ರಾಮನಗರ: ಚನ್ನಪಟ್ಟಣದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ಜೀವನದ ಹೊಸ ಅಧ್ಯಾಯ ಆರಂಭವಾಗುವುದಿಲ್ಲ. ಇಲ್ಲಿಂದಲೇ ಅವರ ರಾಜಕೀಯ ಜೀವನ ಅಂತ್ಯವಾಗುತ್ತದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್ ರಾಜಕೀಯ ಜೀವನದ ಮುಸ್ಸಂಜೆಯಲ್ಲಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಿರುವ ಅವರ ರಾಜಕೀಯ ಜೀವನ ಚನ್ನಪಟ್ಟಣದಿಂದಲೇ ಪ್ರಾರಂಭವಾಗಿದೆ. ಮುಂದೆ ಇಲ್ಲಿಂದಲೇ ಅಂತ್ಯವೂ ಆಗಬಹುದು ಎಂದು ಭವಿಷ್ಯ ನುಡಿದರು.
ಚನ್ನಪಟ್ಟಣಕ್ಕೆ ಸ್ವಾಗತ:
ಕ್ಷೇತ್ರದ ಮತದಾರರು, ಜನರು ಒತ್ತಾಯಿಸಿದರೆ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ ಮಾಡುತ್ತೇನೆಂದು ಘೋಷಣೆ ಮಾಡಿದ್ದು, ಅವರ ಸ್ಪರ್ಧೆಯನ್ನು ಸ್ವಾಗತಿಸುತ್ತೇನೆ. ಅವರೇ ಸ್ಪರ್ಧೆ ಮಾಡುತ್ತೇನೆಂದು ಹೇಳುವ ಮೂಲಕ ತಮ್ಮ ಸಹೋದರ ಸೇರಿ ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸಲು ಸಮರ್ಥರು ಯಾರೂ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದರು. ಅಮಾಯಕರ ಮೇಲೆ ಕೇಸ್ ಹಾಕಿಸುವುದು, ಜನತೆಯ ನೆಮ್ಮದಿ ಹಾಳು ಮಾಡುವುದೇ ಕನಕಪುರ ಮಾಡೆಲ್ ಎಂದು ಲೇವಡಿ ಮಾಡಿದರು.
ತಮ್ಮನ (ಡಿ.ಕೆ.ಸುರೇಶ್) ಸೋಲಿನಿಂದ ಡಿಕೆಶಿ ಹತಾಶರಾಗಿದ್ದಾರೆ. ಚನ್ನಪಟ್ಟಣದಲ್ಲಿ ವಾಮಮಾರ್ಗದಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿಗೆ ಅಧಿಕಾರಿಗಳನ್ನು ಕರೆಸಿಕೊಂಡು ಒಂದು ಕೋಮಿನ 6 ಸಾವಿರ ಮತ ಸೇರಿಸಿ ಎಂದು ಧಮ್ಕಿ ಹಾಕಿದ್ದಾರೆಂದು ಆರೋಪಿಸಿದರು.