Advertisement
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ಬಿಜೆಪಿ ವಿಶ್ವಾಸ ಹೆಚ್ಚಾಗಿದೆ. ಪ್ರತಿಪಕ್ಷಗಳು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಆದರೆ, ರಾಜ್ಯದಲ್ಲಿ ಮತ್ತೆ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, 130-135 ಸ್ಥಾನಗಳನ್ನು ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ.
Related Articles
Advertisement
ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಭ್ರಮೆಯಲ್ಲಿ ಇಲ್ಲ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶಗಳನ್ನು ನೋಡಿದ್ದೀರಿ, ರಾಜ್ಯದ ಜನರು ಈಗಾಗಲೇ ಬಿಜೆಪಿಯನ್ನು ಹೊರಗಿಡಲು ತೀರ್ಮಾನಿಸಿದ್ದಾರೆ. ನೀವು ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ನಾವು ಜನರ ಭಾವನೆಗಳನ್ನು ನೋಡಿ ಹೇಳುತ್ತಿದ್ದೇವೆ ಎಂದರು.
ಅವರ ಮಾತಿಗೆ ತಿರುಗೇಟು ನೀಡಿದ ಯಡಿಯೂರಪ್ಪ ಈ ಬಾರಿ ಚುನಾವಣೆ ಪ್ರಚಾರಕ್ಕೆ ನೀವೂ ಬನ್ನಿ, ನಾವೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಅವರ ಬಜೆಟ್‌ನ ಯೋಜನೆಗಳನ್ನು ಇಟ್ಟುಕೊಂಡು ರಾಜ್ಯ ಪ್ರವಾಸ ಮಾಡುತ್ತೇವೆ. ಇಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಮುಖ್ಯವಲ್ಲ. ನಾನೂ ಮುಖ್ಯಮಂತ್ರಿಯಾಗಬೇಕೆಂದೇನಿಲ್ಲ. ನಾನು ಈಗಾಗಲೇ ಮುಖ್ಯಮಂತ್ರಿ ಸ್ಥಾನ ನೋಡಿಯಾಗಿದೆ. ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಯಾರೂ ನಾಯಕರಿಲ್ಲ. ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲದಂತಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಹೇಳಿದರು.
ಮತ್ತೆ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಅವರಿಗೆ ಸತ್ಯ ಗೊತ್ತಿದ್ದರೂ, ಈ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಕ್ತ ಮಾಡಿದಾಗಲೇ ರಾಜ್ಯದ ಜನರು ಕಾಂಗ್ರೆಸ್ ಅಧಿಕಾರಕ್ಕೆ ತರಲು ತೀರ್ಮಾನ ಮಾಡಿದ್ದಾರೆ. ಪಾಪ, ಯಡಿಯೂರಪ್ಪ ಅವರು ರಾಜೀನಾಮೆ ನೀಡುವಾಗ ಕಣ್ಣೀರು ಸುಮ್ಮನೆ ಬಂದಿಲ್ಲ. ಅವರಿಗೆ ನೋವಿದೆ. ಆ ನೋವಿನಿಂದ ಅವರು ವ್ಯಂಗ್ಯವಾಗಿ ಈಗ ಈ ರೀತಿಯ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶಂಪೂರ್, ನಮ್ಮದು ಪ್ರಾದೇಶಿಕ ಪಕ್ಷ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದೆ. ರೈತರ ಸಾಲ ಮನ್ನಾ, ಬಡವರ ಪರ ಯೋಜನೆಗಳನ್ನು ನೀಡಿರುವುದರಿಂದ ಮತ್ತೊಂದು ಬಾರಿ ನಮ್ಮವರೇ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, ಸಿದ್ದರಾಮಯ್ಯ ಅವರಿಗೆ ವಾಸ್ತವ ಗೊತ್ತಿದ್ದರೂ. ಅವರು ದೊಡ್ಡ ಧ್ವನಿಯಲ್ಲಿ ಹೇಳಿದರೆ ಜನರು ನಂಬುತ್ತಾರೆ ಎಂದು ಹೇಳುತ್ತಾರೆ. ಅವರು ಈ ಹಿಂದೆ ಯಡಿಯೂರಪ್ಪ, ಕುಮಾರಸ್ವಾಮಿ ನಮ್ಮಪ್ಪನ ಆಣೆ ಸಿಎಂ ಆಗುವುದಿಲ್ಲ ಎಂದಿದ್ದರು. ಆದರೆ, ಅವರಿಬ್ಬರೂ ಸಿಎಂ ಆದರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು. ಅವರೂ ಅಧಿಕಾರಕ್ಕೆ ಬರಲಿಲ್ಲ.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ದೇಶದ ಚಿತ್ರಣವನ್ನು ಬಿಂಬಿಸಿದೆ. ದೇಶದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವ, ಯಡಿಯೂರಪ್ಪ ಅವರ ವರ್ಚಸ್ಸು ಹಾಗೂ ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಒಂದು ಪಕ್ಷಕ್ಕೆ ಅಧಿಕಾರದಲ್ಲಿದ್ದು ಮತ್ತೆ ಅಧಿಕಾರಕ್ಕೆ ಬರುವುದು ದೊಡ್ಡ ಸವಾಲು, ಈಗ ನಡೆದ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಅದು ಅತ್ಯಂತ ಮುಖ್ಯ. ರಾಜ್ಯದಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.