ಮಂಗಳೂರು: ವ್ಯವಸ್ಥೆ ವಿರುದ್ಧ ಸಿಡಿದೆದ್ದು, ಕೊನೆಗೆ ಸರಕಾರಿ ಹುದ್ದೆಗೇ ರಾಜೀನಾಮೆ ನೀಡಿ ರಾಜ್ಯದೆಲ್ಲೆಡೆ ಸುದ್ದಿಯಾಗಿದ್ದ ಕೂಡ್ಲಿಗಿ ಉಪ ವಿಭಾಗದ ಮಾಜಿ ಡಿವೈಎಸ್ಪಿ, ಉಡುಪಿ ಮೂಲದ ಅನುಪಮಾ ಶೆಣೈ ಈಗ ತನ್ನದೇ ಆದ ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಸಿದ್ಧರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆ ಶೆಣೈ ಅವರ ಹೊಸ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಪೊಲೀಸ್ ಇಲಾಖೆಗೆ ಗುಡ್‌ಬೈ ಹೇಳಿದ ಬಳಿಕ ಕಳೆದ ಒಂದೂವರೆ ವರ್ಷದಿಂದ ಶೆಣೈ ತಟಸ್ಥವಾಗಿದ್ದರು. ಈಗ ರಾಜಕೀಯಕ್ಕೆ ಇಳಿಯುವ ಸಂಕಲ್ಪ ಮಾಡಿದ್ದಾರೆ. ಈ ಮೂಲಕ ದುರಾಡಳಿತ ವ್ಯವಸ್ಥೆ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಇದಕ್ಕಾಗಿ ಗಾಂಧಿ ಜಯಂತಿಯಂದೇ ಶೆಣೈ ತಾನು ರಾಜ ಕೀಯಕ್ಕೆ ಪಾದಾರ್ಪಣೆ ಮಾಡುವ ತೀರ್ಮಾನ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ಬಗ್ಗೆ ಉಡುಪಿ ಜಿಲ್ಲೆಯ ಉಚ್ಚಿಲದ ತನ್ನ ನಿವಾಸದಲ್ಲಿ ಸೋಮವಾರ ಸಮಾನ ಮನಸ್ಕರ ಜತೆ ಸಮಾಲೋಚನ ಸಭೆಯನ್ನೂ ನಡೆಸಿದ್ದಾರೆ.
ಹೊಸ ಪಕ್ಷ ಸ್ಥಾಪನೆ ಬಗ್ಗೆ “ಉದಯವಾಣಿ’ ಯೊಂದಿಗೆ ಮಾತನಾಡಿದ ಅನುಪಮಾ ಶೆಣೈ, “ನಾನು ರಾಜ್ಯದಲ್ಲಿ ಹೊಸದೊಂದು ಪಕ್ಷ ಸ್ಥಾಪಿಸುವುದಕ್ಕೆ ಮುಂದಾಗಿದ್ದೇನೆ. ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರನ್ನು ಜನರ ಕೊಂಡಿಯಾಗಿಸುವ ಉದ್ದೇಶದಿಂದ ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ. ಭ್ರಷ್ಟಾಚಾರ ನಿಯಂತ್ರಣ, ಅಸ್ಪೃಶ್ಯತೆ ತೊಡೆದು ಹಾಕುವಿಕೆ, ಮಹಿಳಾ ಪರ ಮತ್ತು ಪರಿಸರ ಸಂರಕ್ಷಣೆ ಉದ್ದೇಶವನ್ನಿಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ತೀರ್ಮಾನ ಮಾಡಿದ್ದೇನೆ.
ಪಕ್ಷದ ಬಗ್ಗೆ ಸಲಹೆ ಆಹ್ವಾನಿಸಲು ಸಾಮಾಜಿಕ ತಾಣಗಳ ಮೂಲಕ ರಾಜ್ಯದ ಜನತೆಗೆ ಈ ವಿಷಯವನ್ನು ರವಾನಿಸಲಾಗುತ್ತಿದೆ. ಜತೆಗೆ ಹಲವು ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳ ಸಮಾನ ಮನಸ್ಕ ಪ್ರಮುಖರನ್ನು ನೇಮಿಸಿ ಸೂಕ್ತ ಸಲಹೆ-ಅಭಿಪ್ರಾಯ ಪಡೆಯಲಾಗುವುದು. ಈ ನಿಟ್ಟಿನಲ್ಲಿ ಅ. 15ರಂದು ಪಕ್ಷ ರಚನೆ ಬಗ್ಗೆ ಎರಡನೇ ಸಭೆ ನಡೆಯಲಿದೆ. ನವೆಂಬರ್ ಮೊದಲ ವಾರದಲ್ಲಿ ಪಕ್ಷದ ಬಗ್ಗೆ ಅಧಿಕೃತ ಘೋಷಣೆ ಸಂಭವವಿದೆ. ಪಕ್ಷ ಹುಟ್ಟು ಹಾಕಲು ಎಲ್ಲ ಪ್ರಕ್ರಿಯೆ ನಡೆಯುತ್ತಿದೆ’ ಎಂದಿದ್ದಾರೆ.
ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ: ಬಡ ಕುಟುಂಬದಿಂದ ಬಂದು ಸಾಧನೆಯೊಂದಿಗೆ ಡಿವೈಎಸ್‌ಪಿ ಹುದ್ದೆ ಪಡೆದವರು ಅನುಪಮಾ ಶೆಣೈ. ಕೂಡ್ಲಿಗಿ ತಾಲೂಕಿನಲ್ಲಿ 2016ರಲ್ಲಿ ಡಿವೈಎಸ್‌ಪಿಯಾಗಿದ್ದ ಶೆಣೈ ಕಾರ್ಯನಿರ್ವಹಿಸುತ್ತಿದ್ದರು. ಆಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಟಿ.ಪಿ. ಪರಮೇಶ್ವರ್ ಅವರ ದೂರವಾಣಿ ಕರೆ ಸ್ವೀಕರಿಸಿರಲಿಲ್ಲ ಎಂಬ ಕಾರಣ ನೀಡಿ ಶೆಣೈ ಅವರನ್ನು ವಿಜಯಪುರ ಜಿಲ್ಲೆ ಇಂಡಿ ತಾಲೂಕಿಗೆ ವರ್ಗಾವಣೆ ಮಾಡಿಸಲಾಗಿತ್ತು. ಆದರೆ ದಕ್ಷ ಅಧಿಕಾರಿಯಾಗಿದ್ದ ಅನುಪಮಾ ವರ್ಗಾವಣೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪರಿಣಾಮ ಮತ್ತೆ ಅವರನ್ನು ಕೂಡ್ಲಿಗಿಗೆ ಡಿವೈಎಸ್‌ಪಿಯಾಗಿ ವರ್ಗಾಯಿಸಲಾಗಿತ್ತು. ಅನಂತರವೂ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದ ಅನುಪಮಾ ತಾಲೂಕಿನಲ್ಲಿ ನಡೆಯುತ್ತಿದ್ದ ಲಿಕ್ಕರ್ ಲಾಬಿ ವಿರುದ್ಧ ಕಾನೂನು ಕ್ರಮ ಜರಗಿಸುತ್ತಿದ್ದರು. ಇದರ ಪರಿಣಾಮ ಅನುಪಮಾ ಅವರ ವಿರುದ್ಧ ಸ್ವತಃ ಸಚಿವ ಪರಮೇಶ್ವರ್ ಅವರೇ ಬಹಿರಂಗವಾಗಿ ತಿರುಗಿಬಿದ್ದಿದ್ದರು.
ಅನುಪಮಾ ಕೂಡ ಸಚಿವರ ವಿರುದ್ಧವೇ “ಸ್ಟೇಟಸ್ ವಾರ್’ ಶುರು ಮಾಡಿದ್ದರು. ಆದರೆ ತನ್ನ ಹೋರಾಟಕ್ಕೆ ಸರಕಾರದ ಕಡೆಯಿಂದ ಸೂಕ್ತ ಬೆಂಬಲ ದೊರೆಯದಿದ್ದಾಗ ವ್ಯವಸ್ಥೆ ಬಗ್ಗೆಯೇ ಬೇಸತ್ತು 2016 ಜೂನ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು.
ಸವಾಲು ಎದುರಿಸಲು ಸಿದ್ಧ
ಹೊಸದೊಂದು ರಾಜಕೀಯ ಪಕ್ಷ ಸ್ಥಾಪನೆ ಮಾಡುವುದು ಸುಲಭದ ಕೆಲಸವಲ್ಲ. ಹಲವು ಸವಾಲುಗಳಿದ್ದು ಎದುರಿಸಲು ಸಿದ್ಧವಾಗಿದ್ದೇನೆ. ಈಗ ಪಕ್ಷ ಸ್ಥಾಪಿಸುವ ದೃಢ ಸಂಕಲ್ಪ ಮಾಡಿದ್ದೇನೆ. ಈ ರಾಜಕೀಯ ವ್ಯವಸ್ಥೆಯಲ್ಲಿ ಗೆದ್ದು, ನಮ್ಮಲ್ಲಿನ ಅವ್ಯವಸ್ಥೆ ಸರಿಪಡಿಸಬಹುದು ಎಂಬ ವಿಶ್ವಾಸವಿದೆ. ಜನರ ಸಲಹೆಗಳನ್ನು ಪಡೆದು, ಅವರು ನೀಡುವ ಮಾರ್ಗದರ್ಶನದಂತೆ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಪಕ್ಷ ಸ್ಥಾಪನೆಗೆ ಅನುಮತಿ ದೊರೆತರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿಗದಿತ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.
-ಅನುಪಮಾ ಶೆಣೈ
– ಧನ್ಯಾ ಬಾಳೆಕಜೆ