Advertisement

ಕ್ರಿಕೆಟ್‌ನಿಂದ ರಾಜಕಾರಣ, ಪ್ರಧಾನಿ ಹುದ್ದೆಯತನಕ

06:00 AM Jul 27, 2018 | |

ಇಸ್ಲಾಮಾಬಾದ್‌: ಇಮ್ರಾನ್‌ ಅಹಮದ್‌ ಖಾನ್‌ ಅಲಿಯಾಸ್‌ ಇಮ್ರಾನ್‌ ಖಾನ್‌. ಮೂಲತಃ ರಾಜಕಾರಣಿಯಾಗಿ ಹೆಸರು ಗಳಿಸಿದ್ದಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಪಾಕಿಸ್ಥಾನ ಬಲಾಡ್ಯ ದೇಶವಾಗಿ ಗುರುತಿಸಿಕೊಂಡಿದ್ದ ಸಂದರ್ಭದಲ್ಲಿ ಇಮ್ರಾನ್‌ ತಂಡದ ಪ್ರಮುಖ ಆಟಗಾರನಾಗಿ, ನಾಯಕನಾಗಿ ಜನಪ್ರಿಯರಾಗಿದ್ದರು.

Advertisement

ಕ್ರಿಕೆಟ್‌ನಿಂದ ದೂರ ಸರಿದ ಬಳಿಕ ರಾಜಕಾರಣದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ ಇಮ್ರಾನ್‌ ಖಾನ್‌ ಪ್ರಧಾನಿ ಹುದ್ದೆಗೇರುವಷ್ಟು ಬೆಳೆದಿದ್ದಾರೆ. ಪಾಕಿಸ್ತಾನ್‌ ತೆಹ್ರಿಕ್‌ ಇ-ಇನ್ಸಾಫ್ ಪಕ್ಷವನ್ನು 1996ರಲ್ಲಿ ಸ್ಥಾಪಿಸಿದರು. ಅಪಘಾನಿಸ್ತಾನ ಗಡಿಯಂಚಿನಲ್ಲಿರುವ ಪಾಕಿಸ್ಥಾನದ ಖೈಬರ್‌ ಫ‌ಖು¤ಂಖ್ವಾ ಪ್ರಾಂತ್ಯದಲ್ಲಿ ಅವರ ಪಕ್ಷಕ್ಕೆ ಅತ್ಯಂತ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ಆ ದೇಶದ  ಅತಿದೊಡ್ಡ ಪಕ್ಷವನ್ನಾಗಿ ಬೆಳೆಸಿದ ಕೀರ್ತಿ ಇಮ್ರಾನ್‌ ಖಾನ್‌ ಅವರದ್ದು.

1952ರಲ್ಲಿ, ಸಿವಿಲ್‌ ಇಂಜಿನಿಯರ್‌ ಇಕ್ರಾಮುಲ್ಲ ಖಾನ್‌ ನಿಯಾಜ್‌ ಮತ್ತು ಶೌಖತ್‌ ಖಾನುಮ್‌ ದಂಪತಿ ಮಗನಾಗಿ, ನಾಲ್ವರು ಸೋದರಿಯರಿಗೆ ಪ್ರೀತಿಯ ಸೋದರನಾಗಿ ಜನಿಸಿದ ಇಮ್ರಾನ್‌ ಖಾನ್‌ ಅವರು ಬಾಲ್ಯದಲ್ಲೇ ಕ್ರಿಕೆಟ್‌ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಅಷ್ಟೇ ಅಲ್ಲ, 1975ರಲ್ಲಿ ಆಕ್ಸ್‌ಫ‌ರ್ಡ್‌ ವಿವಿಯಲ್ಲಿ ತತ್ವಶಾಸ್ತ್ರ, ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡರು. ಅಷ್ಟರಲ್ಲಾಗಲೇ ಕ್ರಿಕೆಟ್‌ನಲ್ಲಿ ಹಿಡಿತ ಸಾಧಿಸಿದ್ದರು. 1970ರಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇಮ್ರಾನ್‌ 1971ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಒಂದಿಷ್ಟು ವರ್ಷ ರಾಷ್ಟ್ರೀಯ ತಂಡದ ಮೆಚ್ಚುಗೆಯ ಕ್ರಿಕೆಟಿಗರಾಗಿ, 1992ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದರು.

ರಾಜಕಾರಣ ಶಕೆ ಆರಂಭ: ಕ್ರಿಕೆಟ್‌ ನಿವೃತ್ತಿಯ ಬಳಿಕ ಇಮ್ರಾನ್‌ ಸುಮ್ಮನೇ ಕುಳಿತುಕೊಳ್ಳಲಿಲ್ಲ. ಮೂರ್‍ನಾಲ್ಕು ವರ್ಷ ತಮ್ಮ ಭವಿಷ್ಯದ ಯೋಜನೆ ಸಿದ್ಧಪಡಿಸಿ, 1996ರಲ್ಲಿ ಹೊಸ ಪಕ್ಷ ಘೋಷಿಸಿದರು. 1997ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆಗಿಳಿದು ಸೋಲನುಭವಿಸಿದರು. ಆದರೆ ಧೃತಿಗೆಡದ ಇಮ್ರಾನ್‌, ಪಾಕಿಸ್ಥಾನದ ಮಾಜಿ ಸರ್ವಾಧಿಕಾರಿ, ಅಧ್ಯಕ್ಷ ಜ.ಪರ್ವೇಜ್‌ ಮುಷರ್ರಫ್ ಜತೆಯೂ ಕೈಜೋಡಿಸಿ ರಾಜಕಾರಣ ಮುಂದುವರಿಸಿದರು. ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಇಮ್ರಾನ್‌, 2014ರಲ್ಲಿ ಭ್ರಷ್ಟಾಚಾರದ ವಿರುದ್ಧ ಪಾಕಿಸ್ಥಾನವೇ ಕಣ್ಣರಳಿಸಿ ನೋಡುವಂತೆ ನವಾಜ್‌ ಷರೀಫ್ ನೇತೃತ್ವದ ಪಿಎಂಎಲ್‌ಎನ್‌ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬಲ ಪ್ರದರ್ಶಿಸಿದರು. ವೈಯಕ್ತಿಕ ಜೀವನದಲ್ಲಿಯೂ ಹಲವಾರು ರಸವತ್ತಾಗಿರುವ ಕತೆಗಳನ್ನೂ ಹೊಂದಿದ್ದಾರೆ ಅವರು. ಗೃಹಸ್ಥಾಶ್ರಮಕ್ಕೆ ಪ್ರವೇಶಿಸುವ ಮೊದಲೇ ಹಲವು ರೀತಿಯ ಸಂಬಂಧಗಳನ್ನೂ ಹೊಂದಿದ್ದರು. ಒಟ್ಟು ಮೂರು ವಿವಾಹವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಾಜಿ ಪತ್ನಿ ರೆಹಾಂ ಖಾನ್‌ ಇಮ್ರಾನ್‌ ಖಾನ್‌ ವಿರುದ್ಧ ಬರೆದ ಪುಸ್ತಕ ಭಾರಿ ಪ್ರಚಾರ ಪಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next