ಬೆಂಗಳೂರು: ಬಾಂಗ್ಲಾದೇಶದಿಂದ ಅಕ್ರಮವಾಗಿ ಖೋಟಾ ನೋಟುಗಳನ್ನು ತಂದು ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಸಾಗಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸಬೀರುದ್ದೀನ್ (46) ಬಂಧಿತ. ಆತನಿಂದ 1 ಮೊಬೈಲ್ ಮತ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಾಲ್ಡಾ ಕೋರ್ಟ್‌ಗೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತರಲಾಗಿದೆ.
ಆರೋಪಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಖೋಟಾ ನೋಟುಗಳನ್ನು ತಂದು ಪಶ್ಚಿಮ ಬಂಗಾಳದ ಮಾಲ್ಡಾ ಮೂಲಕ ಬೆಂಗಳೂರಿನ ವಿವಿಧೆಡೆ ಚಲಾವಣೆ ಮಾಡುತ್ತಿದ್ದ. ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದ ಎನ್‌ಐಎ ಅಧಿಕಾರಿಗಳು 2018ರಲ್ಲಿ ಕರ್ನಾಟಕ ದೇವನಹಳ್ಳಿಯ ಎಂ.ಜಿ.ರಾಜು, ಬಾಗಲಕೋಟೆಯ ಮುಧೋಳ ತಾಲೂಕಿನ ಗಂಗಾಧರ್ ಕೊಲ್ಕಾರ್,
ಬೆಂಗಳೂರಿನ ವನೀತ್ ಅಲಿಯಾಸ್ ತಗಂ ಹಾಗೂ ಮಾಲ್ಡಾದ ಸಜ್ಜದ್ ಅಲಿ ಎಂಬವರನ್ನು ಬಂಧಿಸಿ, 6,84,000 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿತ್ತು. ನಂತರ ದೋಷಾರೋಪ ಪಟ್ಟಿ ಕೂಡ ಸಲ್ಲಿಸಿತ್ತು. ಆ ವೇಳೆ ಆರೋಪಿ ಸಬೀರುದ್ದೀನ್ ತಲೆಮರೆಸಿಕೊಂಡಿದ್ದ.
ಆತ ದೇಶದ ಗಡಿಭಾಗಗಳಲ್ಲಿ ತನ್ನ ದಂಧೆಯನ್ನು ವ್ಯಾಪಕವಾಗಿ ವಿಸ್ತರಿಸಿಕೊಂಡಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಏಳನೇ ಆರೋಪಿಯಾದ ಅಬ್ದುಲ್ ಖದೀರ್ ಎಂಬಾತ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.