Advertisement

ದಸರಾ ಪ್ರಾಧಿಕಾರ ರಚನೆ ಕೂಗು ಮುನ್ನೆಲೆಗೆ

04:02 PM Jun 13, 2023 | Team Udayavani |

ಮೈಸೂರು: ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಹಾಗೂ ಮುಖ್ಯಮಂತ್ರಿಗಳು ಮೈಸೂರಿನವರೇ ಆಗಿರುವುದರಿಂದ ಪಾರಂಪರಿಕ ನಗರಿ ಮೈಸೂರಿನ ಸಮಗ್ರ ಅಭಿವೃದ್ಧಿ ಹಾಗೂ ನಾಡಹಬ್ಬ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ದಸರಾ ಪ್ರಾಧಿಕಾರ ರಚನೆ ಆಗಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

Advertisement

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವ ಆಚರಣೆಗೆ ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಪ್ರಾಧಿಕಾರ ರಚನೆ ಕೂಗು ಕೇಳಿ ಬರುತ್ತಿದೆ. ದಸರಾವನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಆಚರಣೆ ಮಾಡಲು ಪ್ರತ್ಯೇಕ ಪ್ರಾಧಿಕಾರ ಅಗತ್ಯವಿದ್ದು, ಇದೀಗ ನೂತನ ಸರ್ಕಾರ ಪ್ರಾಧಿಕಾರವ ರಚ ನೆಗೆ ಮುಂದಾಗಬೇಕಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಯ ಪ್ರಾಧಿಕಾರ ರಚನೆ ಬೇಡಿಕೆಯನ್ನು ಈಡೇರಿಸಲಿ ಎನ್ನುವುದು ಮೈಸೂರಿಗರ ಬೇಡಿಕೆಯಾಗಿದೆ.

ವ್ಯವಸ್ಥಿತ ಆಚರಣೆಗೆ ಪೂರಕ: ದಸರಾವನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಮತ್ತಷ್ಟು ದುಡಿಸಿಕೊಳ್ಳಲು ದಸರಾ ಪ್ರಾಧಿಕಾರ ಅಗತ್ಯವಿದ್ದು, ಇದಕ್ಕಾಗಿ ಈ ಹಿಂದಿನ ಹಲವು ಅಧಿಕಾರಿಗಳು ಪೂರಕ ವರದಿ ನೀಡಿದ್ದರು ಅನುಷ್ಠಾನಗೊಂಡಿಲ್ಲ. ಪ್ರಚಾರ, ಸಿದ್ಧತೆ, ಗಣ್ಯರ ಆಹ್ವಾನ, ಅನುದಾನ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳು ದಸರಾ ವೇಳೆ ಎದ್ದುಕಾಣುತ್ತವೆ. ದಸರಾ ಆಚರಣೆಗೆ ಮೂರು ತಿಂಗಳು ಇರುವಂತೆ ಸಿದ್ಧತೆ ಆರಂಭಿಸಿದರೂ, ಎಲ್ಲವೂ ಬೆಂಗಳೂರಿನಲ್ಲಿ ನಡೆಯುವ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಣಯವಾಗಬೇಕಿದೆ. ಪರಿಣಾಮ ಕೊನೆಯ ಕ್ಷಣದವರೆಗೂ ಯಾವುದೇ ಕಾರ್ಯಕ್ರಮಗಳು ನಿಗದಿಯಾಗುವುದಿಲ್ಲ. ಜತೆಗೆ ಪ್ರತಿವರ್ಷ ಪ್ರಚಾರದ ಕೊರತೆ ಎದ್ದು ಕಾಣುತ್ತದೆ.

ಚಾ.ಬೆಟ್ಟ, ನಂಜನಗೂಡು ದೇಗುಲವೂ ಇರಲಿ: ಪ್ರಾಧಿಕಾರವನ್ನು ದಸರಾ ಉತ್ಸವಕ್ಕೆ ಕೇಂದ್ರೀಕರಿಸದೇ ಚಾಮುಂಡಿ ಬೆಟ್ಟ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಪ್ರಾಧಿಕಾರದ ವ್ಯಾಪ್ತಿಗೆ ತರ ಬೇಕಿದೆ. ಇದರಿಂದ ಪ್ರಾಧಿಕಾರಕ್ಕೆ ಅನುದಾನದ ಕೊರತೆಯೂ ನೀಗಲಿದೆ. ಈ ಎರಡೂ ದೇವಾಲಯಗಳಿಂದ ವರ್ಷದಲ್ಲಿ ಕೋಟ್ಯಂತರ ರೂ. ಹಣ ಸಂಗ್ರಹವಾಗಲಿದೆ. ಇದರಿಂದ ದೇಗುಲ ಅಭಿವೃದ್ಧಿಯ ಜತೆಗೆ ದಸರಾ ಆಚರಣೆಗೂ ಅನುದಾನ ಬಳಕೆ ಮಾಡಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯ.

