Advertisement

ಅಕ್ರಮ ವಿದೇಶಿಯರ ಜಾಡು ಪತ್ತೆಗೆ ವಿಶೇಷ ತಂಡಗಳ ರಚನೆ

11:20 AM Jul 23, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಬಾಂಗ್ಲಾದೇಶಿಗರು ಮಾತ್ರವಲ್ಲದೆ, ಸಾವಿರಾರು ಮಂದಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವ ಕುರಿತು ಮಾಹಿತಿ ಇದ್ದು, ಈ ಕುರಿತು ಸಿಸಿಬಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಹೇಳಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಗಡಿ ಭಾಗಗಳಿಂದ ನುಸುಳಿಕೊಂಡು ಬೆಂಗಳೂರು ನಗರಕ್ಕೆ ಬಾಂಗ್ಲಾ ದೇಶದ ಪ್ರಜೆಗಳು ಸೇರಿದಂತೆ ಇತರೆ ದೇಶದ ಸಾವಿರಾರು ಪ್ರಜೆಗಳು ಬಂದು ಅಕ್ರಮವಾಗಿ ನೆಲೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿಯಿದೆ. ಬಾಂಗ್ಲಾ ಮತ್ತು ಇತರೆ ದೇಶದ ಪ್ರಜೆಗಳು ನಗರಕ್ಕೆ ಬಂದು ನಕಲಿ ದಾಖಲೆಗಳನ್ನು ನೀಡಿ ಆಧಾರ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಸಿಬಿಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಅಲ್ಲದೆ, ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಮಾಡಲು ವಿವಿಧ ಏಜೆನ್ಸಿಗಳ ಜತೆ ಮಾಹಿತಿ ವಿನಿಮಯ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇತ್ತೀಚೆಗೆ ಪಾಕಿಸ್ತಾನಿ ದಂಪತಿಯನ್ನು ಪತ್ತೆ ಹಚ್ಚಲಾಗಿದೆ.

ಇದರ ಜತೆಗೆ ಅಕ್ರಮವಾಗಿ ಬಂದು ನೆಲೆಸಿರುವ ವಿದೇಶಿ ಪ್ರಜೆಗಳು ಸುಲಭವಾಗಿ ಆಧಾರ್‌ ಕಾರ್ಡ್‌, ಗುರುತಿನ ಚೀಟಿ, ಪಾನ್‌ ಕಾರ್ಡ್‌ಗಳನ್ನು ಪಡೆಯುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅಕ್ರಮವಾಗಿ ನಗರಕ್ಕೆ ಬಂದು ಕಟ್ಟಡ ನಿರ್ಮಾಣ, ಹೊಟೇಲ್‌, ಮಾರುಕಟ್ಟೆ, ಮಾಲ್‌ಗ‌ಳು, ಬಾರ್‌ಗಳು, ಇನ್ನಿತರ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿಕೊಂಡಿರುವ ವಿದೇಶಿ ಪ್ರಜೆಗಳ ಪೈಕಿ ಕೆಲವರು ಮಾದಕ ವಸ್ತು ಮಾರಾಟ ಸೇರಿದಂತೆ ಕೆಲ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಸಹ ಕಂಡುಬಂದಿದೆ. ಈ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಜೂನ್‌ ಅಂತ್ಯದೊಳಗೆ 171 ಪ್ರಕರಣ: ನಗರದಲ್ಲಿ ವರ್ಷದ ಆರಂಭದಿಂದ ಇದುವರೆಗೂ 171 ಸರ ಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 144 ಪ್ರಕರಣ ಪತ್ತೆಯಾಗಿವೆ. ಸರಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶೇಷ ತನಿಖಾ ತಂಡ ಕೂಡ ರಚಿಸುವಂತೆ ಆಯಾ ವಲಯ ಹೆಚ್ಚುವರಿ ಪೊಲೀಸ್‌ ಆಯುಕ್ತರು ಹಾಗೂ ಡಿಸಿಪಿಗಳಿಗೆ ಸೂಚಿಸಲಾಗಿದೆ.

Advertisement

ಪೂರ್ವ ವಲಯದಲ್ಲಿ 135 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ  ಹಿಂದಿನ ವರ್ಷಗಳವು ಸೇರಿದಂತೆ 126 ಪ್ರಕರಣಗಳು ಪತ್ತೆ ಹಚ್ಚಲಾಗಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೇ ನಮ್ಮ 100 ಅನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ಹೇಳಿದ್ದಾರೆ.

ನನ್ನ ಕರ್ಮ ಭೂಮಿ ಕರ್ನಾಟಕ: ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಇತರರ ವಿರುದ್ಧ ಎಫ್ಎಆರ್‌ ದಾಖಲಿಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕು.

ಈ ನಿಟ್ಟಿನಲ್ಲಿ ನನ್ನ ಬೆಂಬಲ ನೂರಕ್ಕೆ ನೂರರಷ್ಟು ಇದೆ. ನಾನು ಪೊಲೀಸ್‌ ಆಯುಕ್ತನಾಗಿ ಈ ಮಾತನ್ನು ಹೇಳುತ್ತಿಲ್ಲ. ಇಲ್ಲಿಯೇ ನೆಲೆಸಿದ್ದೇನೆ. ಕನ್ನಡಕ್ಕೆ ಆದ್ಯತೆ ನೀಡಬೇಕಾದರೂ ಎಲ್ಲರೂ ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಇತರ ಭಾಷಿಕರನ್ನು ವಿರೋಧಿಸಬಾರದು ಎಂದರು.

“ನನ್ನ ಜನ್ಮ ಭೂಮಿ ಬೇರೆ ಇರಬಹುದು. ಆದರೆ, ಕರ್ನಾಟಕ ನನ್ನ ಕರ್ಮಭೂಮಿ. ನಮಗೆ ಖಾಕಿ ಹಾಕಿದ ಮೇಲೆ ಇದೇ ನಮ್ಮ ಧರ್ಮ ಆಗಿದೆ. ವೈಯಕ್ತಿಕವಾಗಿ ನಾವು ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸಿದರೆ ನಾವು ಕೂಡ ಸಹಕಾರ ನೀಡುತ್ತೇವೆ. ಆದರೆ, ಕಾನೂನು ಉಲ್ಲಂ ಸಿದರೆ ನಾವು ಕಟ್ಟು ನಿಟ್ಟಿನ ಕ್ರಮಕೈಗೊಳ್ಳುತ್ತೇವೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next