Advertisement

Basavaraja Bommai; ಗ್ಯಾರಂಟಿ ಜಾರಿ ನೆಪದಲ್ಲಿ ಅನುದಾನ ಕಡಿತ ಬೇಡ

12:58 AM Jun 02, 2023 | Team Udayavani |

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲಸೌಕರ್ಯ, ರೈತರ, ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವುದು ಅಗತ್ಯ. ಈ ಇಲಾಖೆಗಳಿಗೆ ಕೊಡುತ್ತಿದ್ದ ಅನುದಾನಗಳನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

Advertisement

ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದರಲ್ಲಿ ಯಾವುದೇ ಹಣಕಾಸಿನ ಕಡಿತ ಮಾಡುವುದು ಸೂಕ್ತವಲ್ಲ. ರೈತರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಆವರ್ತ ನಿಧಿಯನ್ನು 3,500 ಕೋ. ರೂ.ಗೆ ಹೆಚ್ಚಿಸಲು 2023-24ರ ಆಯವ್ಯಯದಲ್ಲಿ 1,500 ಕೋಟಿ ಒದಗಿಸಲಾಗಿದೆ. ವಿವೇಕ ಯೋಜನೆ ಅಡಿಯಲ್ಲಿ 7,601 ಶಾಲಾ ಕೊಠಡಿಗಳು ಹಾಗೂ ಇತರ ಯೋಜನೆ ಅಡಿಯಲ್ಲಿ ಸೇರಿ ಒಟ್ಟು 9,556 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದು, ಇದಕ್ಕೆ ಅನುದಾನದ ಕಡಿತ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಉಚಿತ ಡಯಾಲಿಸಿಸ್‌ ಸೇವೆ ಒಂದು ಲಕ್ಷ ಅವಧಿಗೆ ವಿಸ್ತರಣೆ ಮಾಡಿದ್ದು, ಕ್ಯಾನ್ಸರ್‌ ಪೀಡಿತ ರೋಗಿಗಳಿಗೆ ಕಿಮೊ ಥೆರಪಿ ಸೈಕಲ್‌ಗ‌ಳನ್ನು ಹೆಚ್ಚಿಸುವಂಥದ್ದು ಮತ್ತು ಪಿಎಚ್‌ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.

ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್‌ಪಿ ಅನುದಾನವನ್ನು ಕಡಿತಗೊಳಿಸಬಾರದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕೆ ಅನುದಾನ ಕಡಿತಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗದ ಜಲಜೀವನ ಮಿಷನ್‌, ಗೃಹ ನಿರ್ಮಾಣ, ನೀರಾವರಿ ಯೋಜನೆ, ಪಂಚಾಯತ್‌ಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ ಪ್ರಗತಿ ಮೊಟಕುಗೊಳಿಸಬಾರದು ಹಾಗೂ ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು. ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಅನುದಾನವನ್ನು ಖಚಿತಪಡಿಸುವ ಜತೆಗೆ ಸಮಗ್ರ ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು. ರಾಜ್ಯದ ಜನತೆಯ ಮೇಲೆ ಅಪರೋಕ್ಷವಾಗಿ ಹೆಚ್ಚಿನ ಭಾರ ಬೀಳದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next