ಹಾವೇರಿ: ಅತಿವೃಷ್ಟಿಯಿಂದ ಅಪಾರ ನಷ್ಟ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದಿರುವುದು ಹಾಗೂ ಸಾಲಬಾಧೆ ತಾಳಲಾರದೇ ಅನೇಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಆತಂಕ ಮೂಡಿಸಿವೆ.
ಮಾರ್ಚ್‌ನಲ್ಲಿ ಕೊರೊನಾ ಕಾಲಿಟ್ಟಾಗ ಬೆಳೆ ಮಾರಾಟ ಮಾಡಲಾಗದೇ ರೈತರು ಸಂಕಷ್ಟ ಎದುರಿಸಿದ್ದರು. ಆದರೂ ಆ ಸಮಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಕಡಿಮೆ. ಆದರೆ, ಮೇಲಿಂದ ಮೇಲೆ ಬರುತ್ತಿರುವ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದರಿಂದ ಬ್ಯಾಂಕ್, ಫೈನಾನ್ಸ್, ಕೈಗಡ ಹೀಗೆ ವಿವಿಧೆಡೆ
ಮಾಡಿರುವ ಸಾಲ ತೀರಿಸಲಾಗದೇ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕ ಹುಟ್ಟಿಸಿದೆ.
ಬೆಳೆ ಹಾನಿ: ರೈತರು ಈ ಸಲ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. 2015-16ನೇ ಸಾಲಿನಲ್ಲಿ ಭೀಕರ ಬರದಿಂದ ಮಂಡ್ಯ ಹೊರತುಪಡಿಸಿದರೆ ಹಾವೇರಿ ಜಿಲ್ಲೆಯಲ್ಲೇ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರ ಆತ್ಮಹತ್ಯೆ ಸರಣಿ ನಂತರದ ವರ್ಷಗಳಲ್ಲೂ ಮುಂದುವರಿದಿದ್ದರೂ ಸಂಖ್ಯೆಯಲ್ಲಿ ಇಳುಮುಖವಾಗಿತ್ತು. ಇಷ್ಟು ವರ್ಷ ಮಳೆ ಅಭಾವದಿಂದ ಬೆಳೆ ಹಾನಿಯಾಗಿದ್ದರೆ, ಈ ಸಲ ಅತಿಯಾದ ಮಳೆಯೇ ರೈತರನ್ನು ಕಂಗೆಡಿಸಿದೆ. ಬೆಳೆ ನಷ್ಟ, ಮಾಡಿದ ಸಾಲ ತೀರಿಸಲಾಗದೇ ಕಂಗೆಟ್ಟು ನೇಣಿಗೆ ಕೊರಳೊಡ್ಡುತ್ತಿದ್ದಾರೆ.
ಇದನ್ನೂ ಓದಿ:2022ರೊಳಗೆ ಸರ್ವರಿಗೂ ಸೂರು ! 22 ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣ
ಅಕ್ಟೋಬರ್ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಅದರಲ್ಲೂ ಕಟಾವು ಹಂತದಲ್ಲಿದ್ದ ಬೆಳೆ ಮಳೆಗೆ ಸಿಲುಕಿ ನಷ್ಟವಾಗಿದೆ. ಶೇಂಗಾ, ಹತ್ತಿ, ಈರುಳ್ಳಿ, ಮೆಕ್ಕೆಜೋಳ ಬೆಳೆ ಅಪಾರ ಪ್ರಮಾಣದಲ್ಲಿ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟಕ್ಕೆ ಇದುವರೆಗೆ ರೈತರಿಗೆ ಪರಿಹಾರವೂ ಸಿಕ್ಕಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೊನಾ ಆರಂಭದಲ್ಲಿ ಬೆಳೆ ಮಾರಾಟ ಮಾಡಲಾಗದೇ ರೈತರು ಸಮಸ್ಯೆ ಎದುರಿಸುವಂತಾಗಿತ್ತು. ಸದ್ಯ
ಮಾರುಕಟ್ಟೆಯಲ್ಲಿ ಅನೇಕ ಬೆಳೆಗಳಿಗೆ ಯೋಗ್ಯ ದರವೂ ಇಲ್ಲದಿದ್ದರಿಂದ ರೈತರು ಮಾಡಿದ ಸಾಲ ತೀರಿಸಲಾಗದೇ ತೊಂದರೆ ಅನುಭವಿಸುತ್ತಿರುವ ರೈತರು ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.