ಬೆಂಗಳೂರು : ಬಾದಾಮಿ ಕ್ಷೇತ್ರದ ಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ಧ ರಾಜಕೀಯವಾಗಿ ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಬಿ. ಶ್ರೀರಾಮುಲು ಅವರು ಸರಣಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಸತತ ಐದು ಟ್ವೀಟ್ ಮಾಡುವ ಮೂಲಕ ರಾಜಕೀಯಕ್ಕಾಗಿ ವ್ಯಂಗ್ಯ, ಟೀಕೆ ಮಾಡುವುದನ್ನು ಬಿಟ್ಟು, ಕ್ಷೇತ್ರದ ಸಮಸ್ಯೆ ಬಗೆರಿಸುವ ನಿಟ್ಟಿನಲ್ಲಿ ಗಮನಹರಿಸಿ, ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಟ್ವೀಟ್‌ನಲ್ಲೇ ಕಿವಿಮಾತು ಹೇಳಿದ್ದಾರೆ.
“ಮಾನ್ಯ ಸಿದ್ದರಾಮಯ್ಯ ಅವರೇ ಬಾದಾಮಿ ಕ್ಷೇತ್ರದ ಕೆರೂರು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ಕಾರಣಕ್ಕೆ ನನ್ನ ಬಗ್ಗೆ ರಾಜಕೀಯ ಟೀಕೆ ಮಾಡಿದ್ದಿರಿ. ಆ ಆಸ್ಪತ್ರೆ ನಿಮ್ಮ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿರಲಿಲ್ಲವೇ? ಯಾವತ್ತಾದರೂ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದೀರಾ?
ನಿಮ್ಮ ವಿರುದ್ಧ ಬಾದಾಮಿಯಲ್ಲಿ ಸೋತಿರಬಹುದು. ಚಾಮುಂಡೇಶ್ವರಿಯಲ್ಲಿ ನೀವು ಸೋತಷ್ಟು ಹೀನಾಯವಾಗಿ ಸೋತಿಲ್ಲ. ಚಾಮುಂಡೇಶ್ವರಿ ಜನರನ್ನು ನೀವು ಮರೆತಂತೆ ನಾನು ಬಾದಾಮಿ ಜನರನ್ನು ನಾನು ಮರೆತಿಲ್ಲ. ಪ್ರವಾಹ ಬಂದಾಗ ನಿಮಗಿಂತ ಮೊದಲು ಹೋಗಿ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿದ್ದೇನೆ.
ನಿಮ್ಮ ಸರ್ಕಾರ ಐದು ವರ್ಷ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಒಂದುಕಾಲು ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರಿ? ನಾನು ಸಚಿವನಾಗಿ ನೂರು ದಿನ ಕಳೆದಿದೆ ಅಷ್ಟೆ. ವೈದ್ಯರು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದೇನೆ. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಆಸ್ಪತ್ರೆಗಳಿವೆ, ಎಷ್ಟು ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿದೆ ಎಂದು ಪತ್ರ ಕಳುಹಿಸಿಕೊಡಿ. ಹುದ್ದೆಗಳನ್ನು ಭರ್ತಿ ಮಾಡೋಣ. ರಾಜಕೀಯವನ್ನು ಚುನಾವಣೆಗಷ್ಟೇ ಸೀಮಿತವಾಗಿಡೋಣ. ಬಳಿಕ ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಅದನ್ನು ಬಿಟ್ಟು ಕೇವಲ ವ್ಯಂಗ್ಯ, ಟೀಕೆಗಳಿಂದ ಕ್ಷೇತ್ರದ ಸಮಸ್ಯೆ ಬಗೆಹರಿಯುವುದಿಲ್ಲ. ಜನರಿಗೆ ನ್ಯಾಯವೂ ಸಿಗುವುದಿಲ್ಲ. ಇನ್ನಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ’ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಿದ್ದಾರೆ.