Advertisement
ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ 19 ವೈರಸ್ ಮಹಾಮಾರಿ ನಿಯಂತ್ರಣಕ್ಕಾಗಿ ಬರೋಬ್ಬರಿ ಒಂದೂ ಮುಕ್ಕಾಲು ತಿಂಗಳ ಕಾಲ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ.
ಎಲ್ಲಾ ಹಳ್ಳಿಗೂ ತಲುಪಿಸಿ: ಲಾಕ್‌ಡೌನ್‌ದಿಂದ ಜನರು ಸಂಕಷ್ಟಕ್ಕೆ ಒಳಗಾಗಬಾರದು. ಎಲ್ಲ ಹಳ್ಳಿಯ ಜನರಿಗೂ ಅಗತ್ಯ ವಸ್ತುಗಳನ್ನು ತಲುಪಿಸಿ, ಏನೇ ಬೇಕಾದರೂ ತಮಗೆ ತಿಳಿಸಿ… ಎಂದು ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಹಾಗೂ ತಮ್ಮ ಖಾಸಾ ಶಿಷ್ಯ ಹೊಳೆಬಸು ಶೆಟ್ಟರ ಅವರಿಗೆ ಸಿದ್ದರಾಮಯ್ಯ ಫೋನ್ ಕರೆ ಮಾಡಿ ಹೇಳಿದ್ದರು. ಆಗ ಹೊಳೆಬಸು ಅವರು, ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಪ್ರಮುಖರನ್ನು ಕೂಡಿಸಿಕೊಂಡು, ಅಂದಿನಿಂದಲೇ ಸೇವೆ ಆರಂಭಿಸಿದರು.
ಅವರೊಂದಿಗೆ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಮುಖಂಡರಾದ ಎಂ.ಬಿ. ಹಂಗರಗಿ, ಎಂ.ಡಿ. ಯಲಿಗಾರ, ಪಿ.ಆರ್. ಗೌಡರ, ಭೀಮಸೇನ ಚಿಮ್ಮನಕಟ್ಟಿ, ಎಂ.ಎಚ್. ಚಲವಾದಿ, ಸಂಜಯ ಭರಗುಂಡಿ, ರಾಜಅಹ್ಮದ ಬಾಗವಾನ, ಡಾ|ಎಂ.ಜಿ. ಕಿತ್ತಲಿ, ಬಿ.ಬಿ. ಸೂಳಿಕೇರಿ, ಎನ್.ಬಿ. ಬನ್ನೂರ, ಅಡಿವೆಪ್ಪ ತಾಂಡೂರ, ಜುಗಲ್‌ಕಿಶೋರ ಭಟ್ಟಡ, ಆರ್.ಡಿ. ದಳವಾಯಿ, ಮಹೇಶ ಹೊಸಗೌಡರ, ಶಂಕರಗೌಡ ಪಾಟೀಲ, ಮಂಜು ಹೊಸಮನಿ, ಗ್ರಾಮೀಣ ಪ್ರದೇಶದ ಪ್ರಮುಖರಾದ ರಮೇಶ ಬೂದಿಹಾಳ, ಪ್ರಕಾಶ ಮೇಟಿ, ಎಫ್.ಆರ್. ಪಾಟೀಲ, ನಾಗಪ್ಪ ಅಡಪಟ್ಟಿ, ಹನಮಂತಗೌಡ ಯಕ್ಕಪ್ಪನವರ, ಈರಣಗೌಡ ಕರಿಗೌಡ, ಶ್ರೀಕಾಂತಗೌಡ ಗೌಡರ, ಯಮನಪ್ಪ ದೇವಮಾಳಿ, ಸಂಗಣ್ಣ ಜಾಬಣ್ಣನವರ, ವೆಂಕಣ್ಣ ಹೊರಕೇರಿ, ಕಾಮಣ್ಣ ಪೂಜಾರ, ನಾಗಪ್ಪ ಗೌಡರ, ಬಸವರಾಜ ಬ್ಯಾಹಟ್ಟಿ ಮುಂತಾದವರು ನಿತ್ಯವೂ ಇಡೀ ಕ್ಷೇತ್ರದ ಹಳ್ಳಿ-ಹಳ್ಳಿಗಳಿಗೆ ಆಹಾರಧಾನ್ಯ ತಲುಪಿಸುವ ಜವಾಬ್ದಾರಿ ಹೊತ್ತು ಕೆಲಸ ಮಾಡಿದರು. ಲಾಕ್‌ಡೌನ್ ವೇಳೆ ಇಡೀ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಖ್ಯಾತಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಪಾಲಾಯಿತು. ಇದು ಜಿಲ್ಲೆಯ ಇತರೇ ಕ್ಷೇತ್ರಗಳಿಗೆ ಪ್ರೇರಣೆಯೂ ಆಯಿತು. ಎಲ್ಲೆಡೆ ಬಡವರಿಗೆ ಸ್ಪಂದಿಸುವ ಕಾರ್ಯ ಹಲವರಿಂದ ನಡೆಯಿತು.
