ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜಕೀಯ ಪ್ರವೇಶಿಸಿ ಯಶಸ್ಸು ಹಾಗೂ ವೈಫಲ್ಯ ಎರಡನ್ನೂ ಕಂಡ ಉದಾಹರಣೆಗಳ ನಡುವೆಯೇ ಅಣ್ಣಾಮಲೈ ಬಿಜೆಪಿ ಸೇರ್ಪಡೆಯ ಹಿಂದೆ ಭವಿಷ್ಯದ ರಾಜಕೀಯ ಲೆಕ್ಕಾಚಾರ ಅಡಗಿದೆ.
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದವರು ಸಂಸತ್ ಹಾಗೂ ವಿಧಾನಸಭೆ ಮೆಟ್ಟಿಲೇರಿದ್ದಾರೆ. ವೈಯಕ್ತಿಕ ವರ್ಚಸ್ಸು ಹಾಗೂ ಸಮುದಾಯದ “ಶಕ್ತಿ’ ಹೊಂದಿರುವರು ರಾಜಕಾರಣದಲ್ಲಿ ಯಶಸ್ಸು ಪಡೆದಿದ್ದಾರೆ. ಜನಪ್ರಿಯತೆ ಆಧಾರದಲ್ಲಿ “ಎಂಟ್ರಿ’ ಕೊಟ್ಟಿರುವ ಅಣ್ಣಾಮಲೈ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ಹಿಂದೆ ಕೋದಂಡರಾಮಯ್ಯ, ಎಚ್.ಟಿ.ಸಾಂಗ್ಲಿಯಾನ ಅವರು ಸಂಸತ್ ಸದಸ್ಯರಾಗಿದ್ದು, ಪ್ರಸ್ತುತ ಬಿ.ಸಿ.ಪಾಟೀಲ್ ಮೂರು ಬಾರಿ ಶಾಸಕರಾಗಿ ಸಚಿವರಾಗಿರುವ ಯಶಸ್ಸಿನ “ಫಾರ್ಮುಲಾ’ ಆಧಾರದಲ್ಲಿಯೇ ಅಣ್ಣಾಮಲೈ ಸೇರ್ಪಡೆಯೂ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಣ್ಣಾಮಲೈ ಪಕ್ಷ ಸೇರ್ಪಡೆ ತಮಿಳುನಾಡಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಬಿಜೆಪಿ ಸಂಘಟನೆ ಬಲಪಡಿಸಲು ಎಂದು ಮೇಲ್ನೋಟಕ್ಕೆ ಕಂಡುಬಂದರೂ ಕರ್ನಾಟಕದಲ್ಲೂ ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡೇ ಕಾರ್ಯತಂತ್ರ ರೂಪಿಸಲಾಗಿದೆ.
ಬೆಂಗಳೂರು, ಚಾಮರಾಜನಗರ, ಕೋಲಾರದ ಕೆಜಿಎಫ್ ಸೇರಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಮಿಳು ಮತದಾರರೇ ನಿಣಾರ್ಯಕ. ತಮಿಳು ಭಾಷಿಕರಲ್ಲಿ ಅಣ್ಣಾಮಲೈ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಹೀಗಾಗಿ, ರಾಜ್ಯದಲ್ಲೂ ಅವರ ಮೂಲಕ ಮತ ಸೆಳೆಯ ಬಹುದು ಎಂಬುದು ಬಿಜೆಪಿಯ ಗುರಿ ಎಂದು ಹೇಳಲಾಗುತ್ತಿದೆ.
ತಮಿಳುನಾಡು ಕರೂರು ಮೂಲದ ಕುಪ್ಪುಸ್ವಾಮಿ ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ ಸೇವೆ ಆರಂಭಿಸಿ ಉಡುಪಿ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಜನ ಪ್ರಿಯತೆಗಳಿಸಿದ್ದರು. ರಾಜ್ಯದ ಹಲವೆಡೆ ಕೆಲಸ ಮಾಡಿದ್ದ ಅವರು ಇದ್ದಕ್ಕಿದ್ದಂತೆ ದಿಢೀರ್ ಸ್ವಯಂ ನಿವೃತ್ತಿ ಘೋಷಿಸಿ ಒಂದು ವರ್ಷ ಮೌನ ವಹಿಸಿದ್ದ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಒಂದು ವರ್ಷಗಳ ಕಾಲ ನಿರಂತರವಾಗಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು ವೇದಿಕೆ ಸಿದ್ಧಪಡಿಸಿಕೊಂಡೇ ರಾಜಕೀಯ ಪ್ರವೇಶ ಮಾಡಿದ್ದಾರೆ. ಅವರು ನಿರ್ವಹಿಸಬೇಕಾದ “ಹೊಣೆಗಾರಿಕೆ”ಯ ನೀಲನಕ್ಷೆಯೂ ಸಿದ್ಧವಾಗಿದೆ . ಪಕ್ಷ ಸೇರ್ಪಡೆ ನಂತರ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಲಾಗುತ್ತಿದೆ.
