Advertisement

ಮಾಜಿ ಸಿಎಂ ಸಿದ್ದರಾಮಯ್ಯರ ಸರ್ವಾಧಿಕಾರ ಧೋರಣೆ ನಡೆಯಲ್ಲ: ಕೆ.ಎಸ್.ಈಶ್ವರಪ್ಪ

08:56 AM Mar 01, 2020 | Mithun PG |

ಬಳ್ಳಾರಿ:  ಅಧಿವೇಶನ ನಡೆಯಲು ಬಿಡಲ್ಲ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯರ ಸರ್ವಾಧಿಕಾರ ಧೋರಣೆ ನಡೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಗ್ರಾ,ಪಂ,ಗಳಿಗೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೋಂದಿಗೆ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು ಅಧಿವೇಶನ ನಡೆಯಲು ಬಿಡಲ್ಲ ಎಂದು ಯಾವ ಲೆಕ್ಕದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಯಿಸಂ ನಡೆಯಲ್ಲ. ಅವರ ಏನೇ ವಿಷಯ ಇದ್ದರೂ ಸಭೆಯಲ್ಲಿ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಗೂಂಡಾಗಳು ಹೇಳಿದಂತೆ ಅಧಿವೇಶನ ನಡೆಯಲು ಬಿಡಲ್ಲ ಎಂದು ಸಿದ್ದರಾಮಯ್ಯ ಹೇಳಬಾರದು. ಅವರು ಬರಲಿ, ಬಿಡಲಿ ಅಧಿವೇಶನ ಸಭೆ ನಡೆಯಲಿದೆ ಎಂದು ತಿರುಗೇಟು ನೀಡಿದರು.

ರಾಜಕೀಯ ಪಕ್ಷ ಅಂದರೆ ಮರ್ಯಾದೆ ಇರಲ್ವಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಜಗತ್ತೇ ಗೌರವಿಸುವ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲೆಗಡುಕ ಅಂದ್ರೆ ಸುಮ್ಮನೆ ಇರೋಕೆ ಆಗುತ್ತದಾ? ಮುಖ್ಯಮಂತ್ರಿಯಾದವರು ಹೀಗೆ ಹೇಳಿದರೆ ಹೇಗೆ ? ಎಂದು ಮರು ಪ್ರಶ್ನಿಸಿದರು.

ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಬಿಜೆಪಿ ಸೇರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ಶಾಸಕ ನಾಗೇಂದ್ರ ನಾನು ಸ್ನೇಹಿತರು. ಸ್ನೇಹದಿಂದ ಕಾರ್ಯಕ್ರಮಕ್ಕೆ ಕರೆದಿದ್ದೇನೆ. ಬರುವುದು ಬಿಡುವುದು ಅವರನ್ನೇ ಕೇಳಿ ಎಂದು ಜಾರಿಕೊಂಡರು.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನರೇಗದಲ್ಲಿ ಬರಬೇಕಾದ ಎಲ್ಲ ಬಾಕಿ ಬಂದಿದೆ. ವಿರೋಧ ಪಕ್ಷದವರು ಸುಮ್ಮನೆ ಕೂಗುತ್ತಿದ್ದಾರೆ ಎಂದು ತಿಳಿಸಿದರು.

Advertisement

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮತ್ತು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ನಡುವಿನ ಜಟಾಪಟಿಯನ್ನು ಹೆಚ್ಚು ಬೆಳಸದೆ ಅಲ್ಲಿಗೆ ಬಿಡಬೇಕು. ಒಬ್ಬರಿಗೊಬ್ಬರು ಹಾಗೇ ಮಾತನಾಡಬಾರದು. ಪ್ರಧಾನಿ ಮೋದಿಯವರನ್ನು ತೆಗಳುವುದು ಸರಿಯಲ್ಲ. ಯಾವ ವಿಚಾರವನ್ನು ಯಾರು ಕೂಡ ವ್ಯೆಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದರು. ಈ ವೇಳೆ ಶಾಸಕ ಬಿ.ನಾಗೇಂದ್ರ, ಜಿಪಂ ಸಿಇಒ ಕೆ.ನಿತೀಶ್, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ್, ತಾಪಂ ಇಒ ಎಂ.ಬಸಪ್ಪ, ಅಧ್ಯಕ್ಷರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next