Related Articles
ಪಕ್ಷಾತೀತ ನೆರವು: ಬಾದಾಮಿ ಕ್ಷೇತ್ರದಲ್ಲಿ ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರ ಪಟ್ಟಣ ಸೇರಿ ಒಟ್ಟು 114 ಗ್ರಾಮಗಳಿದ್ದು, ಪ್ರತಿಯೊಂದು ಗ್ರಾಮದ ಜನರಿಗೆ ಇಂತಹ ಸಂಕಷ್ಟದ ಸಮಯದಲ್ಲಿ ಪಕ್ಷಾತೀತವಾಗಿ ನೆರವು ನೀಡಲಾಗಿದೆ. 114 ಹಳ್ಳಿಗೂ 30 ಸಾವಿರ ಕೆ.ಜಿ. ಅಕ್ಕಿಯಿಂದ ಪಲಾವ್ ತಯಾರಿಸಿ, ಪ್ರತಿ ಮನೆ ಮನೆಗೂ ವಿತರಿಸಲಾಗಿದೆ.
Advertisement
ಅಲ್ಲದೇ ಪ್ರತಿಯೊಂದು ಮನೆಗೂ ಸೇರಿ ಒಟ್ಟೂ 2.46 ಲಕ್ಷ ಮಾಸ್ಕ್ ಗಳನ್ನು ನೀಡಲಾಗಿದೆ. ಬಾದಾಮಿ, ಗುಳೇದಗುಡ್ಡ ಪಟ್ಟಣದ 17 ಸಾವಿರ ಕುಟುಂಬಗಳಿಗೆ ತಲಾ 2 ಕೆ.ಜಿ.ಗೋಧಿ, 2ಕೆ.ಜಿ ಜೋಳ, 1 ಕೆ.ಜಿ. ಸಕ್ಕರೆ, ಅರ್ಧ ಕೆ.ಜಿ. ಹುರುಳಿ ಕಾಳು, 1 ಸಾಬೂನು ಒಳಗೊಂಡ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಗಿದೆ.
ಕೆರೂರ ಪಟ್ಟಣದ 5,500 ಕುಟುಂಬಗಳಿಗೆ ತಲಾ 2 ಕೆ.ಜಿ. ಜೋಳ, 1 ಕೆ.ಜಿ. ಹುರುಳಿ ಕಾಳು, ಎರಡು ಸಾಬೂನು ಹಾಗೂ ಮಾಸ್ಕ್ ನೀಡಲಾಗಿದೆ. ಅಲ್ಲದೇ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ಎನ್-95 ಮಾಸ್ಕ್ ನೀಡಿರುವುದು ವಿಶೇಷ.