ಸ್ವಚ್ಛ ನಗರಿಯನ್ನಾಗಿಸಲು ಸಹಕಾರಿ: ದಸರಾ ಸಮ ಯದಲ್ಲಿ ನಗರದ ರಸ್ತೆ, ಚರಂಡಿಗಳ ದುರಸ್ತಿ ಕಾರ್ಯ ಸೇರಿದಂತೆ ಹತ್ತಾ ರು ಕಾಮಗಾರಿಗಳು ಆರಂಭವಾಗಿ, ದಸರಾ ಮುಗಿದರೂ ಕೆಲಸಗಳು ಪೂರ್ಣವಾಗುವುದಿಲ್ಲ. ಇದರಿಂದ ದಸರೆಗೆ ಬರುವ ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ. ಒಂದು ವೇಳೆ ಪ್ರಾಧಿಕಾರ ಅಸ್ತಿತ್ವದಲ್ಲಿದ್ದರೆ ವರ್ಷದಲ್ಲಿ ಯಾವಾಗ ಬೇಕಾದರೂ ರಸ್ತೆ ದುರಸ್ತಿ, ಗುಂಡಿ ಮುಚ್ಚುವ ಕೆಲಸದ ಜತೆಗೆ ತ್ಯಾಜ್ಯ ವಿಲೇವಾರಿಗೆ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಬಹು ದಾಗಿದೆ. ಇದರಿಂದ ಮೈಸೂರನ್ನು ಮತ್ತಷ್ಟು ಸ್ವಚ್ಛವಾಗಿಡಲು ಸಹಕಾರಿಯಾಗಲಿದೆ.

Advertisement

ಪ್ರವಾಸೋದ್ಯಮಕ್ಕೂ ಪೂರಕ : ಹೆಚ್ಚು ಪ್ರವಾಸೋದ್ಯಮವನ್ನೇ ಅವಲಂಭಿಸಿರುವ ಮೈಸೂರಿನಲ್ಲಿ ಹತ್ತಾರು ಪ್ರೇಕ್ಷಣಿಯ ಸ್ಥಳಗಳು, ಧಾರ್ಮಿಕ ಕೇಂದ್ರಗಳಿವೆ. ಇದರ ಜತೆಗೆ ವರ್ಷಕ್ಕೊಮ್ಮೆ ನವರಾತ್ರಿಯಂದು ಆಚರಿಸುವ ದಸರಾ ಉತ್ಸವವನ್ನು ಕೇವಲ ಒಂಭತ್ತು ದಿನಗಳಿಗೆ ಸೀಮಿತಗೊಳಿಸದೇ ಪ್ರಾಧಿಕಾರ ರಚಿಸಿ ಕನಿಷ್ಠ 3 ತಿಂಗಳವರೆಗೆ ನಡೆಸಿದರೆ ಮೈಸೂರು ಜಿಲ್ಲೆ ಮಾತ್ರವಲ್ಲದೇ, ಸುತ್ತಲಿನ ಮೂರ್‍ನಾಲ್ಕು ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಾಗೆಯೇ ನೂರಾರು ಕೋಟಿ ರೂ. ಆರ್ಥಿಕ ವಹಿವಾಟಿಗೆ ಪೂರಕವಾಗಲಿದೆ.

