Advertisement

Karnataka: ಕಾಮಗಾರಿ ಅಂದಾಜುಗಳ ತಯಾರಿಕೆಗೆ ಅಧ್ಯಯನ ಸಮಿತಿ ರಚನೆ

08:51 PM Oct 21, 2023 | Team Udayavani |

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳು ಕೈಗೊಳ್ಳುವ ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸ ತಯಾರಿಸುವಿಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಸಲುವಾಗಿ ಅಧ್ಯಯನ ಸಮಿತಿಯೊಂದನ್ನು ರಚಿಸಲಾಗಿದೆ.

Advertisement

ಲೋಕೋಪಯೋಗಿ ಇಲಾಖೆ ನಿವೃತ್ತ ಪ್ರಧಾನ ಎಂಜಿನಿಯರ್‌ ಬಿ.ಗುರುಪ್ರಸಾದ್‌ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಲೋಕೋಪಯೋಗಿ ಇಲಾಖೆ (ನಬಾರ್ಡ್‌) ಅಧೀನ ಕಾರ್ಯದರ್ಶಿ ಕೆ.ಎಸ್‌.ಹರೀಶ್‌ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಜಂಟಿ ನಿಯಂತ್ರಕಿ ಎಂ.ಎಸ್‌. ಪದ್ಮಿನಿ ಅವರಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಸಮಿತಿಯ ದೈನಂದಿನ ಕಾರ್ಯನಿರ್ವಹಣೆಗೆ ಸೂಕ್ತ ಸ್ಥಳಾವಕಾಶ, ಅಧ್ಯಕ್ಷರಿಗೆ 2.50 ಲಕ್ಷ ರೂ. ಗೌರವಧನ ನಿಗದಿಪಡಿಸಿ ಆದೇಶ. ಕಾರ್ಯನಿಮಿತ್ತ ಕೈಗೊಳ್ಳುವ ಪ್ರಯಾಣಗಳಿಗೆ ನಿಯಮಾನುಸಾರ ಪ್ರಯಾಣಭತ್ಯೆ, ದಿನ ಭತ್ಯೆ ಪಾವತಿಸಲು ಆದೇಶದಲ್ಲಿ ಉಲ್ಲೇಖೀಸಲಾಗಿದೆ.

ಯೋಜನೆ ಮತ್ತು ವಿನ್ಯಾಸ ತಯಾರಿಸುವಲ್ಲಿನ ನ್ಯೂನತೆ, ಅವೈಜ್ಞಾನಿಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಕೆ, ಅಗತ್ಯವಿರುವ ಎಲ್ಲ ಐಟಂಗಳನ್ನೊಳಗೊಂಡ ಸಮಗ್ರವಾದ ಅಂದಾಜು ತಯಾರಿಸದೇ ಇರುವುದು, ಭೂಸ್ವಾಧೀನ ಪ್ರಕ್ರಿಯೆ, ಪರಿಸರ ಸಂಬಂಧಿತ ತೀರುವಳಿ ಮುಂತಾದ ಅಗತ್ಯವಿರುವ ಶಾಸನಬದ್ಧ ತೀರುವಳಿ ಸಕಾಲದಲ್ಲಿ ಪಡೆಯದೇ ಕಾಮಗಾರಿಗಳನ್ನು ಆರಂಭಿಸುವುದು, ಗುತ್ತಿಗೆ ಒಪ್ಪಂದದಲ್ಲಿ ನಿಖರವಾದ ಷರತ್ತುಗಳ ವಿಧಿಸುವ ಕೊರತೆಯಿಂದ ಉಂಟಾಗಿರುವ ವ್ಯಾಜ್ಯ ಸೇರಿ ಇನ್ನಿತರ ಕಾರಣಗಳಿಂದ ಕಾಮಗಾರಿಗಳ ಮೂಲ ಅಂದಾಜು ಮೊತ್ತ ಪರಿಷ್ಕರಣೆಗೊಂಡು ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಹಾಗೂ ಸರ್ಕಾರದ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನ್ಯೂನತೆಗಳನ್ನು ಗುರುತಿಸಿ ಸೂಕ್ತ ಸಲಹೆ ನೀಡಲು ಪರಿಣತರ ಸಮಿತಿಗೆ ಸೂಚಿಸಿದೆ.