ರೈತರ ಸಂಕಷ್ಟಕ್ಕೂ ಸ್ಪಂದನೆ: ಲಾಕ್ ಡೌನ್‌ನಿಂದ ಬೆಳೆದ ಬೆಳೆ ಮಾರಲಾಗದೇ ಸಂಕಷ್ಟದಲ್ಲಿದ್ದ ರೈತರಿಂದ ನೇರವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಆಲೂಗಡ್ಡೆ, ಕ್ಯಾರೇಟ್ ಹಾಗೂ ಇತರೆ ತರಕಾರಿ ಸಾಮಗ್ರಿಗಳನ್ನು ಖರೀದಿಸಿ, 30 ಸಾವಿರ ಕೆ.ಜಿ. ಪಲಾವ್ ತಯಾರಿಸಲು ಬಳಸುವ ಜತೆಗೆ ನಗರ ಪ್ರದೇಶದ ಜನರಿಗೂ ಉಚಿತವಾಗಿ ವಿತರಣೆ ಮಾಡಲಾಗಿದೆ. ರೈತರ ತರಕಾರಿ ಖರೀದಿ ಮಾಡುವ ಮೂಲಕ ರೈತರು, ಜನರಿಗೂ ಅಭಿಮಾನಿಗಳ ಬಳಗ ನೆರವಾಗಿದೆ. ಗೋವಾ ಕನ್ನಡಿಗರಿಗೆ ನೆರವು: ಬಾದಾಮಿ ಕ್ಷೇತ್ರದ ಹಲವಾರು ಹಳ್ಳಿಗಳ ಜನ ಗೋವಾಕ್ಕೆ ದುಡಿಯಲು ಹೋಗುತ್ತಾರೆ. ಈಗಲೂ ಬಾದಾಮಿ ಕ್ಷೇತ್ರದ ಸುಮಾರು 1 ಸಾವಿರ ಕುಟುಂಬಗಳು, ಗೋವಾದಲ್ಲಿವೆ. ದುಡಿಯಲು ವಲಸೆ ಹೋಗಿರುವ ಕುಟುಂಬಗಳಿಗೆ 2 ಕೆ.ಜಿ. ಗೋಧಿಹಿಟ್ಟು, 2 ಕೆ.ಜಿ. ಜೋಳ, 1 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ, 1 ಕೆ.ಜಿ ಅಡುಗೆ ಎಣ್ಣೆ, 1 ಕೆ.ಜಿ ಹುರುಳಿ ಕಾಳು, ಹಸಿಮೆಣಸಿಕಾಯಿ ಮತ್ತು ಈರುಳ್ಳಿ ಒಳಗೊಂಡ ಅಗತ್ಯ ದಿನ ಬಳಕೆಯ ವಸ್ತುಗಳ ಕಿಟ್ ಕಳುಹಿಸಲಾಗಿದೆ. ಅವುಗಳನ್ನು ಪಡೆದ ಜನರು, ದೂರದಲ್ಲಿದ್ದರೂ ನಮ್ಮ ನೆರವಿಗೆ ಬಂದ ಸಿದ್ದರಾಮಯ್ಯ ಸಾಹೇಬರಿಗೆ ಕೋಟಿ ಕೋಟಿ ನಮನ ಎಂದು ಹಾರೈಸಿದ್ದಾರೆ.
ಎಂದೂ ಮರೆಯಲ್ಲ
ಇಂತಹ ಸಂಕಷ್ಟದಲ್ಲಿ ಸಹಾಯ ಮಾಡಿದ್ದನ್ನು ಎಂದೂ ಮರೆಯಲ್ಲ. ನಮ್ಮ ಮನೆಗೆ ಆಹಾರ ಧಾನ್ಯ ಕೊಟ್ಟರು. ಎರಡು ದಿನ ರೈಸ್ ಕಳುಹಿಸಿದ್ದರು. ಮಾಸ್ಕ್ ಗಳನ್ನೂ ನೀಡಿ, ಕೋವಿಡ್ ನಿಂದ ಎಚ್ಚರಿಕೆ ವಹಿಸಿ ಎಂದು ನಮ್ಮ ಕಾಳಜಿ ಮಾಡಿದರು. ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಈ ಸಹಾಯ ಎಂದೂ ಮರೆಯಲ್ಲ.
