ಸಿಂಧನೂರು: ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಮೋದಿ ಹಾಗೂ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ರಾಜ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿ 150 ಸ್ಥಾನ ಗೆದ್ದು ನಿಶ್ಚಿತವಾಗಿ ಸರ್ಕಾರ ರಚಿಸುತ್ತೇವೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜೋಶಿ ಮುಂದಿನ ಸಿಎಂ’ ಕುರಿತು ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಅದನ್ನು ಪಕ್ಷ ನೋಡಿಕೊಳ್ಳುತ್ತದೆ. ಅಮಿತ್ ಶಾ, ನರೇಂದ್ರ ಮೋದಿ ಆ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ. ಈಗಲೇ ಪ್ರತಿಕ್ರಿಯಿಸುವುದು ಸರಿಯಲ್ಲ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಒಟ್ಟಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ಸ್ಪಷ್ಟ ಬಹುಮತ ಪಡೆಯುತ್ತೇವೆ. ಅ ಧಿವೇಶನದ ಬಳಿಕ ರಾಜ್ಯ ಪ್ರವಾಸ ಕೈಗೊಂಡಾಗ ಒಲವು ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ವಿಶೇಷವಾಗಿ ಪರಿಶಿಷ್ಟ ವರ್ಗ, ಪ.ಪಂಗಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಯೋಜನೆಗಳು ನಮಗೆ ದೊಡ್ಡ ಶಕ್ತಿ. ಮತ್ತೂಮ್ಮೆ ನಾವು ಅಧಿ ಕಾರಕ್ಕೆ ಬರುವುದು ಸ್ಪಷ್ಟ ಎಂದರು.
ಕಾಂಗ್ರೆಸ್‌ನಲ್ಲಿ ನಾವೇ ಸಿಎಂ ಎಂದು ಹೇಳಿಕೊಂಡು ಈಗಾಗಲೇ ತಿರುಕನ ಕನಸು ಕಾಣುತ್ತಿದ್ದಾರೆ. ಅವರ ಆಸೆ ಈಡೇರುವುದಿಲ್ಲ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ “ಬ್ರಾಹ್ಮಣ ಸಿಎಂ’ ಕುರಿತು ಹೇಳಿಕೆ ನೀಡಿದ್ದು ಸರಿಯಲ್ಲ. ಅವರು ಯಾಕೋ ಇತ್ತೀಚೆಗೆ ದಾರಿ ತಪ್ಪಿದ ಹೇಳಿಕೆ ನೀಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅವರ ಮೇಲೆ ಜನ ಇಟ್ಟಿರುವ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದರು.
ನನ್ನನ್ನು ಸೈಡ್‌ಲೈನ್ ಮಾಡಿಲ್ಲ:
ಬಿಜೆಪಿಯಲ್ಲಿ ನನ್ನನ್ನು ಸೈಡ್‌ಲೈನ್ ಮಾಡಿದ್ದಾರೆಂಬುದು ಸುಳ್ಳು. ಆ ರೀತಿ ಯಾವುದೂ ಇಲ್ಲ. ಪಕ್ಷ ನನಗೆ ಕೇಂದ್ರ ಮಟ್ಟದಲ್ಲಿ ಸ್ಥಾನಮಾನ ಕೊಟ್ಟಿದೆ. ಎಲ್ಲ ರೀತಿಯ ಜವಾಬ್ದಾರಿಗಳನ್ನು ನೀಡಿದೆ. ಹೀಗಿರುವಾಗ ಸೈಡ್‌ಲೈನ್ ಮಾತೇ ಇಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನನ್ನ ಮೇಲೆ ವಿಶ್ವಾಸವಿಟ್ಟಿದ್ದು, ಅವರ ನಿರೀಕ್ಷೆಯಂತೆ ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆ ತರಲಾಗುವುದು ಎಂದು ಬಿಎಸ್‌ವೈ ಹೇಳಿದರು.