ಅವಳಿ ನಗರ ಚಿಂತನೆಗೆ ಒತ್ತು: ಚಾಮುಂಡಿ ಬೆಟ್ಟ ಮತ್ತು ನಂಜನಗೂಡು ಶ್ರೀಕಂಠೇಶ್ವರ ದೇಗುಲವನ್ನು ದಸರಾ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆ ಮಾಡಿದರೆ ಮೈಸೂರು-ನಂಜನಗೂಡು ಅವಳಿ ನಗರ ಚಿಂತನೆಗೆ ಜೀವ ಬರಲಿದೆ. ಇದರಿಂದ ಸಹಜವಾಗಿಯೇ ನಂಜನಗೂಡು ವೇಗವಾಗಿ ಅಭಿವೃದ್ಧಿ ಕಾಣಲಿದೆ. ಜತೆಗೆ ಎರಡೂ ನಗರಗಳ ಸುತ್ತಲಿನ ಪ್ರವಾಸಿ ತಾಣಗಳೂ ಮತ್ತಷ್ಟು ಬೆಳವಣಿಗೆ ಕಾಣಲಿವೆ.

ಉಪ ಸಮಿತಿಗಳ ಗೊಂದಲಕ್ಕೆ ತೆರೆ: ಪ್ರತಿವರ್ಷ ದಸರಾ ಉತ್ಸವದಲ್ಲಿ ನಾಡಹಬ್ಬವನ್ನು ವ್ಯವಸ್ಥಿತವಾಗಿ ಆಚರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹತ್ತಾರು ಉಪ ಸಮಿತಿಗಳನ್ನು ರಚೆನೆ ಮಾಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದು, ಇಬ್ಬರ ನಡುವೆ ಸಹಮತ ಮೂಡದೇ ಒಂದಿಲ್ಲೊಂದು ಗೊಂದಲ ಉಂಟಾಗುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಈ ಎಲ್ಲಾ ಗೊಂದಲಗಳಿಗೆ ಪ್ರಾಧಿಕಾರ ರಚನೆ ಮದ್ದಾಗಲಿದೆ. ದಸರಾ ವೇಳೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ದರ್ಬಾರ್‌ ನಡೆಯುತ್ತಿದ್ದು, ಕೊನೆಯ ಕ್ಷಣದಲ್ಲಿ ಎಲ್ಲಾ ಕಾರ್ಯಕ್ರಮಗಳು ನಿರ್ಧಾರವಾಗುತ್ತವೆ. ಇದರಿಂದ ದೇಶ, ವಿದೇಶಗಳಿಂದ ನಿರೀಕ್ಷತ ಮಟ್ಟದ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫ‌ಲವಾಗುತ್ತಿದೆ. ಈ ಹಿನ್ನೆಲೆ ಪ್ರತಿವರ್ಷ ದಸರಾ ನಡೆಸಲು ಜಿಲ್ಲಾಧಿಕಾರಿಗೆ ಆದೇಶಿಸುವುದರ ಬದಲು, ವಿಶೇಷ ದಸರಾ ಅಧಿಕಾರಿ ಎಂದು ಶಾಶ್ವತವಾಗಿ ಘೋಷಿಸಿ ಪ್ರಾಧಿಕಾರ ರಚಿಸಿ ಎಂಬುದು ಮೈಸೂರಿಗರ ಬೇಡಿಕೆಯಾಗಿದೆ.

ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಸಂಬಂಧ ಶೀಘ್ರದಲ್ಲೇ ದಸರಾ ಉನ್ನತ ಸಮಿತಿ ಸಭೆ ಕರೆದು ತೀರ್ಮಾನ ಮಾಡುತ್ತೇವೆ. ಜತೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು. – ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

ನಾಡಹಬ್ಬ ದಸರಾ ಉತ್ಸವವನ್ನು ಯಾವುದೇ ಗೊಂದಲ ಇಲ್ಲದಂತೆ ವ್ಯವಸ್ಥಿತವಾಗಿ ಮಾಡಲು ಪ್ರಾಧಿಕಾರದ ಅಗತ್ಯವಿದೆ. ಇದಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಈಗ ಮೈಸೂರಿನವರೇ ಮುಖ್ಯಮಂತ್ರಿ ಆಗಿರುವುದರಿಂದ ನಮ್ನ ಬೇಡಿಕೆ ಈಡೇರುವ ನಂಬಿಕೆ ಇದೆ. ದಸರಾ ಪ್ರಾಧಿಕಾರದ ಜತೆಗೆ ಪ್ರವಾಸೋದ್ಯಮ ಪ್ರಾಧಿಕಾರವನ್ನೂ ರಚನೆ ಮಾಡಿದರೆ ಮೈಸೂರಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. – ಸಿ. ನಾರಾಯಣಗೌಡ, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಮೈಸೂರು

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next