Advertisement

ಮರೆಯದಿರಿ, ಸುರಕ್ಷಿತ ಹೂಡಿಕೆಗೆ ಮ್ಯೂಚುವಲ್ ಫಂಡ್ ಅತ್ಯುತ್ತಮ !

10:00 AM Jun 18, 2018 | udayavani editorial |

ನಾವು ಕಷ್ಟಪಟ್ಟು ಗಳಿಸಿ ಉಳಿಸುವ ಹಣ ಸದಾ ಸುರಕ್ಷಿತವಾಗಿರಬೇಕು ಎಂದು ನಾವು ಆಶಿಸುವುದು ಸಹಜವೇ. ಆದರೇ ಎಷ್ಟೋ ವೇಳೆ ಸುರಕ್ಷತೆಯನ್ನೇ ಮರೆತು ಹೆಚ್ಚಿನ ಲಾಭದಾಸೆಗೆ ಎಲ್ಲೆಲ್ಲೋ ಹಣ ಹೂಡುತ್ತೇವೆ. ಅದೃಷ್ಟ  ಕೈಕೊಟ್ಟಿತೆಂದರೆ ನಮ್ಮ ಕಷ್ಟದ ಗಳಿಕೆ – ಉಳಿಕೆ ನೀರಲ್ಲಿ ಮುಳುಗುವುದು ಖಚಿತ.

Advertisement

ಆದುದರಿಂದ ಕಷ್ಟದ ಉಳಿತಾಯವನ್ನು ಸುರಕ್ಷಿತ ಎನಿಸುವ ಮಾಧ್ಯಮದಲ್ಲಿ  ತೊಡಗಿಸುವುದು ಬಹಳ ಮುಖ್ಯ. ಮ್ಯೂಚುವಲ್ ಫಂಡ್ ಹೂಡಿಕೆ ಇಂತಹ ಅತ್ಯಂತ ಸುರಕ್ಷಿತ ಮಾಧ್ಯಮಗಳಲ್ಲಿ ಒಂದು. ಅತ್ಯಧಿಕ ಲಾಭ, ತೆರಿಗೆ ವಿನಾಯಿತಿಯ ಸೌಕರ್ಯ, ದೀರ್ಘಕಾಲ ಹೂಡಿಕೆಯಿಂದ ದೊಡ್ಡ ಗಾತ್ರಕ್ಕೆ ಬೆಳೆಯುವ ಉಳಿತಾಯ – ಇವೆಲ್ಲವೂ ಮ್ಯೂಚುವಲ್ ಫಂಡ್ ನ ಗುಣಲಕ್ಷಣ !

ಶೇರುಗಳಲ್ಲಿ  ನಾವು ನೇರವಾಗಿ ಹಣ ತೊಡಗಿಸುವುದೇನೋ ಸರಿ. ಆದರೆ ಶೇರು ವ್ಯವಹಾರ, ಶೇರು ಮಾರುಕಟ್ಟೆಯ ಏರಿಳಿತ ಮತ್ತು ಕಂಪೆನಿಗಳ ಲಾಭದಾಯಕ ಕಾರ್ಯ ನಿರ್ವಹಣೆ ಇವೆಲ್ಲದರ ಬಗ್ಗೆ ನಮಗೆ ಹೆಚ್ಚಿನ ಜ್ಞಾನ ಇರುವುದು ತುಂಬ ಅಗತ್ಯ.

ಯಾವುದೇ ಒಂದು ಕಂಪೆನಿಯ ಶೇರನ್ನು ಪಬ್ಲಿಕ್ ಇಶ್ಯೂ ಅಥವಾ ಸೆಕೆಂಡರಿ ಮಾರ್ಕೆಟ್‌ ನಲ್ಲಿ  ನಾವು ಖರೀದಿಸುವ ಮುನ್ನ ಆ ಕಂಪೆನಿಯ ಬಗ್ಗೆ ನಮಗೆ ಸರಿಯಾದ ಮಾಹಿತಿ, ತಿಳಿವಳಿಕೆ ಇರುವುದು ಅಗತ್ಯ. ಅಷ್ಟು ಮಾತ್ರ ಸಾಲದು; ಹಣ ಹೂಡಿದ ಅನಂತರದಲ್ಲಿ ಆ ಕಂಪೆನಿಯ ಲಾಭ, ನಷ್ಟ, ಕಾರ್ಯ ನಿರ್ವಹಣೆಯ ವೈಖರಿ, ಶೇರು ಮಾರುಕಟ್ಟೆಗಳಲ್ಲಿ ಆ ಕಂಪೆನಿಯ ಶೇರು ಧಾರಣೆಯ ಏರಿಳಿತ ಇತ್ಯಾದಿಗಳೆಲ್ಲವನ್ನೂ ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಇರಬೇಕಾಗುತ್ತದೆ. 

