Advertisement

ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿಗಳಿಗೆ ಷರತ್ತು: ಬೊಮ್ಮಾಯಿ ಟೀಕೆ

09:30 PM Jul 10, 2023 | Team Udayavani |

ವಿಧಾನಸಭೆ: ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಬದಲು “ದೇತೋ… ದಿಲಾತೋ.. ದೇನೇವಾಲೋ ಕೋ ದಿಖಾತೋ’ ಎನ್ನುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

Advertisement

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಟೀಕಿಸಿದರಲ್ಲದೆ, ಅದರಲ್ಲಿನ ಹುಳುಕುಗಳನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟರು.

ಚುನಾವಣೆಗೂ ಮೊದಲು ನೀಡಿದ್ದ ಗ್ಯಾರಂಟಿ ಕಾರ್ಡ್‌ಗೂ, ಜಾರಿ ಹಂತದಲ್ಲಿರುವ ಗ್ಯಾರಂಟಿಗಳಿಗೂ, ರಾಜ್ಯಪಾಲರ ಭಾಷಣಕ್ಕೂ, ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ಗೂ ಭೂಮಿ-ಆಕಾಶದಷ್ಟು ಅಂತರವಿದೆ. ನುಡಿದಂತೆ ನಡೆಯದ, ಸ್ಪಷ್ಟ ನೀತಿ ಇಲ್ಲದ ಕವಲು ದಾರಿಯಲ್ಲಿ ಸರ್ಕಾರ ಸಾಗುತ್ತಿದೆ. ಇವರು ಆಡುವುದೊಂದು, ಮಾಡುವುದೊಂದು ಎಂದು ಹರಿಹಾಯ್ದರು.

ಎಷ್ಟು ದಿನ ಈ ನಗದು ಭಾಗ್ಯ?: ಆರಂಭದಲ್ಲಿ 10 ಕೆ.ಜಿ. ಅಕ್ಕಿ ಎಂದಿದ್ದವರು, ಹಣ ತಿನ್ನಲು ಸಾಧ್ಯವೇ ಎಂದೆಲ್ಲಾ ಪ್ರಶ್ನಿಸಿದ್ದವರು ಇದೀಗ 170 ರೂ. ಕೊಡುತ್ತಿದ್ದೀರಿ. ಅನ್ನಭಾಗ್ಯದ ಬದಲು ಇನ್ನೆಷ್ಟು ತಿಂಗಳು ಈ ನಗದು ಭಾಗ್ಯ ಕೊಡುತ್ತೀರಿ? ಕಾಳಸಂತೆ ದಂಧೆಕೋರರಿಗೆ ಕಡಿವಾಣ ಹಾಕದಿದ್ದರೆ, ಅನ್ನಭಾಗ್ಯವು ಕನ್ನಭಾಗ್ಯವಾಗಲಿದೆ ಎಂದು ಎಚ್ಚರಿಸಿದರು.

ನಕಲಿ ಡಿಪ್ಲೊಮಾ ಪ್ರಮಾಣಪತ್ರ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ, ಡಿಪ್ಲೊಮಾ ಪಡೆದು ಉದ್ಯೋಗ ಸಿಗದವರಿಗೆ ಯುವನಿಧಿ ಎಂದಿದ್ದೀರಿ. ಅನೇಕರು ನಕಲಿ ಡಿಪ್ಲೊಮಾ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಿದೆಯೇ? ನಿಜವಾದ ನಿರುದ್ಯೋಗಿಗಳಿಗೆ ಈ ಹಣ ತಲುಪುವ ಬದಲು ನಕಲಿ ಪ್ರಮಾಣಪತ್ರ ಹೊಂದಿರುವವರಿಗೆ ತಲುಪುವ ಅಪಾಯವಿದೆ. ಯುವಕರ ದಾರಿ ತಪ್ಪಿಸುವ ನಿಧಿ ಇದಾಗಲಿದೆ.

