Advertisement

ಸಿಎಂ ಕ್ಷೇತ್ರದಲ್ಲಿ ಮಾಜಿ ಸಿಎಂ ರೋಡ್‌ ಶೋ

02:06 PM Apr 15, 2018 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಜೆಡಿಎಸ್‌ ರಾಜಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರ್ಜರಿ ರೋಡ್‌ ಶೋ ಮೂಲಕ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

Advertisement

ಬೆಳಗ್ಗೆ 11ಗಂಟೆಗೆ ಹುಣಸೂರು ರಸ್ತೆಯಲ್ಲಿರುವ ಹಿನಕಲ್‌ಗೆ ಆಗಮಿಸಿದ ಎಚ್‌.ಡಿ.ಕುಮಾರಸ್ವಾಮಿ, ಗ್ರಾಮದ ಶ್ರೀನನ್ನೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಕುಮಾರಪರ್ವ ಯಾತ್ರೆಗಾಗಿ ಸಿದ್ಧಪಡಿಸಿರುವ ವಿಕಾಸ ವಾಹಿನಿಯನ್ನು ಏರಿದರು. ಕುಮಾರಸ್ವಾಮಿ ಹೋದ ಗ್ರಾಮಗಳಲ್ಲೆಲ್ಲಾ ತಳಿರು-ತೋರಣ ಕಟ್ಟಿ, ಗ್ರಾಮಸ್ಥರು ಪಟಾಕಿ ಸಿಡಿಸಿ, ಮಂಗಳವಾದ್ಯಗಳೊಂದಿಗೆ ಹೂವಿನ ಹಾರ ಹಾಕಿ, ಬಿಡಿ ಹೂಗಳನ್ನು ಎರಚಿ ಬರಮಾಡಿಕೊಂಡರು.

ಕ್ಷೇತ್ರದ ಅಭ್ಯರ್ಥಿ ಜಿ.ಟಿ.ದೇವೇಗೌಡರ ಜತೆಗೆ ಉರಿ ಬಿಸಿಲಿನಲ್ಲೂ ತೆರೆದ ವಾಹನದಲ್ಲಿ ನಿಂತು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರತ್ತ ಕೈಮುಗಿದು ಮತಯಾಚಿಸಿದರು. ನಂತರ ಕೋಟೆ ಹುಂಡಿ ಗ್ರಾಮಕ್ಕೆ ತೆರಳಿದ ಎಚ್‌.ಡಿ.ಕುಮಾರಸ್ವಾಮಿ, ಇನ್ನೂ ಹಲವು ಹಳ್ಳಿಗಳಲ್ಲಿ ರೋಡ್‌ ಶೋ ಮುಗಿಸಿ ಎಚ್‌.ಡಿ.ಕೋಟೆಯ ಜೆಡಿಎಸ್‌ ಸಮಾವೇಶಕ್ಕೆ ತೆರಳಬೇಕಿರುವುದರಿಂದ ಸಮಯದ ಅಭಾವದಿಂದ ಗ್ರಾಮದ ಒಳಗೆ ಇನ್ನೊಮ್ಮೆ ಬರುತ್ತೇನೆ,

ಎಲ್ಲರೂ ಜಿ.ಟಿ.ದೇವೇಗೌಡರಿಗೆ ಮತಹಾಕಿ ಎಂದು ಮನವಿ ಮಾಡಿ ಹೊರಡಲು ಮುಂದಾದಾಗ ಗ್ರಾಮಸ್ಥರು, ತಾವು ಗ್ರಾಮದ ಒಳಗೆ ಬರಲೇಬೇಕು ಎಂದು ಪಟ್ಟು ಹಿಡಿದರು. ಗ್ರಾಮಸ್ಥರ ಒತ್ತಾಯಕ್ಕೆ ಕಟ್ಟುಬಿದ್ದು ಕೋಟೆ ಹುಂಡಿ ಗ್ರಾಮದ ಒಳಗೆ ತೆರಳಿದ ಕುಮಾರಸ್ವಾಮಿ, ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದರು. 

ಅಲ್ಲಿಂದ ದಾರಿ ಪುರಕ್ಕೆ ಬಂದ ಕುಮಾರಸ್ವಾಮಿ ಅವರು ಗ್ರಾಮದ ಪ್ರವೇಶದ್ವಾರದಲ್ಲೇ ತೆರೆದ ವಾಹನದಲ್ಲಿ ನಿಂತು ಮತಯಾಚಿಸಿ ಮುನ್ನಡೆದರು. ಬರಡನಪುರದಲ್ಲಿ ನಂದಿ ಕಂಬ, ಮಂಗಳವಾದ್ಯಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಗ್ರಾಮದೇವತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ, ಜಿ.ಟಿ.ದೇವೇಗೌಡರಿಗೆ ಮತ ನೀಡುವಂತೆ ಮನವಿ ಮಾಡಿದರು.

Advertisement

ಬಳಿಕ ಮಾವಿನಹಳ್ಳಿಗೆ ತೆರಳಿದ ಅವರು ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತಯಾಚನೆ ಮಾಡಿದರು. ಜೆಡಿಎಸ್‌ನಲ್ಲಿದ್ದು ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಕಾಂಗ್ರೆಸ್‌ ಸೇರಿರುವ ಲಾಯರ್‌ ಸಿದ್ದೇಗೌಡರ ಸ್ವಗ್ರಾಮ ಮಾವಿನಹಳ್ಳಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.

ಅಲ್ಲಿಂದ ಜಯಪುರಕ್ಕೆ ಬಂದು ರೋಡ್‌ ನಡೆಸಿದ ಕುಮಾರಸ್ವಾಮಿ, ಗ್ರಾಮದ ದೇವಮ್ಮ ಚಿಕ್ಕ ಅಂಕೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮರ ನಡೆ- ಜೆಡಿಎಸ್‌ ಕಡೆ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಹಾರೋಹಳ್ಳಿ, ಗುಜ್ಜೆàಗೌಡನಪುರ, ಮಂಡನಹಳ್ಳಿ, ಮದ್ದೂರು ಹುಂಡಿ, ಮದ್ದೂರು, ಚುಂಚರಾಯನ ಹುಂಡಿ, ಎಸ್‌.ಕಲ್ಲಹಳ್ಳಿ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next