ಹಗರಿಬೊಮ್ಮನಹಳ್ಳಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೈಕ ವ್ಯಾಪ್ತಿಯ ಜನರು ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಹೇಳಿದರು.
ಪಟ್ಟಣದ ಪಂಚಮಸಾಲಿ ಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹೈಕ ಯೋಜನೆಗಳ ಅನುಷ್ಠಾನ ಕಡೆಗಾಣಿಸುವ ಮೂಲಕ ಈ ಭಾಗದ ಜನರಿಗೆ ದ್ರೋಹವೆಸಗಿದೆ. ಸಿಎಂ ಸಿದ್ದರಾಮಯ್ಯ ಹೈಕ ಯೋಜನೆಗಳಿಗೆ ಮೀಸಲಾದ ಯೋಜನೆಗಳಿಗೆ ಶೇ.10ರಷ್ಟು ಅನುದಾನ ಒದಗಿಸಿಲ್ಲ ಎಂದು ಆರೋಪಿಸಿದರು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಿಗೆ ಕಾರ್ಯಕರ್ತರು ಮತ್ತು ಮುಖಂಡರು ಪರಸ್ಪರ ಸಂಕಲ್ಪ ಮಾಡಬೇಕು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿದ ಸಲಹೆಗಳನ್ನು ಶಾಸಕರು, ಸಂಸದರು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿರುವ 1896 ಬೂತ್‌ಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಕಾರ್ಯಕರ್ತರು ಪಕ್ಷದ ವಿಸ್ತಾರಕರ ಸಭೆಗಳನ್ನು ಮಾಡಿ, ಬೂತ್ ಮಟ್ಟದಿಂದ ಬಿಜೆಪಿ ಪಕ್ಷ ಬಲಗೊಳಿಸಿದ್ದಾರೆ. ಜಿಲ್ಲೆಯ ಒಂದು ಲಕ್ಷದ ಐವತ್ತಾರು ಸಾವಿರ ಮನೆಗಳ ಭೇಟಿ ಮಾಡಿ ಬಿಜೆಪಿ ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿದ್ದಾರೆ. ಪ್ರತಿ ಬೂತ್‌ನಲ್ಲಿ ಸರಾಸರಿ 82 ಮನೆಗಳನ್ನು ತಲುಪಲಾಗಿದೆ. ಇನ್ನೂ ಕೆಲವೆಡೆ ಕಾರ್ಯಕರ್ತರು ಶೇ.100ರಷ್ಟು ಕಾರ್ಯಕ್ರಮಗಳನ್ನು ಮುಗಿಸಬೇಕು ಎಂದರು. ವಿಸ್ತಾರಕರು ಮತ್ತು ಬೂತ್ ಪ್ರಮುಖರು ತಾವು ಮಾಡಿರುವ ಪ್ರಗತಿ ಬಗ್ಗೆ ಈ ವೇಳೆ ವಿವರಣೆ ಕೇಳಿ ಚರ್ಚೆ ನಡೆಸಿದರು.
ಮಾಜಿ ಶಾಸಕ ನೇಮರಾಜ್‌ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಎಸಿಬಿ ಅಧಿಕಾರವನ್ನು ಕಾಂಗ್ರೆಸ್ ಹಿತಾಸಕ್ತಿಗೆ ಬಳಕೆ ಮಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಿನಾಕಾರಣ ಕಾಂಗ್ರೆಸ್ ಸುಳ್ಳು ಆರೋಪದಲ್ಲಿ ತೊಡಗಿದೆ. ದುಷ್ಟ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನತೆ ಸ್ಪಷ್ಟವಾಗಿ
ತಿರಸ್ಕರಿಸುವುದು ನಿಶ್ಚಿತ. ದಿನಗೂಲಿ ಕಾರ್ಮಿಕರಿಗೆ ಪಕ್ಷದ ಟಿಕೆಟ್ ನೀಡಿದರೂ ಗೆಲುವಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ ಮಾತನಾಡಿ, ಕಾಂಗ್ರೆಸ್ ಮುಕ್ತ ಕರ್ನಾಟಕ ನನಸಾಗುವುದು ಖಚಿತ. ದೇಶದಲ್ಲಿ 5 ಲಕ್ಷ ಕೋಟಿ ಕಪ್ಪುಹಣ ಹೊರತೆಗೆದ ಹೆಗ್ಗಳಿಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದಾಗಿದೆ ಎಂದರು.
ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಎಲ್1 ಪ್ರಮುಖ ಬಿ.ರಾಮನಾಯ್ಕ, ಮಾಜಿ ಶಾಸಕರಾದ ಸೋಮಲಿಂಗಪ್ಪ, ಚಂದ್ರನಾಯ್ಕ, ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿ ಪ್ರಮೋದ್, ಮಂಡಲ ಅಧ್ಯಕ್ಷ ನರೇಗಲ್ ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಜೆ.ಬಿ.ಶರಣಪ್ಪ, ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ, ತಾಲೂಕು ಘಟಕದ ಪಾರ್ವತಿ ಸಂಗಪಟ್ಟಶೆಟ್ಟಿ, ರೋಹಿತ್, ಡಾ| ಅಜ್ಜಯ್ಯ, ಸಂದೀಪ್ ಇತರರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೂಜಪ್ಪ, ಕೆ.ಎ.ರಾಮಲಿಂಗಪ್ಪ, ಉಪಾಧ್ಯಕ್ಷ ಸಿದ್ದಲಿಂಗನಗೌಡ ನಿರೂಪಿಸಿದರು.