Advertisement

ಬಡವರ ಬದುಕಿಗೆ ಮಿತಿ ಹೇರಿದ ಗೃಹಜ್ಯೋತಿ: ಎಲ್ಲರಿಗೂ 200 ಯುನಿಟ್‌ ಉಚಿತ ವಿದ್ಯುತ್‌ ಎಂದಿದ್ದ ಸರ್ಕಾರ, ವಾರ್ಷಿಕ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿಯಾಗಿ 10 ಯುನಿಟ್‌ಗಳನ್ನಷ್ಟೇ ಬಳಸಲು ಮಿತಿ ಹೇರಿದೆ. ಈ ಮೂಲಕ ಜನರನ್ನು ಯಾಮಾರಿಸಿದೆ. ಬಡವರ ಆಸೆಗೆ ಮಿತಿ ಹೇರಿದೆ. ಹೀಗೇ ಆದರೆ, ಬಡತನದಿಂದ ಮೇಲೆ ಬರಲು ಅಗತ್ಯ ಮೂಲಸೌಕರ್ಯಗಳನ್ನು ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಗೃಹಲಕ್ಷ್ಮೀಗೆ ಗ್ರಹಣ, ಶಕ್ತಿಗೆ ಗರ: ಗೃಹಲಕ್ಷ್ಮೀ ಯೋಜನೆ ಇದುವರೆಗೆ ಬಾಲಗ್ರಹದಿಂದ ಹೊರಬರಲಾಗಿಲ್ಲ. ದುಡಿಯುವ ಶಕ್ತಿ ಇರುವ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯದಂತಹ ಯೋಜನೆಗಳಡಿ ನೆರವು ನೀಡುವ ಬದಲು ಅತ್ತೆ-ಸೊಸೆ ನಡುವೆ ಜಗಳ ಹಚ್ಚುವ ಯೋಜನೆ ಇದಾಗಿದೆ. ಇನ್ನು ಪುರುಷರಿಗೂ ಮಹಿಳೆಯರ ಹೆಸರಿನಲ್ಲಿ ಶಕ್ತಿ ಯೋಜನೆ ಟಿಕೆಟ್‌ ಸಿಗುತ್ತಿವೆ. ಇದೆಲ್ಲದರ ಬಗ್ಗೆ ಸರ್ಕಾರ ಲಕ್ಷ್ಯ ವಹಿಸಬೇಕಿದೆ.

ಆರ್ಥಿಕತೆ ಮೇಲೆ ಶಾಶ್ವತ ಭಾರ
ಗ್ಯಾರಂಟಿ ಜಾರಿಗೆ 52 ಸಾವಿರ ಕೋಟಿ ರೂ. ಖರ್ಚಾಗುವ ಅಂದಾಜು ಮಾಡಿದ್ದೀರಿ. ದೇಶ ಹಾಗೂ ರಾಜ್ಯದ ಆಂತರಿಕ ನಿವ್ವಳ ಉತ್ಪನ್ನ (ಜಿಎಸ್‌ಡಿಪಿ) ಹೆಚ್ಚಾಗಿರುವುದರಿಂದ ಹೆಚ್ಚುವರಿ ಸಾಲ ಮಾಡಲು ಸಾಧ್ಯವಾಗಿದೆ. ಪ್ರತಿ ವರ್ಷ ಈ 52 ಸಾವಿರ ಕೋಟಿ ರೂ. ಹೆಚ್ಚಾಗುತ್ತಲೇ ಹೋಗುತ್ತದೆ. ಜನರ ತೆರಿಗೆ ಹಣ ಹೇಗೆ ಬಳಸಬೇಕೆಂಬ ಬಗ್ಗೆ ಸರ್ಕಾರ ಯೋಚಿಸಬೇಕು. ಇದು ರಾಜ್ಯದ ಆರ್ಥಿಕತೆ ಮೇಲೆ, ಬಜೆಟ್‌ ಮೇಲೆ ಶಾಶ್ವತ ಭಾರ ಆಗಲಿದೆ. ಇದಕ್ಕೆ ಹೊಣೆಗಾರರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದರು.

10 ವರ್ಷದ ಭ್ರಷ್ಟಾಚಾರ ಪ್ರಕರಣಗಳ ತನಿಖೆ
ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿದ ನೀವು ಭ್ರಷ್ಟಾಚಾರ ಹೆಚ್ಚಾಗಿದೆ ಎಂಬುದನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದೀರಿ. ಎಸಿಬಿ ಮೂಲಕ ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಸಲಹಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ನಿಜಕ್ಕೂ ಭ್ರಷ್ಟಾಚಾರವನ್ನು ಕನಿಷ್ಠಗೊಳಿಸಬೇಕಿದ್ದರೆ 2013 ರಿಂದ 2023 ರವರೆಗಿನ 10 ವರ್ಷಗಳ ಭ್ರಷ್ಟಾಚಾರ ಪ್ರಕರಣಗಳನ್ನು ಆಯೋಗವೊಂದರ ಮೂಲಕ ತನಿಖೆಗೊಪ್ಪಿಸಿ ಎಂದು ಸವಾಲು ಹಾಕಿದರು.

ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುವುದರ ಜೊತೆಗೆ ಜಾತಿ ಮೀರಿ ಯೋಚಿಸಬೇಕು. ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಬಾರದು. ಇದು ನಿಜವಾದ ಜಾತ್ಯತೀತತೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು, ಪ್ರತಿಯೊಂದಕ್ಕೂ ರಾಜಕಾರಣ ಮಾಡುವುದು ಪ್ರಗತಿಪರ ಚಿಂತನೆಯೂ ಅಲ್ಲ, ನಾಯಕತ್ವ ಗುಣವೂ ಅಲ್ಲ.
-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next