ಸಮಿತಿಗೆ ವಹಿಸಿರುವ ಜವಾಬ್ದಾರಿಗಳು
* ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸ ತಯಾರಿಕೆಯಲ್ಲಿ ಸುಧಾರಣೆ.
* ಕಾಮಗಾರಿಗಳ ಸ್ವರೂಪ, ಭೂಒಡೆತನ ಹಾಗೂ ಕಾಮಗಾರಿಗೆ ಅಗತ್ಯವಿರುವ ಭೂಮಿಯು ಪರಿಮಾನ ಆಧರಿಸಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾಲಮಿತಿ ನಿಗದಿಪಡಿಸುವುದು
* 10 ಕೋಟಿ ರೂ. ವರೆಗೆ ಅಂದಾಜು ಮೊತ್ತದ ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸವನ್ನು ರೂಪಿಸಿ ಸಕಾಲದಲ್ಲಿ ಪೂರ್ಣಗೊಳಿಸಲು ಅನುಕೂಲ ಅಗುವಂತೆ ಶಿಫಾರಸು ಮಾಡಬೇಕು
* ಗುತ್ತಿಗೆದಾರರು ನ್ಯಾಯಾಲಯದಲ್ಲಿ ದಾವೆ ಹೂಡುವುದನ್ನು ತಡೆಯುವ ನಿಟ್ಟಿನಲ್ಲಿ ಕರಾರಿನಲ್ಲಿ ಸೂಕ್ತ ನಿಬಂಧನೆ ಅಳವಡಿಸುವುದು, ಇವುಗಳ ಜಾರಿಗೆ ಸಂಬಂಧಿಸಿದ ಇಲಾಖೆಗಳನ್ನೇ ಹೊಣೆಯಾಗಿ ಮಾಡುವುದು,
* ಪರಿಷ್ಕೃತ ಅಂದಾಜಿನ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲು ಕಾಲಮಿತಿ ನಿಗದಿಪಡಿಸುವುದು, ಅನುಮೋದನೆ ಪಡೆಯದೆ ಮಾಡಿದ ಖರ್ಚನ್ನು ನಿರ್ಬಂಧಿಸುವುದು
* ಮೂಲ ಅಂದಾಜು ಪರಿಷ್ಕೃತಗೊಳ್ಳುವುದನ್ನು ಮೊದಲೇ ಊಹಿಸಿ ಕಾಮಗಾರಿಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿಗಳ ಆಧಾರದ ಮೇಲೆ ಯಾವ ಹಂತದಲ್ಲಿ ಅಂದಾಜು ಪರಿಷ್ಕರಣೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಅನುಕೂಲ ಆಗಬೇಕು
* ಪ್ರಚಲಿತ ಅನುಸೂಚಿ ದರಗಳಿಗೆ ಅನುಗುಣವಾಗಿ ಅಂದಾಜುಗಳನ್ನು ತಯಾರಿಸಿ ಆಡಳಿತಾತ್ಮಕ ಅನುಮೋದನೆ ಪಡೆದ ನಂತರ ಟೆಂಡರ್‌ ಕರೆಯುವುದುಮ, ಮೂಲ ಅಂದಾಜು ತಯಾರಿಸುವಾಗ ಸಣ್ಣ-ಪುಟ್ಟ ಕಾಮಗಾರಿಯ ಅಂದಾಜು ಮೊತ್ತವನ್ನೂ ಸೇರಿಸಿಕೊಂಡೇ ತಯಾರಿಸಬೇಕು, ಕರಾರುವಾಕ್ಕಾದ ಅಂದಾಜು ತಯಾರಿಸಲು ಅಗತ್ಯವಿರುವ ಮಣ್ಣಿನ ಗುಣಪರೀಕ್ಷೆ, ಹೂಳೆತ್ತುವಿಕೆ, ಸ್ಥಳ ಪರಿವೀಕ್ಷಣೆಗಳನ್ನು ಯಾವ ಹಂತದಲ್ಲಿ ಕೈಗೊಳ್ಳಬೇಕೆಂಬುದನ್ನು ಕಡ್ಡಾಯಗೊಳಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next