Advertisement

ವೈಕಲ್ಯ ಮರೆತು ಪದವಿಯಲ್ಲಿ ಪಾಸ್‌; ಚಿಕಿತ್ಸೆ ಪಡೆಯುವಲ್ಲಿ ಫೇಲ್‌!

11:38 PM May 17, 2019 | Sriram |

ಕುಂದಾಪುರ: ಗುಡ್ಡಮ್ಮಾಡಿ ದೇವಸ್ಥಾನದ ಸನಿಹದ ಆ ಇಳಿಜಾರಿನಲ್ಲಿ ಮರದ ಹಲಗೆಯಲ್ಲಿ ತಾಯಿಯೊಬ್ಬರು ಯುವತಿಯೊಬ್ಬರನ್ನು ಕೂರಿಸಿ ಎಳೆಯುತ್ತಿದ್ದರು. ನಿಯಂತ್ರಣ ತಪ್ಪಿ ಆಕೆ ಬಿದ್ದಾಗ ಆಕೆಯನ್ನು ಮತ್ತೆ ಕೂರಿಸಿ ಮೇಲೆ ಎಳೆದು ತಂದು ಮರವೊಂದಕ್ಕೆ ಆ ಯುವತಿಯನ್ನು ಆತು ನಿಲ್ಲಿಸಿದರು. ಅಲ್ಲಿಂದ ಆಕೆಯನ್ನು ತಾಯಿ ಎತ್ತಿ ಕೊಂಡು ತೋಟ-ಗದ್ದೆ ದಾಟಿ ದಾರಿಗೆ ಬಂದ ಬಳಿಕ ವೀಲ್‌ ಚೇರ್‌ನಲ್ಲಿ ಕೂರಿಸಿದರು. ಇದು ನಾಡಾ ಗುಡ್ಡೆಯಂಗಡಿ ಗ್ರಾ.ಪಂ.ನ ಗುಡ್ಡಮ್ಮಾಡಿ ದೇವಸ್ಥಾನ ಸಮೀಪದ ಸಾಲಾಡಿಯ ಅಮೃತಾ ಶೆಟ್ಟಿ (28) ಅವರ ಪರಿಸ್ಥಿತಿ. ಅವರು ಬಿಎ ಪದವೀಧರೆ. ಈಕೆ ಛಲದಿಂದ ಪದವಿ ಪಡೆದರೂ ವೈಕಲ್ಯಕ್ಕಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಲಾಗದೇ ಸೋತಿದ್ದಾರೆ. ಇನ್ನೊಬ್ಬರ ನೆರವಿಲ್ಲದೆ ಒಂದು ಹೆಜ್ಜೆ ಇಡಲಾಗದ ಈಕೆಗೆ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದಾರೆ ಎಂಬ ಆರೋಪ ಇದೆ.

Advertisement

ಸಾಧಕಿ
ಸಾಲಾಡಿಯ ಗೋಪಾಲ ಶೆಟ್ಟಿ ವಸಂತಿ ಅವರ ಮಗಳು ಅಮೃತಾ ಹುಟ್ಟುತ್ತಲೇ ವೈಕಲ್ಯಕ್ಕೆ ಒಳಗಾ ದವರಲ್ಲ. 8ನೇ ತರಗತಿಯಲ್ಲಿದ್ದಾಗ ದೈಹಿಕ ಸಮಸ್ಯೆ ಆಯಿತು. 9ನೇ ತರಗತಿ ಕೊಲ್ಲೂರು ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ಮುಗಿಸಿದರು. 10ನೇ ತರಗತಿಗೆ ಮನೆಯಲ್ಲೇ ಇದ್ದು ಕುಂದಾಪುರ ಜೂನಿಯರ್‌ ಕಾಲೇಜು ಮೂಲಕ ಕೋಚಿಂಗ್‌ ಇಲ್ಲದೆ ಪರೀಕ್ಷೆ ಬರೆದು 334 ಅಂಕ ಗಳಿಸಿದರು. ಮನೆಯಲ್ಲಿದ್ದೇ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 343 ಅಂಕ ಗಳಿಸಿದರು. ನಂತರ ಮೈಸೂರು ಮುಕ್ತ ವಿವಿಯಲ್ಲಿ ಬಿಎ ಪದವಿ ಪಡೆದರು.

ಜೋರಾದ ಸಮಸ್ಯೆ
ಒಂದಷ್ಟಾದರೂ ನಡೆಯುತ್ತಿದ್ದ ಅಮೃತಾ ಅವರಿಗೆ 2014ರಲ್ಲಿ ಸಮಸ್ಯೆ ತೀವ್ರವಾಯಿತು. ದವಡೆ ಜಾರಿದ ಕಾರಣ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 2 ಶಸ್ತ್ರ ಚಿಕಿತ್ಸೆ ನಡೆಯಿತು. ಬೆಂಗಳೂರಿನ ನಿಮ್ಹಾನ್ಸ್‌ ತಲುಪಿದಾಗ ಶಾಶ್ವತ ಚಿಕಿತ್ಸೆ ಇಲ್ಲ ಎಂದು ತಿಳಿದ ಬಳಿಕ ಫಿಸಿಯೋಥೆರಪಿ ಪಡೆಯುತ್ತಿರಬೇಕು, ಎರಡು ದಿನಕ್ಕೊಮ್ಮೆ ಇಂಜೆಕ್ಷನ್‌ ಬೇಕು ಎಂಬ ಸಲಹೆ ಪಡೆದು ಊರಿಗೆ ಬಂದರು.

