ಬಲೂಚಿಸ್ತಾನ : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಖರಾನ್ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬಲೂಚಿಸ್ತಾನ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಂಜೆ ಪ್ರಾರ್ಥನೆ ಸಲ್ಲಿಸಿದ ನಂತರ ಮಾಜಿ ಮುಖ್ಯ ನ್ಯಾಯಮೂರ್ತಿ ಮಸೀದಿಯ ಹೊರಗೆ ಬರುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ.
ದಾಳಿಕೋರರು ನ್ಯಾಯಮೂರ್ತಿ ಮುಹಮ್ಮದ್ ನೂರ್ ಮಸ್ಕಂಜೈ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖರಾನ್ ನಗರದಿಂದ ಸುಮಾರು 280 ಕಿ.ಮೀ ದೂರದಲ್ಲಿರುವ ಕ್ವೆಟ್ಟಾದಲ್ಲಿರುವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಸ್ಕಂಜೈ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಉಪ ಮಹಾನಿರೀಕ್ಷಕ ನಜೀರ್ ಅಹ್ಮದ್ ಕುರ್ದ್ ಅವರು ಮಾಜಿ ನ್ಯಾಯಮೂರ್ತಿ ಮುಹಮ್ಮದ್ ನೂರ್ ಮಸ್ಕಂಜೈ ಅವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುತ್ತಿದ್ದಾಗ ಅಪರಿಚಿತರ ತಂಡ ಗುಂಡಿನ ದಾಳಿ ನಡೆಸಿದ್ದಾರೆ, ಗುಂಡಿನ ದಾಳಿಯಲ್ಲಿ ಮತ್ತಿಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
ಉದ್ದೇಶಿತ ದಾಳಿಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಭಾರಿ ಮಳೆ: ದೂದ್ ಸಾಗರ ಜಲಪಾತದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