ಇವೆಲ್ಲವೂ ತುಂಬ ಕಿರಿಕಿರಿಯ ಮತ್ತು ಕಷ್ಟದ ಕೆಲಸ ಎಂಬ ಭಾವನೆ ಇರುವ ನಮ್ಮ ನಿಮ್ಮಂತಹ ಅನೇಕ ಸಾಮಾನ್ಯರು ಮ್ಯೂಚುವಲ್ ಫಂಡ್ ಗಳಲ್ಲಿ ಹಣ ತೊಡಗಿಸುವುದೇ ಉತ್ತಮ.

Advertisement

ಮ್ಯೂಚುವಲ್ ಫಂಡ್ ಗಳ ಲಾಕ್ ಇನ್ ಪೀರಿಯಡ್ ಮೂರು ವರ್ಷಗಳದ್ದಾಗಿರುತ್ತದೆ. ಎಂದರೆ ಹಣ ಹೂಡಿದ ಮೂರು ವರ್ಷಗಳ ತನಕ ಅದನ್ನು ಮುಟ್ಟುವಂತಿಲ್ಲ.  ಹಾಗಿದ್ದರೂ ಈ ಸ್ಕೀಮ್ ನಲ್ಲಿ ಹಣಕಾಸು ವರ್ಷವೊಂದರಲ್ಲಿ  ನಾವು ತೊಡಗಿಸುವ ಗರಿಷ್ಠ 1.50 ಲಕ್ಷ ರೂ. ಮೊತ್ತವು ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಮ್ಯೂಚುವಲ್ ಫಂಡ್ ಗಳಲ್ಲಿ ಹಲವಾರು ವಿಧಗಳಿರುತ್ತವೆ. ಓಪನ್ ಎಂಡೆಡ್, ಕ್ಲೋಸ್ ಎಂಡೆಡ್, ಡಿವಿಡೆಂಡ್ ಆಪ್ಶನ್, ಗ್ರೋತ್ ಆಪ್ಶನ್ ಮುಂತಾಗಿ ಹಲವಾರು ಪದ ಪುಂಜಗಳು ಇಲ್ಲಿ  ಹರಿದಾಡುತ್ತಿರುತ್ತವೆ. 

ಮಧ್ಯಮ ವರ್ಗದ, ತಿಂಗಳ ಸಂಬಳ ಪಡೆಯುವ ಬಹು ಸಂಖ್ಯಾತ ಹೂಡಿಕೆದಾರರಿಗೆ ಅತ್ಯಂತ ಪ್ರಶಸ್ತವಾದ ಮ್ಯೂಚುವಲ್ ಫಂಡ್ ಎಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್, ಅರ್ಥಾತ್ ELSS. ಇದರಲ್ಲಿಯೂ ಡಿವಿಡೆಂಡ್ ಆಪ್ಶನ್ ಇದೆ; ಗ್ರೋತ್ ಆಪ್ಶನ್ ಇದೆ. ನಾವು ಹೂಡಿದ ಹಣಕ್ಕೆ ಪ್ರತಿಯಾಗಿ ನಾವು ಪಡೆಯುವ ಯೂನಿಟ್ ಗಳ ಮೇಲೆ ನಮಗೆ ವರ್ಷಕ್ಕೊಮ್ಮೆ ಲಾಭ ಬೇಕು ಎಂದು ಅನ್ನಿಸಿದರೆ ಡಿವಿಡೆಂಡ್ ಆಪ್ಶನ್ ಅಂದರೆ ಲಾಭಾಂಶ ಪಡೆಯುವ ಆಯ್ಕೆಯನ್ನು ಒಪ್ಪಿಕೊಳ್ಳಬಹುದು. ಗ್ರೋತ್ ಆಪ್ಶನ್ ನಲ್ಲಿ ನಮ್ಮ ಲಾಭಾಂಶದಿಂದಲೂ ನಮಗೆ ಯೂನಿಟ್‌ ಗಳು ಸಿಗುತ್ತವೆ. ಹಾಗಾಗಿ ನಮ್ಮ ಯೂನಿಟ್‌ ಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. 

ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್‌ ಪ್ಲಾನ್‌ (ULIP) ನಲ್ಲಿ ಹಣ ಹೂಡುವ ಮೂಲಕ ನಮಗೆ ಹಲವು ಬಗೆಯ ಲಾಭ, ಪ್ರಯೋಜನ, ವಿಮೆ ಮುಂತಾದ ಅನುಕೂಲಗಳು ಇವೆ. ಒಂದು ಹಣಕಾಸು ವರ್ಷದಲ್ಲಿ ನಾವು ಆದಾಯ ತೆರಿಗೆಯ ಸೆ.80ಸಿ ಅಡಿ ಇಎಲ್ಎಸ್ಎಸ್ ಯೋಜನೆಯಲ್ಲಿ ಗರಿಷ್ಠ 1.50 ಲಕ್ಷ ರೂ. ಹೂಡಬಹುದು. ಇದರಿಂದ ನಮಗೆ ಆದಾಯ ತೆರಿಗೆ ವಿನಾಯಿತಿಯೂ ಸಿಗುತ್ತದೆ. ಇನ್ನೊಂದು ಮುಖ್ಯ ವಿಷಯವೇನೆಂದರೆ ದೀರ್ಘಾವಧಿಗೆ ಹಣ ಉಳಿತಾಯದ ಮೂಲಕ ಅತ್ಯಂತ ಲಾಭದಾಯಕವಾಗಿ ಅದನ್ನು ತೊಡಗಿಸುವ ಹಣಕಾಸು ಶಿಸ್ತು ಈ ಯೋಜನೆಯಲ್ಲಿದೆ.

ಆದಾಯ ತೆರಿಗೆ ಸೆ.80ಸಿ ಅಡಿ ELSS/ULIP ಮಾತ್ರವಲ್ಲದೆ ಬೇರೆ ಕೆಲವು ಹೂಡಿಕೆಗಳಿಗೂ ಅವಕಾಶವಿದ್ದು ಅವುಗಳನ್ನು ಕೂಡ ನಾವು ಅಗತ್ಯಾನುಸಾರ ಬಳಸಬಹುದಾಗಿದೆ. ಇವುಗಳಲ್ಲಿ ಮುಖ್ಯವಾಗಿ ಐದು ವರ್ಷಗಳ ಬ್ಯಾಂಕ್ ಠೇವಣಿ ಬಾಂಡ್‌ ಗಳು , ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನಾವು ಪಾವತಿಸುವ ಜೀವ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಮೊದಲ ಬಾರಿಗೆ ಗೃಹ ಸಾಲ ಪಡೆದವರು ಪಾವತಿಸುವ ಅಸಲು ಮೊತ್ತ, 12,000 ರೂ. ವರೆಗೆ ಇಬ್ಬರು ಮಕ್ಕಳ ಶಾಲಾ ಫೀಸು ಇತ್ಯಾದಿಗಳಿಗೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.

ಸೆ.80ಸಿ ಅಡಿ ನಮಗೆ ಸಿಗುವ ಆದಾಯ ತೆರಿಗೆ ರಿಯಾಯಿತಿಗೆ ಪರಿಗಣಿಸಲ್ಪಡುವ ಉಳಿತಾಯ ಮೊತ್ತ ಗರಿಷ್ಠ 1.50 ಲಕ್ಷ ರೂ. ಎನ್ನುವುದು ಮುಖ್ಯ. ತತ್ಪರಿಣಾಮವಾಗಿ 2.50 ಲಕ್ಷ ರೂ.ಗ ತೆರಿಗೆ ರಹಿತ ಆದಾಯವನ್ನು, ಸೆ.80ಸಿ ಲಾಭವನ್ನು ಬಳಸಿಕೊಂಡು ವರ್ಷಕ್ಕೆ 1.50 ಲಕ್ಷ ರೂ. ಉಳಿಸಿ ಹೂಡಿಕೆ ಮಾಡುವ ಮೂಲಕ 4.00 ಲಕ್ಷ ರೂ. ವರೆಗಿನ ನಮ್ಮ ಆದಾಯಕ್ಕೆ ನಾವು ತೆರಿಗೆ ಮುಕ್ತರಾಗುವುದಕ್ಕೆ ಅವಕಾಶವಿದೆ. 

ತೆರಿಗೆ ವಿನಾಯಿತಿಗೆ ಅವಕಾಶ ಕಲ್ಪಿಸುವ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ತೆರೆಯುವಲ್ಲಿ ನಮಗೆ ಹಲವಾರು ಪ್ರಯೋಜನಗಳಿವೆ. ಒಂದು ಹಣಕಾಸು ವರ್ಷದಲ್ಲಿ ತೆರಿಗೆ ವಿನಾಯಿತಿ ಪಡೆಯುವುದಕ್ಕೆ ಅವಶ್ಯವಿರುವಷ್ಟು ಮೊತ್ತವನ್ನು ನಾವು ಈ ಯೋಜನೆಯಲ್ಲಿ ಸಿಪ್ (SIP) ಮೂಲಕ ತಿಂಗಳ ಕಂತಿನಲ್ಲಿ ಹೂಡಬಹುದು.

