ಮೈಸೂರು: ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಕಣ ರಂಗೇರು ತ್ತಿರುವಂತೆಯೇ ಕಾಂಗ್ರೆಸ್ ಮುಖಂಡ, ಚಾಮರಾಜನಗರ ಕ್ಷೇತ್ರದ ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೈ ಪಾಳಯವನ್ನು ಬಿಡಲು ತೀರ್ಮಾನಿಸಿರುವ ಮಾಜಿ ಸಂಸದ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕಾಗಲವಾಡಿ ಎಂ.ಶಿವಣ್ಣ, ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಯಾಗುವ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಸೇರುತ್ತೇನೆ: ಕಾಂಗ್ರೆಸ್ ಪಕ್ಷವನ್ನು ತೊರೆಯುವ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗಲವಾಡಿ ಶಿವಣ್ಣ, ಸದ್ಯದಲ್ಲೇ ತಾವು ಬಿಜೆಪಿ ಸೇರಲಿದ್ದು, ಎರಡೂ ಕ್ಷೇತ್ರಗಳ ಉಪ ಚುನಾವಣೆಗೂ ಮುನ್ನವೇ ಬಿಜೆಪಿ ಸೇರ್ಪಡೆ ಯಾಗುತ್ತೇನೆ.
ಹಲವು ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿರುವ ತಮ್ಮನ್ನು ಕಡೆಗಣಿಸಲಾಗಿದ್ದು, ಕಾಂಗ್ರೆಸ್ ಪಕ್ಷದ ಸ್ಥಿತಿಯೂ ಉತ್ತಮವಾಗಿಲ್ಲ. ಅಲ್ಲದೆ ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಸಹ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದೇನೆ.
ಈ ಸಂಬಂಧ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಜತೆ ಮಾತುಕತೆ ನಡೆಸಿದ್ದೇನೆ ಎಂದರು. ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹಿರಿಯ ರಾಜಕೀಯ ಮುತ್ಸದ್ದಿ ಯಾಗಿದ್ದು, ಅವರ ನಾಮಬಲದಿಂದ ರಾಜಕೀಯದಲ್ಲಿ ಮೇಲೇರಿದವರೇ ಇದೀಗ ಪ್ರಸಾದ್ ಅವರನ್ನು ಟೀಕಿಸುತ್ತಿರುವುದು ಬೇಸರ ಮೂಡಿಸಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ, ಮೂರ್‍ನಾಲ್ಕು ದಿನಗಳಲ್ಲಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಇದಲ್ಲದೆ ಬೇರೆ ಪಕ್ಷದ ಪ್ರಭಾವಿ ನಾಯಕರು ಸಹ ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದರು.