ಚಿತ್ರದುರ್ಗ: ಮಾಜಿ ಸಚಿವ ತಿಪ್ಪೇಸ್ವಾಮಿ (76) ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾದರು. ಮೃತರು ಪತ್ನಿ ವಿಮಲಮ್ಮ, ಪುತ್ರ ಕೆ.ಟಿ. ಕುಮಾರಸ್ವಾಮಿ, ಪುತ್ರಿ ಕೆ.ಟಿ. ಭವ್ಯ ಸೇರಿ ಅಪಾರ ಬೆಂಬಲಿಗರನ್ನು ಅಗಲಿದ್ದಾರೆ.
ಕಳೆದ ಜು.31ರಂದು ತಿಪ್ಪೇಸ್ವಾಮಿ ಅವರ ಮೆದುಳಿನ ಬಲಭಾಗಕ್ಕೆ ಪಾರ್ಶ್ವವಾಯು ಹೊಡೆದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಚಳ್ಳಕೆರೆ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ತಿಪ್ಪೇಸ್ವಾಮಿ, ಎಚ್.ಡಿ. ದೇವೇಗೌಡ ಹಾಗೂ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠ ಸ್ಥಾಪನೆಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಾಯಕ ಸಮುದಾಯಕ್ಕೆ ರಾಜಕೀಯ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದ ಅವರಿಗೆ 2017ರಲ್ಲಿ ರಾಜ್ಯ ಸರ್ಕಾರ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಬುಡಕಟ್ಟು ನಾಯಕ ಸಮುದಾಯದವರಾದ ತಿಪ್ಪೇಸ್ವಾಮಿ, ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲು ಸೌಲಭ್ಯ ಒದಗಿಸಲು ರಾಜಕೀಯ ಗುರು ಎಚ್.ಡಿ. ದೇವೇಗೌಡರೊಂದಿಗೆ ಹೋರಾಟ ಮಾಡಿ ಯಶಸ್ವಿಯಾಗಿದ್ದರು. ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ನಾಯಕ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲು ಸೌಲಭ್ಯ ದೊರೆತಿತ್ತು.ನಾಯಕ ಸಮುದಾಯದ ಪದ್ಧತಿ ಪ್ರಕಾರ ಬುಧವಾರ ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ಚಳ್ಳಕೆರೆಯಲ್ಲಿ ನೆರವೇರಿತು.
ಸಂತಾಪ: ತಿಪ್ಪೇಸ್ವಾಮಿ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಸಂತಾಪ ಸೂಚಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಬೆಂಗಳೂರಿನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.