– ಹನಮವ್ವ ಸಂಗನಗೌಡ ಗೌಡರ, ಹಿರೇಮುಚ್ಚಳಗುಡ್ಡ
– ಶಮನಬಿ ಹಸನಸಾಬ ಹುಲ್ಯಾಳ, ಹೊಸೂರು
ಪಕ್ಷದ ಪ್ರಮುಖರು, ಅಭಿಮಾನಿಗಳು ತಾವೇ ಸ್ವತಃ ಹಣ ಕೂಡಿಸಿ, 114 ಹಳ್ಳಿ ಜನರಿಗೂ ಆಹಾರ, ತರಕಾರಿ, ಮಾಸ್ಕ್ ನೀಡಿದ್ದಾರೆ. ಈ ಸೇವೆ ಮಾಡಿದ ಪ್ರತಿಯೊಬ್ಬರಿಗೂ ನಾನು ಅಭಿನಂದಿಸುತ್ತೇನೆ. ಜನರು ಲಾಕ್‌ಡೌನ್ ಅವಧಿ ಮುಗಿಯುವವರೆಗೂ ಮನೆಯಲ್ಲಿ ಇರಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಕೋವಿಡ್ 19 ವೈರಸ್ ಬಗ್ಗೆ ಜಾಗೃತಿ ವಹಿಸಬೇಕು.
– ಸಿದ್ದರಾಮಯ್ಯ, ಬಾದಾಮಿ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಲಾಕ್ ಡೌನ್‌ದಿಂದ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿ ಸಮಸ್ಯೆಯಲ್ಲಿದ್ದಾರೆ. ನಮ್ಮ ಕ್ಷೇತ್ರದ ಜನರಿಗೆ ದಿನ ಬಳಕೆಯ ವಸ್ತುಗಳ ತೊಂದರೆ ಆಗಬಾರದೆಂಬ ಉದ್ದೇಶದಿಂದ ಆಹಾರಧಾನ್ಯ, ಪಲಾವ್, ಮಾಸ್ಕ್ ವಿತರಣೆ ಮಾಡಲಾಗಿದೆ.
– ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಸಚಿವರು ಒಂದು ತಿಂಗಳ ಕಾಲ ಇಡೀ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಸಾಧ್ಯವಾದಷ್ಟು ನೆರವು ನೀಡಲಾಗಿದೆ. ಗೋವಾಕ್ಕೆ ದುಡಿಯಲು ಹೋಗಿರುವ ಕ್ಷೇತ್ರದ 1 ಸಾವಿರ ಕುಟುಂಬಗಳು ಸೇರಿದಂತೆ ಕ್ಷೇತ್ರದ 114 ಗ್ರಾಮಗಳ ಜನರಿಗೆ ವಿವಿಧ ವಸ್ತುಗಳ ಪೂರೈಕೆಗಾಗಿ ಸುಮಾರು 1 ಕೋಟಿವರೆಗೆ ಖರ್ಚು ಮಾಡಲಾಗಿದೆ. ಸಿದ್ದರಾಮಯ್ಯನವರು ನಿತ್ಯವೂ ಕ್ಷೇತ್ರದ ಜನರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಎರಡು ಬಾರಿ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಮಾಡಿದ್ದಾರೆ. ಬೇಸಿಗೆ ಇರುವುದರಿಂದ ಮಲಪ್ರಭಾ ನದಿಗೆ ನವಿಲುತೀರ್ಥ ಡ್ಯಾಂನಿಂದ ನೀರನ್ನೂ ಬಿಡಿಸಿದ್ದಾರೆ.
– ಹೊಳೆಬಸು ಶೆಟ್ಟರ, ಮುಖಂಡರು, ಸಿದ್ದರಾಮಯ್ಯ ಅಭಿಮಾನಿಗಳ ಬಳಗ, ಗುಳೇದಗುಡ್ಡ- ಬಾದಾಮಿ