ನಿರಾಸೆಯೂ ಇದೆ: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕೋದಂಡರಾಮಯ್ಯ ರಾಜಕೀಯ ಪ್ರವೇಶಿಸಿ ಜನತಾದಳದಿಂದ ಚಿತ್ರದುರ್ಗದ ಸಂಸದರಾಗಿದ್ದರು. ನಗರ ಪೊಲೀಸ್ ಆಯುಕ್ತರಾಗಿದ್ದ ಎಚ್.ಟಿ.ಸಾಂಗ್ಲಿಯಾನ ಬಿಜೆಪಿಯಿಂದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದರು. ಪ್ರಸ್ತುತ ಬಿ.ಸಿ.ಪಾಟೀಲ್ ಅವರು ಹಿರೇಕೆರೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ.
ಅಬ್ದುಲ್ ಅಜೀಂ ಅವರು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರೂ ಒಮ್ಮೆ ವಿಧಾನಪರಿಷತ್ ಸದಸ್ಯರಾಗಿದ್ದರು. ಅದಕ್ಕೂ ಮುಂಚೆ ಸಿ.ಚನ್ನಿಗಪ್ಪ ಅವರು ಜನತಾದಳದಿಂದ ಕೊರಟಗೆರೆ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು. ಇವೆಲ್ಲವೂ ಯಶಸ್ವಿ ಉದಾಹರಣೆಗಳು. ಮತ್ತೂಂದೆಡೆ ಜೆಡಿಎಸ್‌ನಿಂದ ಸುಭಾಷ್ ಭರಣಿ, ನಾರಾಯಣಗೌಡ ಅವರು ಕ್ರಮವಾಗಿ ಗಾಂಧಿನಗರ, ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಮಲ್ಲೇಶ್ವರಂನಿಂದ ಕಾಂಗ್ರೆಸ್‌ನಿಂದ ಬಿ.ಕೆ.ಶಿವರಾಂ, ಚಾಮರಾಜಪೇಟೆಯಿಂದ ಜಿ.ಎ.ಬಾವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ ನಿರಾಸೆಯ ಕಥೆಯೂ ಇದೆ. ಈ ಪೈಕಿ ಜಿ.ಎ.ಬಾವಾ ಬಿಟ್ಟರೆ ಉಳಿದವರು ಒಂದೇ ಚುನಾವಣೆಗೆ ಸುಸ್ತಾಗಿ ಸಕ್ರಿಯ ರಾಜಕಾರಣದಿಂದಲೇ ದೂರವುಳಿದಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಶಂಕರ ಬಿದರಿ ಅವರೂ ಸಹ ರಾಜಕೀಯ ಪ್ರವೇಶಿಸಿ ನಂತರ ದೂರವುಳಿದವರೇ. ಮತ್ತೂಂದೆಡೆ ಅನುಪಮಾ ಶೆಣೈ ತಮ್ಮದೇ ಪಕ್ಷ ಕಟ್ಟಿ ಪ್ರಯೋಗ ಮಾಡಿ ವಿಫಲರಾದ ಉದಾಹರಣೆಯೂ ಇದೆ.
ಕರ್ನಾಟಕದಲ್ಲಿ ನನಗೆ ಹೆಚ್ಚು ಪ್ರೀತಿ ಸಿಕ್ಕಿದೆ. ಪಕ್ಷ ಯಾವ ಕೆಲಸ ಹೇಳುತ್ತದೆಯೋ ಅದನ್ನು ಸಾಮಾನ್ಯ ಕಾರ್ಯಕರ್ತನಾಗಿ ಮಾಡುತ್ತೇನೆ. ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲೂ ನಾನು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಹೀಗಾಗಿ, ಕರ್ನಾಟಕ ನನಗೆ ಅಚ್ಚುಮೆಚ್ಚು.