SIP ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಎಂಬುದಾಗಿದೆ. ನಮ್ಮ ಬ್ಯಾಂಕ್ ಉಳಿತಾಯ ಖಾತೆಯ ಮೂಲಕವೂ ನಾವು ಸಿಪ್ ಕಂತು ಪಾವತಿಯನ್ನು ಸುಲಲಿತವಾಗಿ ಮಾಡಬಹುದಾಗಿದೆ – ನಮ್ಮ  ಬ್ಯಾಂಕಿಗೆ ಕೇವಲ ಒಂದು standing instruction ನೀಡುವ ಮೂಲಕ ! 

ಪ್ರತೀ ತಿಂಗಳೂ ನಾವು ಸಿಪ್ ಮೂಲಕ ಪಾವತಿಸುವ ಹಣಕ್ಕೆ ತಕ್ಕಷ್ಟು ಯೂನಿಟ್‌ ಗಳು ಆಯಾ ದಿನದಂದು ಇರುವ ಧಾರಣೆಯ ಪ್ರಕಾರ ನಮಗೆ ಮಂಜೂರಾಗುತ್ತದೆ. ಇದು ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ ಆಗಿರುವುದರಿಂದ ಶೇರು ಮಾರುಕಟ್ಟೆಯ ಏರಿಳಿತಗಳ ಪ್ರಭಾವ ಯೂನಿಟ್ ಧಾರಣೆಯ ಮೇಲೆ ಆಗುತ್ತದೆ.

ಹೇಗೆಂದರೆ ನಾವು ಪಾವತಿಸುವ ಸಿಪ್ ಮೊತ್ತವನ್ನು ಫಂಡ್ ಮ್ಯಾನೇಜರರು ವಿವಿಧ ಯೋಗ್ಯ  ಕಂಪೆನಿಗಳ ಭವಿಷ್ಯವನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿ, ಶೇರು ಮಾರುಕಟ್ಟೆಗಳ ಏರಿಳಿತಗಳ ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡು ನಮ್ಮ ಪರವಾಗಿ ಆ ಕಂಪೆನಿಗಳಲ್ಲಿ ಹೂಡುತ್ತಾರೆ. ದೀರ್ಘಾವಧಿಗೆ ಆ ಶೇರುಗಳನ್ನು ಹೊಂದಿರುತ್ತಾರೆ. ಅವುಗಳಿಂದ ಕಾಲಕಾಲಕ್ಕೆ  ದೊರಕುವ ಡಿವಿಡೆಂಡ್, ಬೋನಸ್ ಶೇರು ಮುಂತಾದ ಲಾಭಗಳನ್ನು ಪಡೆಯುತ್ತಿರುತ್ತಾರೆ. 

ಬುಲ್ ಮಾರ್ಕೆಟ್‌ ನಲ್ಲಿ   ಆ ಶೇರುಗಳ ಮಾರುಕಟ್ಟೆ ಧಾರಣೆ ಗಗನ ಮುಖೀಯಾಗುವಾಗ ಸರಿಯಾದ ಹೊತ್ತು ಗೊತ್ತುಪಡಿಸಿ ಅನುಕೂಲಕರ ಪ್ರಮಾಣದ ಶೇರುಗಳನ್ನು ಮಾರುತ್ತಾರೆ. ಮತ್ತು ಆ ಮೂಲಕ ಫಂಡ್ ಲಾಭ ಏರಿಸಲು ಶ್ರಮಿಸುತ್ತಾರೆ. ಇವೆಲ್ಲದರ ಫಲವಾಗಿ ಒಂದು ಮ್ಯೂಚುವಲ್ ಫಂಡ್ ನ ನಿರ್ದಿಷ್ಟ ಸ್ಕೀಮಿನ ಯೂನಿಟ್‌ ನ  NAV ಅಥವಾ ನೆಟ್ ಅಸೆಟ್ ವ್ಯಾಲ್ಯೂ ಏರುತ್ತದೆ. ಶೇರು ಮಾರುಕಟ್ಟೆ ಕುಸಿದಾಗ ಆ NAV ಏರಿಳಿತಗಳನ್ನು ಕಾಣುತ್ತಿರುತ್ತದೆ. ಈ NAV ಎನ್ನುವುದೇ ಮ್ಯೂಚುವಲ್ ಫಂಡ್ ನ ಯೂನಿಟ್‌ ನ ಮಾರುಕಟ್ಟೆಯ ದರವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next