ಬೆಂಗಳೂರು: ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್. ಸೀತಾರಾಮ್ ಮತ್ತು ಮಾಜಿ ಐಆರ್‌ಎಸ್ ಅಧಿಕಾರಿ ಎಚ್ ಪಿ ಸುಧಾಮ್ ದಾಸ್ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ (MLC) ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶನಿವಾರ ನಾಮನಿರ್ದೇಶನ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೆಸರುಗಳನ್ನು ಅಂತಿಮಗೊಳಿಸಿ, ಅನುಮೋದನೆಗಾಗಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ನಾಲ್ವರು ಹಿರಿಯ ಸಚಿವರು ನಾಮನಿರ್ದೇಶಿತರ ಬಗ್ಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿದ್ದರು.
ಮೋಹನ್ ಕುಮಾರ್ ಕೊಂಡಜ್ಜಿ, ಪಿ.ಆರ್.ರಮೇಶ್, ಮತ್ತು ಸಿ.ಎಂ.ಲಿಂಗಪ್ಪ ಅವರ ಸೇವಾವಧಿ ಪೂರ್ಣಗೊಂಡ ನಂತರ ಅವರ ನಿವೃತ್ತಿಯಿಂದಾಗಿ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಮಾಡಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಸೀತಾರಾಮ್ ಅವರನ್ನು ಶಿಕ್ಷಣತಜ್ಞ ಕೋಟಾದ ಅಡಿಯಲ್ಲಿ, ಉಮಾಶ್ರೀ ಅವರು ನಟಿಯಾಗಿ ನೀಡಿದ ಕೊಡುಗೆಗಾಗಿ ಮತ್ತು ದಾಸ್ ಅವರನ್ನು ಸಾಮಾಜಿಕ ಕಾರ್ಯಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ.
ಸಿದ್ದರಾಮಯ್ಯ ಅವರ ಆಪ್ತರು ಎನ್ನಲಾದ ಉಮಾಶ್ರೀ ಅವರು ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದರು. ಸೀತಾರಾಮ್ ಶಿಕ್ಷಣತಜ್ಞರಾಗಿದ್ದರೆ, ಅವರ ಪುತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಜಾರಿ ನಿರ್ದೇಶನಾಲಯದ (ಇಡಿ) ಮಾಜಿ ಅಧಿಕಾರಿ ಸುಧಾಮ್ ದಾಸ್ ಅವರು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ದಾಸ್ ಅವರ ತಂದೆ ಎಚ್. ಪುಟ್ಟದಾಸ್ ಅವರು ಈ ಹಿಂದೆ ಶಿವಕುಮಾರ್ ಪ್ರತಿನಿಧಿಸುತ್ತಿದ್ದ ಹಿಂದಿನ ಸಾತನೂರು ಕ್ಷೇತ್ರದ ಮಾಜಿ ಶಾಸಕರಾಗಿದ್ದರು.