ನವದೆಹಲಿ: ಕೇಂದ್ರ ಮಾಜಿ ಸಚಿವ, ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ಬಾಬುಲ್ ಸುಪ್ರಿಯೋ ಅವರು ಶನಿವಾರ (ಸೆಪ್ಟೆಂಬರ್ 18) ಬಿಜೆಪಿಯನ್ನು ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು: ಶಾರ್ದೂಲ್ ಠಾಕೂರ್
ಕೇಂದ್ರ ಸಚಿವ ಸಂಪುಟದಿಂದ ಬಾಬುಲ್ ಸುಪ್ರಿಯೋ ಅವರನ್ನು ಕೈಬಿಟ್ಟಾಗ, ತಾನು ಯಾವುದೇ ಪಕ್ಷವನ್ನು ಸೇರ್ಪಡೆಯಾಗುವುದಿಲ್ಲ. ರಾಜಕೀಯದಿಂದ ದೂರ ಉಳಿಯುವುದಾಗಿ ಸುಪ್ರಿಯೋ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ಇಂದು ದಿಢೀರನೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜ್ಯಸಭೆ ಸಂಸದ ಡೇರಿಕ್ ಒಬ್ರಿಯೋ ಸಮ್ಮುಖದಲ್ಲಿ ಕೇಂದ್ರ ಮಾಜಿ ಸಚಿವ, ಮಾಜಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಟಿಎಂಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಸುಪ್ರಿಯೋ ಸೇರಿದಂತೆ ಒಟ್ಟು ಐದು ಮಂದಿ ಬಿಜೆಪಿ ಶಾಸಕರು ಪಕ್ಷವನ್ನು ತೊರೆದು ಟಿಎಂಸಿ ಸೇರ್ಪಡೆಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಶಾಸಕರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಟಿಎಂಸಿ ಮುಖಂಡ ಕುನಾಲ್ ಘೋಷ್ ತಿಳಿಸಿದ್ದಾರೆ.