ಅಮೃತಾ ಅವರಿಗೆ ಭುಜ ಹಾಗೂ ಸೊಂಟದಲ್ಲಿ ಬಲ ಇಲ್ಲ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಮಸ್ಕಿಲರಿ ಡಿಸ್ಟ್ರೋಫಿ ಎನ್ನುತ್ತಾರೆ. ವಂಶ ಪಾರಂಪರ್ಯ ಅಥವಾ ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಬರುವ ಅಪರೂಪದ ಕಾಯಿಲೆ.

ಎರಡು ದಿನಕ್ಕೊಮ್ಮೆ ಫಿಸಿಯೋಥೆರಪಿಗಾಗಿ ದೂರದ ಹೆಬ್ರಿಗೆ 1 ಸಾವಿರ ರೂ. ರಿಕ್ಷಾ ಬಾಡಿಗೆ ನೀಡಿ ಹೋಗ ಬೇಕಿತ್ತು. ಅಲ್ಲಿ ಚಿಕಿತ್ಸಾ ಕೇಂದ್ರ ಮುಚ್ಚಿದ ಬಳಿಕ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದರು. ಆದರೆ ಇಲ್ಲಿನ ವೈದ್ಯರು ನಿಮಗೆ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದರು. ಕಾರಣವನ್ನೂ ಕೊಡಲಿಲ್ಲ, ಆದರೆ ಅಮೃತಾ ಅವರಿಗೆ ಜೀವನದಲ್ಲಿ ಉತ್ಸಾಹ ಕುಗ್ಗಿರಲಿಲ್ಲ. ಆದರೆ ಅಮೃತಾ ಅವರಿಗೆ ಮನೆಗೆ-ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ವೀಲ್‌ ಚೇರ್‌ ಹೋಗುವಷ್ಟೂ ಜಾಗವಿಲ್ಲ. ದಾರಿಯಲ್ಲಿರುವ ಕಲ್ಲಿನ ಕಂಬ ತೆಗೆಸಿದ್ದರೂ ಸಾಕಿತ್ತು. ದಾರಿಗಾಗಿ ಕಂದಾಯ ಇಲಾಖೆಯಲ್ಲಿ ಮಾಡಿದ ಪ್ರಯತ್ನಗಳು ಕೈಗೂಡಲಿಲ್ಲ ಎಂದು ಬೇಸರಿಸುತ್ತಾರೆ.

Advertisement

ದಾನಿಗಳಿಗೆ ಮನವಿ
ಬಡತನದಲ್ಲಿಯೇ ಮನೆಯ ನಿರ್ವಹಣೆಯ ಜತೆ ಮಗಳ ಕಾಯಿಲೆಯ ಚಿಕಿತ್ಸೆ ವೆಚ್ಚವನ್ನು ಭರಿಸಬೇಕಾದ ಸ್ಥಿತಿ ಇದ್ದು ಸಹಾಯ ಮಾಡುವವರು ಅಮೃತಾ ಜಿ. ಶೆಟ್ಟಿ, ನಾಡಾ ವಿಜಯ ಬ್ಯಾಂಕ್‌ ಖಾತೆ ಸಂಖ್ಯೆ 115401010013163 (ಐಎಫ್‌ಎಸ್‌ಸಿ ಕೋಡ್‌ ವಿಐಜೆಬಿ0001154)ಕ್ಕೆ ಹಣ ಕಳುಹಿಸಬಹುದು.

ಬಡತನ
ಅಮೃತಾ ತಂದೆ ಗೋಕಾಕ್‌ನಲ್ಲಿ ಹೊಟೇಲ್‌ ಉದ್ಯೋಗಿ. ತಮ್ಮ ಮನೀಷ್‌ ಖಾಸಗಿ ಬಸ್ಸಿನಲ್ಲಿ ನಿರ್ವಾಹಕ. 2018ರಲ್ಲಿ ನಡೆದ ಅಪಘಾತದಲ್ಲಿ ಕಾಲಿಗೆ ಗಂಭೀರ ಗಾಯವಾಗಿ ಇನ್ನೂ ಖಾಯಂ ಉದ್ಯೋಗಿಯಾಗಿಲ್ಲ. ಅಮೃತಾ ನೆರವಿಗಾಗಿ ತಾಯಿ ಮನೆಯಲ್ಲೇ ಇದ್ದಾರೆ . ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದಾರೆ. ಆದರೆ ಸುಣ್ಣ ಬಣ್ಣ ಆಗಿಲ್ಲ. ಮನೆಯಡಿ ಬಿಟ್ಟರೆ ಬೇರೆ ಜಾಗ ಇಲ್ಲ. 2014ರವರೆಗೆ ಹೊರಗುತ್ತಿಗೆ ಆಧಾರದಲ್ಲಿ ಪಂಚಾಯತ್‌ನ ಕೆಲಸ ಮಾಡಿಕೊಡುತ್ತಿದ್ದರು. ಈಗ ಅದೂ ಇಲ್ಲ. ಸರಕಾರದ ಮಾಸಾಶನ ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ನೆರವು ಅಗತ್ಯವಿದೆ.

ಪರಿಶೀಲನೆ ನಡೆಸಲಾಗುವುದು
ಚಿಕಿತ್ಸೆ ನಿರಾಕರಿಸಲು ಕಾರಣಗಳಿಲ್ಲ. ಆದ್ದರಿಂದ ಈ ಕುರಿತು ಪರಿಶೀಲಿಸಲಾಗುವುದು. ಅಮೃತಾ ಅವರ ಚಿಕಿತ್ಸೆಗೆ ತತ್‌ಕ್ಷಣ ವ್ಯವಸ್ಥೆ ಮಾಡಲಾಗುವುದು.
-ಡಾ| ನಾಗಭೂಷಣ್‌ ಉಡುಪ,
ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ

-  ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next