ಚಿಕ್ಕಬಳ್ಳಾಪುರ: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಗಾದೆ ಮಾತು ಇದಕ್ಕೆ ಹೇಳಿರಬೇಕು, ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯುವಕ ಬಾದ್ಯತಾ ಸಂಘಗಳಿಗೆ ತಲಾ 10 ಸಾವಿರ ರೂ, ಸುತ್ತು ನಿಧಿ ಬಿಡುಗಡೆಗೊಳಿಸಿ ತಿಂಗಳೇ ಕಳೆದರೂ ಇಲ್ಲಿಯವರೆಗೂ ಜಿಲ್ಲೆಯಲ್ಲಿನ ಯುವಕರ ಸಂಘಗಳಿಗೆ ತಲುಪದೇ ಸಂಘದ ಪ್ರತಿನಿಧಿಗಳು ನಿತ್ಯ ಬ್ಯಾಂಕ್‌ಗಳತ್ತ ಸುತ್ತಿ ಸುಸ್ತಾಗುತ್ತಿದ್ದಾರೆ.
ಹೌದು, ಈ ಹಿಂದಿನ ಬಿಜೆಪಿ ಸರ್ಕಾರ ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ಗ್ರಾಮೀಣ ಭಾಗದ ಯುವ ಜನರ ಸಬಲೀಕರಣಕ್ಕಾಗಿ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಯುವಕರ ಜಂಟಿ ಬಾಧ್ಯತಾ ಸಂಘಗಳನ್ನು ರಚಿಸಿ ಸಂಘಗಳಿಗೆ ಆರ್ಥಿಕ ಬಲ ನೀಡಲು ತಲಾ 10 ಸಾವಿರ ರೂ., ಸುತ್ತಿ ನಿಧಿ ಬಿಡುಗಡೆಗೊಳಿಸಿದೆ. ಆದರೆ, ಜಿಲ್ಲಾ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುತ್ತುನಿಧಿ ಬಿಡುಗಡೆಗೂ ಹಿಂದೆ ಮುಂದೆ ನೋಡುತ್ತಿದೆ. 290 ಗುಂಪುಗಳ ರಚನೆ: ಜಿಲ್ಲೆಯಲ್ಲಿ ಪ್ರತಿ ಗ್ರಾಪಂಗೆ ತಲಾ ಎರಡಂತೆ ಒಟ್ಟು 157 ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ 314 ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಸಂಘಗಳನ್ನು ರಚಿಸಬೇಕು. ಆದರೆ, ಇಲ್ಲಿಯವರೆಗೂ 290 ಸಂಘಗಳನ್ನು ಮಾತ್ರ ರಚಿಸಲಾಗಿದೆ.
ಪ್ರತಿ ಸಂಘಕ್ಕೂ ತಲಾ 10 ಸಾವಿರ ರೂ., ಸುತ್ತುನಿಧಿ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಖಾತೆಗೆ ಬಿದ್ದಿದೆ. ಆದರೆ, ಸುತ್ತು ನಿಧಿ ಕೊಡಲು ಅಧಿಕಾರಿಗಳು ಇಲಾಖೆಗಳಿಗೆ ಸುತ್ತಿಸಿಕೊಳ್ಳುತ್ತಿರುವುದು ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಸಮಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಸಂಘಗಳು ರಚನೆಯಾಗಿ ಪ್ರತಿ ಸಂಘವೂ ಬ್ಯಾಂಕ್ ಖಾತೆ ತೆರೆದು ಅದರ ವಿವರಗಳನ್ನು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸಲ್ಲಿಸಿದರೂ ಸುತ್ತು ನಿಧಿಯು ಸಂಘಗಳ ಬ್ಯಾಂಕ್ ಖಾತೆಗೆ ತಲುಪದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚರ್ಚೆಗೆ ಗ್ರಾಸ: ಈ ಹಿಂದಿನ ಬಿಜೆಪಿ ಸರ್ಕಾರ ಯುವ ಜನರ ಸಬಲೀಕರಣಗೊಳಿಸುವ ದಿಕ್ಕಿನಲ್ಲಿ ಸ್ವ ಉದ್ಯೋಗದ ಜತೆಗೆ ಯುವ ಜನರಲ್ಲಿ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ಆ ಮೂಲಕ ಆರ್ಥಿಕ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತು ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾದ್ಯತಾ ಸಂಘಗಳನ್ನು ರಚಿಸಿ ಪ್ರತಿ ಸಂಘಕ್ಕೆ ತಲಾ 10 ಸಾವಿರ ಬಿಡುಗಡೆಗೊಳಿಸಿದ್ದರೂ ಜಿಲ್ಲೆಯ ಅನುಷ್ಠಾನ ಇಲಾಖೆ ಆಗಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಸುತ್ತಿನಿಧಿ ಬಿಡುಗಡೆಗೊಳಿಸದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ 34 ಯುವಕ ಸಂಘಗಳಿಗೆ ತಲಾ 10 ಸಾವಿರ ರೂ., ಸುತ್ತು ನಿಧಿಯನ್ನು ಬಿಡುಗಡೆಗೊಳಿಸಲಾಗಿದೆ. ಉಳಿದ ಸಂಘಗಳಿಗೆ ಸುತ್ತು ನಿಧಿ ಬಿಡುಗಡೆ ಮಾಡಲು ರಾಜ್ಯ ಕಚೇರಿಯಿಂದ ಸೂಚನೆ ಬಂದಿಲ್ಲ. ಸೋಮವಾರ ಸಭೆ ಇದ್ದು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
●ವಿಜಯಕುಮಾರ್, ಉಪ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
-ಕಾಗತಿ ನಾಗರಾಜಪ್ಪ