ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಫ್ಯಾಕ್ಟ್ ಚೆಕ್ ಪತ್ತೆಗೆ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ನಿಯೋಜಿ ಸುವ ಕುರಿತು ಚರ್ಚೆ ನಡೆದ ಬೆನ್ನಲ್ಲೇ ನಗರದ ಠಾಣಾ ಮಟ್ಟದಿಂದ ಪೊಲೀಸ್ ಆಯುಕ್ತರ ಕಚೇರಿ ವರೆಗೆ ಫ್ಯಾಕ್ಟ್ ಚೆಕ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕೆಲವೊಂದು ಪೋಸ್ಟ್‌ಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತವೆ. ಕೆಲವೊಂದು ವಿರೋಧ, ಪ್ರಚೋದನಾಕಾರಿ ಹಾಗೂ ತಪ್ಪು ಮಾಹಿತಿಯ ಪೋಸ್ಟ್‌ಗಳಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಠಾಣಾ ಮಟ್ಟದಿಂದ ಆಯುಕ್ತರ ಕಚೇರಿವರೆಗೆ 3 ಹಂತದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಠಾಣೆಯಲ್ಲಿ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ಇಬ್ಬರು ಸಿಬ್ಬಂದಿ ಆಯ್ಕೆ ಮಾಡಿ ತಂಡ ರಚಿಸಲಾಗಿದ್ದು, ಸಾಮಾಜಿಕ ಜಾಲತಾಣ ಗಳಲ್ಲಿ ಸುಳ್ಳು ಸುದ್ದಿ, ಪ್ರಚೋದನಾಕಾರಿ, ಪರ ಮತ್ತು ವಿರೋಧ ಪೋಸ್ಟ್‌ಗಳನ್ನು ಆ ಸಿಬ್ಬಂದಿ ಪತ್ತೆ ಹಚ್ಚಲಿದ್ದಾರೆ. ಇದೇ ರೀತಿ ಡಿಸಿಪಿ ಕಚೇರಿಯಲ್ಲಿ ಕೂಡ ಮತ್ತೂಂದು ಸಣ್ಣ ಮಟ್ಟದ ತಂಡ ಇದ್ದರೆ, ಆಯುಕ್ತರ ಕಚೇರಿ ಯಲ್ಲಿ ದೊಡ್ಡ ಮಟ್ಟದ ತಂಡ ಕಾರ್ಯ ನಿರ್ವಹಿಸಲಿವೆ ಎಂದು ವಿವರಿಸಿದರು.
ಸುಳ್ಳು ಸುದ್ದಿ ಪತ್ತೆ ಹಚ್ಚುವುದು ಹೇಗೆ?
ಠಾಣಾ ಮಟ್ಟದ ತಂಡ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಬರಹಗಳ ಬಗ್ಗೆ ಡಿಸಿಪಿ ಕಚೇರಿ ಯ ತಂಡಕ್ಕೆ ಮಾಹಿತಿ ನೀಡಲಿವೆ. ಆ ತಂಡ ಆಯುಕ್ತರ ಕಚೇರಿಯ ಘಟಕಕ್ಕೆ ವರದಿ ಮಾಡಲಿದೆ. ಕಚೇರಿಯ ಅತ್ಯಾಧುನಿಕ ಸಲಕರಣೆಗಳು ಹಾಗೂ ತಂತ್ರಜ್ಞಾನದ ಮೂಲಕ ತಪ್ಪು ಮಾಡಿದವರ ಪತ್ತೆ ಹಚ್ಚುವುದು ಸೇರಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ ನಕಲಿ ಖಾತೆ ಪತ್ತೆ ಹಚ್ಚಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಫೇಕ್ ನ್ಯೂಸ್ ವೈರಲ್ ಆದ ತಕ್ಷಣ ಪರಿಶೀಲನೆ
ಠಾಣೆ ಮತ್ತು ಡಿಸಿಪಿ ಹಾಗೂ ಆಯಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ತಂಡಗಳು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ವೈರಲ್ ಆದರೆ ಕೂಡಲೇ ಅವುಗಳನ್ನು ಪರಿಶೀಲಿಸಲಾಗುತ್ತದೆ. ಫ್ಯಾಕ್ಟ್ ಚೆಕ್ ಮಾಡಿ ಸ್ಪಷ್ಟೀಕರಣ ನೀಡಲಾಗುತ್ತದೆ. ಈ ಮೂಲಕ ಸತ್ಯಾಸತ್ಯತೆ ಜನರಿಗೆ ಮನವರಿಕೆ ಮಾಡಿಕೊಡುತ್ತವೆ. ಈಗಾಗಲೇ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಸುಳ್ಳು ಸುದ್ದಿಗಳನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂಬುದನ್ನು ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಬಿ.ದಯಾನಂದ್ ಹೇಳಿದರು.