ಧಾರವಾಡ: ಪಿಎಸ್‌ಐ ಅಕ್ರಮ ಪ್ರಕರಣದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಅಮಾನತು ಈವರೆಗೂ ಆಗಿಲ್ಲ. ಯಾವ ಸಚಿವರೂ ಪದವಿ ಬಿಟ್ಟು ಕೊಟ್ಟಿಲ್ಲ. ಇವರಲ್ಲಿ ನೈತಿಕ, ಭೌತಿಕ ಜವಾಬ್ದಾರಿ ಎರಡೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಅಕ್ರಮ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುವುದು ಗೃಹ ಸಚಿವರ ಜವಾಬ್ದಾರಿ. ಪಿಎಸ್‌ಐ ನೇಮಕಾತಿ ನಡೆಸೋದು ಪೊಲೀಸ್ ಇಲಾಖೆ. ಇದು ಗೃಹ ಸಚಿವರ ಹತೋಟಿಯಲ್ಲೇ ಇಲ್ಲ. ಭ್ರಷ್ಟಾಚಾರದ ಒಂದೊಂದೇ ಪ್ರಕರಣಗಳು ಹೊರಬರುತ್ತಿವೆ. ನಾನು ಸಿಎಂ ಇದ್ದಾಗ ಸಾಕಷ್ಟು ಪಿಎಸ್‌ಐ ನೇಮಕಾತಿ ನಡೆದಿವೆ. ಒಂದು ಕಡೆಯೂ ಅಕ್ರಮ ಹೊರ ಬಂದಿಲ್ಲ. ಆಯಾ ಇಲಾಖೆಯ ಸಚಿವರು ಅವರವರ ಇಲಾಖೆ ಮೇಲೆ ಜವಾಬ್ದಾರಿ ಹೊಂದಿರಬೇಕು ಎಂದರು.
ಅಜಾನ್ ಹಾಗೂ ಸುಪ್ರಭಾತ ವಿಚಾರಕ್ಕೆ ಬಗ್ಗೆ ಪ್ರತಿಕ್ರಿಯಿಸಿದ ಮೊಯ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊಸರಿನಲ್ಲಿ ಕಲ್ಲು ಹುಡಕುವ ಪ್ರಯತ್ನ ಮಾಡುತ್ತಿವೆ. ಶಾಂತವಾದ ನೀರನ್ನು ಕಲಕುವ ಕೆಲಸ ನಡೆಯುತ್ತಿದ್ದು, ಇದರಿಂದ ಸಮನ್ವಯದ ಆಡಳಿತ ನಡೆಯುವುದಿಲ್ಲ. ಅಧಿಕಾರ ನಡೆಸುವವರು ಜವಾಬ್ದಾರಿಯುತವಾಗಿ ಅಧಿಕಾರ ನಡೆಸಬೇಕು. ಎಲ್ಲರಿಗೂ ಸರಿಸಮಾನ ನ್ಯಾಯ ಕೊಡಬೇಕು. ಇದರ ಬಗ್ಗೆ ಸಿಎಂ ಆಲೋಚನೆ ಮಾಡಬೇಕು. ಇದನ್ನೆಲ್ಲ ನಿಯಂತ್ರಿಸದೇ ಕಲಹ ಪ್ರಿಯ ಮುಖ್ಯಮಂತ್ರಿ ಎಂಬುದಾಗಿ ಬಸವರಾಜ ಬೊಮ್ಮಾಯಿ ಹೆಸರು ಪಡೆದುಕೊಳ್ಳಬಾರದು ಎಂದರು.
ಇದನ್ನೂ ಓದಿ: ಗ್ರಾಮೀಣ ಮಟ್ಟದಿಂದಲೇ ಕ್ರೀಡೆ ಅಭಿವೃದ್ಧಿ, ಕ್ರೀಡಾ ಅಂಕಣ ಯೋಜನೆ ಜಾರಿ: ಸಚಿವ ಡಾ.ನಾರಾಯಣಗೌಡ
ಆಡಳಿತಾರೂಢ ಪಕ್ಷದಲ್ಲಿನ ಶಾಸಕರು, ಸಚಿವರು ಸಿಎಂ ಹತೋಟಿಯಲ್ಲಿಲ್ಲವೇ? ಅಥವಾ ಪಕ್ಷ ಹಾಗೂ ಪಕ್ಷದ ಅನುಯಾಯಿಗಳು ಹತೋಟಿಯಲ್ಲಿ ಇಲ್ಲವೇ? ಆರ್‌ಎಸ್‌ಎಸ್ ಹಾಗೂ ಭಜರಂಗದಳ ಕಂಟ್ರೋಲ್‌ನಲ್ಲಿ ಇಲ್ಲ. ಸಿಎಂ ತಮ್ಮ ಕರ್ತವ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದರು.
ಡಿಕೆಶಿ, ಸಿದ್ದರಾಮಯ್ಯ ನಾಯಕತ್ವದ ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮೊಯ್ಲಿ, ಅವರವರ ಜವಾಬ್ದಾರಿಯನ್ನು ಅವರು ನಿರ್ವಹಿಸಿಕೊಂಡು ಹೋಗಬೇಕು. ಇದರಲ್ಲಿ ಜಗಳ ಇಲ್ಲ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಪಾರದರ್ಶಕ ಆಡಳಿತ ಕೊಡುತ್ತೇವೆ. ಜನರಿಗೆ ವಿಶ್ವಾಸ ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ. ಕಾಂಗ್ರೆಸ್‌ನಲ್ಲಿ ಕೇಂದ್ರ ನಾಯಕರ ಹತೋಟಿ ಇದೆ ಎಂದರು.