Advertisement

ನೆಲ-ಜಲ ವಿಷಯದಲ್ಲಿ ಪಕ್ಷಬೇಧ ಮರೆತು ಅಭಿವೃದ್ಧಿ

04:22 PM Apr 23, 2022 | Team Udayavani |

ಬಾಗಲಕೋಟೆ: ರಾಜ್ಯದ ನೀರಾವರಿ ಹಾಗೂ ನೆಲ ವಿಷಯದಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಿದ ಪರಂಪರೆ ನಮ್ಮಲ್ಲಿದೆ. ಬಿಜೆಪಿ ಸರ್ಕಾರವೂ ಕೂಡ ಈ ವಿಷಯದಲ್ಲಿ ಪರಂಪರೆ ಮುಂದುವರಿಸಲಿದೆ. ರಾಜ್ಯದ ಪ್ರಮುಖ ನೀರಾವರಿ ಯೋಜನೆಯಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ಪೂರ್ಣಗೊಳಿಸಲು ಮುಖ್ಯವಾದ ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಲು ಸರ್ವ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಕೆರೂರ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತ, ನೆಲ ಜಲಗಳ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಪರಂಪರೆ ಕರ್ನಾಟಕದಲ್ಲಿ ಇದೆ. ಅಭಿವೃದ್ಧಿ ಕಾರ್ಯಗಳು ನಿಗದಿತ ಅವಧಿಯಲ್ಲಿ ಆಗಬೇಕು. ಕೆರೂರು ಏತ ನೀರಾವರಿ ಯೋಜನೆಯು 2ನೇ ಹಂತದ ಕಾಮಗಾರಿಯ ಅನುಮೋದನೆಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆಲಮಟ್ಟಿ ಜಲಾಶಯ ಸರ್ವಪ್ರಯತ್ನ: ಬೀಳಗಿ ಮತ್ತು ಬಾದಾಮಿ ತಾಲೂಕಿನ 40 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಹಸಿರು ಸೀರೆ ಉಡಿಸುವ ಕನಸು ಕಾಣುತ್ತಿದ್ದೇವೆ. ಆ ಕೆಲಸವಾಗುವವರೆಗೂ ನಾವು ವಿಶ್ರಮಿಸುವುದಿಲ್ಲ. ಕರ್ನಾಟಕದ ನೀರಾವರಿಯೋಜನೆಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ನಡುವೆ ಸಿಲುಕಿದೆ. ಅಂತರರಾಜ್ಯ ನದಿ ವಿವಾದಗಳಿಂದ ಹಲವಾರು ತೊಂದರೆ ಅನುಭವಿಸುತ್ತಿದ್ದೇವೆ. ಆದಾಗ್ಯೂ ಕೂಡ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1 ಮತ್ತು 2 ಈಗಾಗಲೇ ಪೂರ್ಣಗೊಂಡಿದೆ. ಹಂತ 3 ಯೋಜನೆಗಳಡಿ ಮೂಲಭೂತ ಸೌಕರ್ಯಕ್ಕೆ ಅಗತ್ಯವಿರುವ ಕೆಲಸ ಮಾಡಲಾಗಿದೆ. 2009ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಮುಳವಾಡ, ಗುತ್ತಿ ಬಸವಣ್ಣ, ಚಿಮ್ಮಲಗಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಈಗ ಅದಕ್ಕೆ ನ್ಯಾಯಾಧೀಕರಣದ ಆದೇಶದಂತೆ ಅಧಿಸೂಚನೆ ಪಡೆದು ಯು.ಕೆ.ಪಿ ಹಂತ -3ಯೋಜನೆ ಆಗಬೇಕಾದರೆ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟ 524 ಮೀಟರ್‌ವರೆಗೆ ಎತ್ತರಿಸಬೇಕು. ಅದಕ್ಕೆ ಸರ್ವ ಪ್ರಯತ್ನ ಮಾಡುತ್ತೇವೆ ಎಂದರು.

ಅಭಿವೃದ್ಧಿ ಭಾಗ್ಯದ ಬಾಗಿಲು ತೆರೆಯುತ್ತೇವೆ: ಮುಳುಗಡೆಯಾದ ಪ್ರದೇಶಕ್ಕೆ ಪರಿಹಾರ ನೀಡಿ, ಈ ಭಾಗದ ಬಹುದಿನಗಳ ಬೇಡಿಕೆಯಂತೆ 13 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಇಡೀ ಉತ್ತರ ಕನಾಟಕ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದರು.

ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ನಿರಂತರವಾಗಿ ಇರುತ್ತದೆ. ಅದು ನಮ್ಮ ಬದ್ಧತೆ ಕೂಡ. ಜಲಸಂಪನ್ಮೂಲ ಸಚಿವ ಕಾರಜೋಳ ಅವರು ಈ ಯೋಜನೆಗಳಿಗೆ ವೇಗ ನೀಡಲು ಕಾರಣೀಭೂತರಾಗಿದ್ದಾರೆ. ಸಚಿವ ನಿರಾಣಿಯವರೂ ಸಹ ಒತ್ತಾಯ ಮಾಡಿ ಯೋಜನೆಗಳ ಅನುಮೋದನೆಗೆ ಕಾರಣೀಭೂತರಾಗಿದ್ದಾರೆ. ಬರುವ ದಿನಗಳಲ್ಲಿ ನೀರಾವರಿಯ ಹಲವು ಯೋಜನೆಗಳಿಗೆ ಆದ್ಯತೆ ಮೇರೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

Advertisement

ಬಾದಾಮಿಗಾಗಿ ಮಾಸ್ಟರ್‌ ಪ್ಲ್ಯಾನ್: ಬಾದಾಮಿ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೊದ್ಯಮಕ್ಕೆ ಪ್ರಸಿದ್ಧವಾಗಿದೆ. ಇದರ ಬೆಳವಣಿಗೆ ಅವಶ್ಯಕತೆ ಇದೆ. ಈಗಾಗಲೇ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ. ಇನ್ನಷ್ಟು ಅಭಿವೃದ್ಧಿ ಮಾಡಲು ನವೀಕೃತ ಮಾಸ್ಟರ್‌ ಪ್ಲ್ಯಾನ್ ರೂಪಿಸಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next