದೇ ರೀತಿ ಜಿಲ್ಲಾ ಕೇಂದ್ರದಲ್ಲಿ ಮಾಜಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆಯಬೇಕಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ರಾತ್ರೋ ರಾತ್ರಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಬಾಗೇಪಲ್ಲಿಗೆ ಸ್ಥಳಾಂತರ ಮಾಡಲಾಯಿತು. ಹೀಗಾಗಿ ಸುಧಾಕರ್ ಬಹುತೇಕ ಬಿಜೆಪಿ ಚಟುವಟಿಕೆಗಳೊಂದಿಗೆ ಚುನಾವಣೆ ನಂತರ ಸಂಪೂರ್ಣ ವಿರಾಮ ಹಾಕಿದಂತೆ ಅಂತರ ಕಾಯ್ದುಕೊಳ್ಳುತ್ತಿರುವುದು ಎದ್ದು ಕಾಣುತ್ತಿದ್ದು, ಅವರ ರಾಜಕೀಯ ಮುಂದಿನ ನಡೆ ಚರ್ಚೆಗೆ ಗ್ರಾಸವಾಗಿದೆ.
ಸುಧಾಕರ್ ವಿರುದ್ಧ ತಿರುಗಿ ಬಿದ್ದಿದ್ದರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ಪಕ್ಷದ ಬಹುತೇಕ ಶಾಸಕರು, ಸಚಿವರಾಗಿದ್ದವರು ಅದರಲ್ಲೂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಸೇರಿದಂತೆ ಸುಧಾಕರ್ ವಿರುದ್ಧ ತಿರುಗಿ ಬಿದ್ದಿದ್ದರು. ಪಕ್ಷ ಸೋಲಿನಲ್ಲಿ ಸುಧಾಕರ್ ಬಹುಪಾಲು ಇದೆ ಎನ್ನುವ ಆರೋಪ ಕೂಡ ಮಾಡಿದ್ದರು. ಹೀಗಾಗಿ ಸುಧಾಕರ್ ತಮ್ಮ ಸೋಲಿನ ಜೊತೆಗೆ ಪಕ್ಷದ ಸೋಲಿನಿಂದ ಕಂಗೆಟ್ಟು ಹಲವು ದಿನಗಳ ಕಾಲ ವಿದೇಶಕ್ಕೂ ತೆರಳಿದ್ದರು. ಇದೀಗ ಕಳೆದೊಂದು ವಾರದಿಂದ ಕ್ಷೇತ್ರದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಬೆಂಬಲಿಗರೊಂದಿಗೆ ಪಾಲ್ಗೊಳ್ಳುತ್ತಿರುವುದು ಬಿಟ್ಟರೆ ಬಿಜೆಪಿಯ ಸಭೆ, ಸಮಾರಂಭ, ವೇದಿಕೆಯಲ್ಲಿ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿರುವುದಂತೂ ಸತ್ಯ.
ಕಮಲ ಅರಳಿಸಿದ ಖ್ಯಾತಿ ಸುಧಾಕರ್‌ದು!: ಜಿಲ್ಲೆ ಕಾಂಗ್ರೆಸ್‌ನ ಭದ್ರನೆಲೆ, ಇಲ್ಲಿ ಬಿಜೆಪಿ ಶಾಸಕ ಸ್ಥಾನ ಬಿಡಿ, ಜಿಪಂ, ತಾಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿಗೂ ಅಧಿಕಾರ ಹಿಡಿಯುವಷ್ಟು ಪ್ರಬಲವಾಗಿ ಬೆಳೆದಿಲ್ಲ. ಆದರೆ 2018 ರಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್‌ನಿಂದ ಗೆದ್ದ ಸುಧಾಕರ್ 2019 ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ 3ನೇ ಬಾರಿಗೆ ಶಾಸಕರಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು. ಆದರೆ, ಸುಧಾಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿದ್ದರೂ ಪಕ್ಷದ ಸಭೆ, ಸಮಾರಂಭಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದಿರುವುದು ಒಂದೆಡೆಯಾದರೆ ಹಾಗೂ ಮತ್ತೂಂದೆಡೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬ ವದಂತಿ ಹರಡುತ್ತಿದ್ದು, ಮುಂದಿನ ಅವರ ನಡೆ ಬಗ್ಗೆ ಕುತೂಹಲ ಕೆರಳಿಸಿದೆ.
ಕುತೂಹಲ ಕೆರಳಿಸಿದ ಪ್ರದೀಪ್ ಈಶ್ವರ್ ಹೇಳಿಕೆ: ಮಾಜಿ ಸಚಿವ ಸುಧಾಕರ್ ಕಾಂಗ್ರೆಸ್ ಕದ ತಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆಂಬ ಸ್ಫೋಟಕ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸುಧಾಕರ್ ಕಾಂಗ್ರೆಸ್ ಸೇರಲು ಪ್ರಯತ್ನಿಸುತ್ತಿದ್ದಾರಾ, ಆ ಮೂಲಕ ಬಿಜೆಪಿಗೆ ಗುಡ್ ಬೈ ಹೇಳುತ್ತಾರಾ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಯಾವುದರ ಬಗ್ಗೆಯೂ ಗುಟ್ಟು ಬಿಟ್ಟು ಕೊಡದೆ ಮಾಜಿ ಸಚಿವರು, ರಾಜಕೀಯ ಅನಿಶ್ಚಿತತೆಯಲ್ಲಿ ತೊಡಗಿರುವುದು ಎದ್ದು ಕಾಣುತ್ತಿದೆ.
-ಕಾಗತಿ ನಾಗರಾಜಪ್ಪ